ಡಿಜಿಟಲ್ ಅರೆಸ್ಟ್: ಪ್ರಧಾನಿ ಮೋದಿ ದೇಶದ ಜನತೆಗೆ ಎಚ್ಚರಿಕೆಯ ಪಾಠ; ಅವರು ನೀಡಿದ ಆ 3 ಟಿಪ್ಸ್ ಏನು? ಈ ಸ್ಟೋರಿ ಓದಿ
ನಿಮಗೆ ಯಾವುದೇ ಅಪರಿಚಿತ ವಿಡಿಯೋ ಕಾಲ್ (video call) ಬಂದರೆ ಗಾಬರಿಗೊಳ್ಳಬೇಡಿ. ಬದಲಿಗೆ ಸಮಾಧಾನದಿಂದ ಧೈರ್ಯವಾಗಿರಿ. ತಕ್ಷಣಕ್ಕೆ ಯಾವುದೇ ದುಡುಕಿದ ಅಥವಾ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಾಧ್ಯವಾದರೆ, ಈ ರೀತಿಯ ಕರೆಗಳು ಬಂದಾಗ ಫೋನ್‌ನಲ್ಲೇ ಅದನ್ನು ರೆಕಾರ್ಡ್ ಮಾಡಿ ಅಥವಾ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳಿ. ಇದು ನೀವು ಮೊದಲು ಮಾಡಬೇಕಾದ ಹಂತ. ನಂತರ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ. ಇದು ದೇಶದ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕೊಟ್ಟಿರುವ ಅಮೂಲ್ಯ ಸಲಹೆ.
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು, ಇತ್ತೀಚಿನ ದಿನಗಳಲ್ಲಿ ಅಮಾಯಕರಿಂದ ಕೋಟ್ಯಂತರ ಹಣ ಲೂಟಿ ಮಾಡುತ್ತಿರುವ ಸೈಬರ್ ಕಳ್ಳರ ʼಡಿಜಿಟಲ್ ಅರೆಸ್ಟ್ʼ(digital arrest) ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ.
ಭಾನುವಾರ ತಮ್ಮ 115ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರೊಂದಿಗೆ ವಿಚಾರಧಾರೆ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ಡಿಜಿಟಲ್ ಅರೆಸ್ಟ್ ಮೂಲಕ ಜನರು ಮೋಸ ಹೋಗುತ್ತಿರುವ ಬಗ್ಗೆ ಉದಾಹರಣೆಯ ಮೂಲಕ ಸುದೀರ್ಘವಾದ ವಿವರಣೆ ನೀಡಿ ಜನರನ್ನು ಈ ಹೈಟೆಕ್ ವಂಚನೆ ಜಾಲದ ಬಗ್ಗೆ ಎಚ್ಚರಗೊಳಿಸುವ ಪ್ರಯತ್ನ ಮಾಡಿದ್ದಾರೆ.
