ಉತ್ತರ ಪ್ರದೇಶದ ಆಗ್ರಾದಲ್ಲಿ ವಾಯುಪಡೆಯ ಮಿಗ್-29 ಯುದ್ಧ ವಿಮಾನ ಪತನ: 2 ತಿಂಗಳಲ್ಲಿ ಇದು 2ನೇ ದುರಂತ!
ಉತ್ತರ ಪ್ರದೇಶದ ಆಗ್ರಾದಲ್ಲಿ ಅಭ್ಯಾಸ ನಿರತವಾಗಿದ್ದ ವಾಯುಪಡೆಯ ಮಿಗ್-29 ಯುದ್ಧ ವಿಮಾನವು ಪತನಗೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಮಾನ ಹಾರಾಟ ನಡೆಸುತ್ತಿದ್ದ ಪೈಲಟ್ ಸುರಕ್ಷಿತವಾಗಿ ಪ್ಯಾರಾಚ್ಯೂಟ್ ಮೂಲಕ ಕೆಳಗಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಅಂದರೆ ಸೆಪ್ಟಂಬರ್ 2ರಂದು ರಾಜಸ್ಥಾನದಲ್ಲಿ ಇದೇ ರೀತಿ ಐಎಎಫ್‌ನ ಮಿಗ್-29 ಯುದ್ಧ ವಿಮಾನ ಪತನಗೊಂಡಿತ್ತು.
ಉತ್ತರ ಪ್ರದೇಶ: ಭಾರತೀಯ ವಾಯುಪಡೆಯ ಮಿಗ್-29 ಯುದ್ಧ ವಿಮಾನವೊಂದು ಉತ್ತರ ಪ್ರದೇಶದ ಆಗ್ರಾ ಬಳಿ ಪತನಗೊಂಡಿದೆ. ಪೈಲಟ್ ಕೂಡ ಸುರಕ್ಷಿತವಾಗಿ ವಿಮಾನದಿಂದ ಹೊರಬಂದಿದ್ದಾರೆ. ಆಗ್ರಾದ ಸಾಂಗಾ ಗ್ರಾಮದ ರೈತರ ಹೊಲದಲ್ಲಿ ವಿಮಾನವು ಹೊತ್ತಿ ಉರಿಯುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು.
ವಿಮಾನವು ಪಂಜಾಬ್‌ನ ಆದಂಪುರದಿಂದ ಟೇಕಾಫ್ ಆಗಿದ್ದು, ಅಭ್ಯಾಸದ ಹಿನ್ನಲೆಯಲ್ಲಿ ಆಗ್ರಾಕ್ಕೆ ತೆರಳುತ್ತಿದ್ದಾಗ ದಾರಿ ಮಧ್ಯೆ ಪತನಗೊಂಡಿದೆ. ಜತೆಗೆ ಯಾವುದೇ ಸಾವು-ನೋವು ಕೂಡ ಆಗಿಲ್ಲ.
ಇನ್ನು ವಿಮಾನವು ರೈತರೊಬ್ಬರ ಹೊಲದಲ್ಲಿ ಬಿದ್ದು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಕೂಡ ಗಾಬರಿಕೊಂಡಿದ್ದಾರೆ. ವಿಮಾನವು ಪತನಗೊಳ್ಳುತ್ತಿದ್ದಂತೆ ಅದರಲ್ಲಿದ್ದ ಪೈಲಟ್ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಸಮೀಪದಲ್ಲೇ ಕೆಳಗಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಹಾಗೂ ಸಂಬಂಧಪಟ್ಟ ರಕ್ಷಣಾ ಇಲಾಖೆ ಅಧಿಕಾರಿಗಳು ಕೂಡ ಆಗಮಿಸಿದ್ದಾರೆ. ಇನ್ನು ವಿಮಾನ ಪತನವಾಗಿರುವ ಸುದ್ದಿ ತಿಳಿದು ಅಕ್ಕ-ಪಕ್ಕದ ಊರಿನ ಜನರು ಕೂಡ ಅದನ್ನು ನೋಡುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ.
ಈ ವಿಮಾನ ಪತನದ ಬಗ್ಗೆ ಹೇಳಿಕೆ ನೀಡಿರುವ ವಾಯುಪಡೆ ಅಧಿಕಾರಿಗಳು, "ಐಎಎಫ್‌ನ ಮಿಗ್-29 ವಿಮಾನ ಆಗ್ರಾ ಬಳಿ ಇಂದು ಎಂದಿನಂತೆ ತರಬೇತಿ ಅಭ್ಯಾಸ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಬಂದಿದ್ದಾರೆ. ಜತೆಗೆ ವಿಮಾನ ಪತನದಿಂದಾಗಿ ಘಟನಾ ಸ್ಥಳದಲ್ಲಿ ಯಾವುದೇ ಸಾವು-ನೋವು ಅಥವಾ ಅನಾಹುತ ಕೂಡ ಸಂಭವಿಸಿಲ್ಲ. ಈ ದುರ್ಘಟನೆ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ" ಎಂದು ಹೇಳಿದೆ.
ಒಂದೂವರೆ ತಿಂಗಳಲ್ಲಿ 2ನೇ ಘಟನೆ
ಕಳೆದ ಸೆಪ್ಟಂಬರ್.2ರಂದು ಭಾರತೀಯ ವಾಯುಪಡೆಗೆ ಸೇರಿದ್ದ ಮಿಗ್ 29 ಯುದ್ಧವಿಮಾನವು ರಾಜಸ್ಥಾನದ ಬರ್ಮೆರ್‌ನಲ್ಲಿ ಪತನಗೊಂಡಿತ್ತು. ಪೈಲಟ್ ಕೂಡ ಸುರಕ್ಷಿತವಾಗಿ ಅಪಾಯದಿಂದ ಪಾರಾಗಿದ್ದರು. ವಾಯುಪಡೆಯ ಪೈಲಟ್ ಅಭ್ಯಾಸದ ಹಾರಾಟ ನಡೆಸುತ್ತಿದ್ದ ವೇಳೆಯಲ್ಲಿಯೇ ಪತನಗೊಂಡಿತ್ತು. ಆ ಮೂಲಕ ಕೇವಲ ಎರಡು ತಿಂಗಳ ಅಂತರದಲ್ಲಿ 2ನೇ