ಈ ರೀತಿಯ ಸೈಬರ್ ವಂಚನೆ ಕರೆಗಳು ಬಂದಾಗ ಜನರು ತತಕ್ಷಣಕ್ಕೆ ಮೂರು ರೀತಿಯ ಸೂತ್ರಗಳನ್ನು ಅನುಸರಿಸುವ ಮೂಲಕ ಸೈಬರ್ ಕಳ್ಳರ (cyber crime) ಜಾಲಕ್ಕೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದಿದ್ದಾರೆ. ಮೊದಲನೆಯದಾಗಿ, ಈ ರೀತಿಯ ಯಾವುದೇ ಬೆದರಿಕೆಯ ಅನಾಮಧೇಯ ಕರೆಗಳು ಬಂದಾಗ ಕಾದು ನೋಡಿ, ಯೋಚಿಸಿರಿ ಹಾಗೂ ಕಾರ್ಯಪ್ರವೃತ್ತರಾಗಿರಿ (Wait, Think, Take Action) ಎನ್ನುವ ಮೂರು ಸೂತ್ರಗಳನ್ನು ಅನುಸರಿಸಬೇಕು. ಯಾವುದೇ ಸರ್ಕಾರಿ ಸಂಸ್ಥೆಗಳು ಅಥವಾ ಏಜೆನ್ಸಿಗಳು ನಿಮಗೆ ಕರೆ ಮಾಡಿ ಹಣ ನೀಡುವಂತೆ ಪೀಡಿಸುವುದಿಲ್ಲ ಎಂಬುದನ್ನು ಮೊದಲು ನೆನಪಿಟ್ಟುಕೊಳ್ಳಿ. ಸರ್ಕಾರದ ವಿವಿಧ ಇಲಾಖೆಗಳು ಆಯಾ ರಾಜ್ಯಗಳ ಸಹಾಯದಿಂದ ದೇಶದಲ್ಲಿ ಹೆಚ್ಚಾಗುತ್ತಿರುವ ಈ ಡಿಜಿಟಲ್ ಅರೆಸ್ಟ್ ವಂಚಕರನ್ನು ಮಟ್ಟ ಹಾಕುವುದಕ್ಕೆ ಪರಿಣಾಮಕಾರಿಯಾದ ಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದಿದ್ದಾರೆ.
ಡಿಜಿಟಲ್ ಅರೆಸ್ಟ್ ಅಂದರೇನು?
ಡಿಜಿಟಲ್ ಅರೆಸ್ಟ್ ಎನ್ನುವುದು ಒಂದು ರೀತಿಯ ಸೈಬರ್ ಕ್ರೈಂ ಆಗಿದ್ದು, ವಂಚಕರು ಕಾನೂನು ಜಾರಿ ಅಧಿಕಾರಿಗಳಂತೆ ನಾಟಕ ಮಾಡಿಕೊಂಡು ಹಣದ ಆಮಿಷ, ಬೆದರಿಕೆ ಹಾಕುತ್ತಾರೆ. ಒಂದುವೇಳೆ ಹಣ ನೀಡದಿದ್ದರೆ ಅರೆಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತ ನಿಮ್ಮನ್ನು ವರ್ಚುವಲಿ ಅರೆಸ್ಟ್ ಮಾಡಿದ ಕೃತಕ ಸನ್ನಿವೇಶಗಳನ್ನು ಮೊಬೈಲ್ ಮೂಲಕ ಪ್ರದರ್ಶಿಸುತ್ತಾರೆ. ದೇಶದೆಲ್ಲೆಡೆ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಈ ರೀತಿಯ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳು ನಡೆಯುತ್ತಿದ್ದು(maan ki baat) ಜನರು ಈ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಎನ್ನುವ ವ್ಯವಸ್ಥೆಯೇ ಇಲ್ಲ. ಇದೊಂದು ದೊಡ್ಡ ಮೋಸದ ಜಾಲ. ಅಪರಾಧ ಲೋಕದ ಒಂದು ಗ್ಯಾಂಗ್ ಈ ಕೃತ್ಯವನ್ನು ಎಸಗುತ್ತಿದ್ದು ಅವರೆಲ್ಲ ಈ ಸಮಾಜದ ಪಾತಕಿಗಳು ಎಂದು ಪ್ರಧಾನಿ ಮೋದಿ(prime minister modi) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮಗೆ ವಿಡಿಯೋ ಕಾಲ್(video call) ಬಂದ ತಕ್ಷಣಕ್ಕೆ ಗಾಬರಿಗೊಳ್ಳಬೇಡಿ. ಬದಲಿಗೆ ಸಮಾಧಾನದಿಂದ ಧೈರ್ಯವಾಗಿ ಅದನ್ನು ಎದುರಿಸುವ ಮನಸ್ಥಿತಿಯನ್ನು ಹೊಂದಿ. ತಕ್ಷಣಕ್ಕೆ ಯಾವುದೇ ಆತುರದ ಅಥವಾ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಾಧ್ಯವಾದರೆ, ಈ ರೀತಿಯ ಕರೆಗಳು ಬಂದಾಗ ಫೋನ್‌ನಲ್ಲೇ ಅದನ್ನು ರೆಕಾರ್ಡ್ ಮಾಡಿ ಅಥವಾ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳಿ. ಇದು ನೀವು ಮೊದಲು ಮಾಡಬೇಕಾದ ಹಂತ.
2ನೇ ಹಂತದಲ್ಲಿ ಈ ರೀತಿಯ ಕರೆಗಳು ಬಂದಾಗ ಸ್ವಲ್ಪ ಯೋಚಿಸಿ; ಯಾವುದೇ ಸರ್ಕಾರಿ ಏಜೆನ್ಸಿಗಳು ನಿಮಗೆ ಫೋನ್ ಮೂಲಕ ಕರೆ ಮಾಡುವುದಿಲ್ಲ ಅಥವಾ ವಿಡಿಯೋ ಕಾಲ್ ಮೂಲಕ ವಿಚಾರಣೆಗೆ ಒಳಪಡಿಸುವುದಿಲ್ಲ ಅಥವಾ ಹಣಕ್ಕಾಗಿ ಬೇಡಿಕೆ ಮಾಡುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಯಾವೂದೇ ಸಂದರ್ಭ ಸೃಷ್ಟಿಸಿದರೂ ಭಯಭೀತರಾಗಬೇಡಿ; ವಿಚಲಿತರಾಗಬೇಡಿ.
ಕೊನೆಯದಾಗಿ ಕರೆಯನ್ನು ಸ್ವೀಕರಿಸಿಕೊಂಡ ಕೂಡಲೇ ಕಾರ್ಯಪ್ರವೃತ್ತರಾಗಿ. ರಾಷ್ಟ್ರೀಯ ಸೈಬರ್ ಹೆಲ್ಪ್‌ಲೈನ್ 1930ಕ್ಕೆ(helpline) ಕರೆ ಮಾಡಿ ನಿಮಗೆ ಬಂದಿರುವ ಈ ರೀತಿಯ ಸೈಬರ್ ಕರೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ. ಜತೆಗೆ ನಿಮ್ಮ ಕುಟುಂಬಸ್ಥರು ಹಾಗೂ ಪೊಲೀಸರಿಗೂ ಮಾಹಿತಿ ನೀಡಿ. ಸಾಧ್ಯವಾದರೆ, ಕರೆ ಮಾಡಿದವರ ಯಾವುದಾದರೂ ಪುರಾವೆಗಳು ಸುರಕ್ಷಿತವಾಗಿರಿಸುವುದಕ್ಕೆ ಪ್ರಯತ್ನಿಸುವಂತೆ ಪ್ರಧಾನಿ ಮೋದಿ ಅವರು ಬಹಳ ಸವಿವರವಾಗಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಈ ಡಿಜಿಟಲ್ ಅರೆಸ್ಟ್ ಬಗ್ಗೆ ಪಾಠ ಮಾಡಿದ್ದಾರೆ. ಆ ಮೂಲಕ ಇಂದಲ್ಲಾ; ನಾಳೆ ಮೋಸದ ಬಲೆಗೆ ಬೀಳಿಸಿ ದುಃಸ್ವಪ್ನವಾಗಿ ಕಾಡಬಹುದಾದ ಬಹಳ ಪ್ರಮುಖ ಸೈಬರ್ ಫ್ರಾಡ್ ಬಗ್ಗೆ ಜನಸಾಮಾನ್ಯರಲ್ಲಿಯೂ ಜಾಗೃತಿ ಮೂಡಿಸುವ ಪ್ರಯತ್ನವನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರೇ ಈ ರೀತಿ ಎಚ್ಚರಿಕೆ ಮೂಡಿಸುವ ಪ್ರಯತ್ನ ಮಾಡಿರುವುದು ಗಮನಾರ್ಹ.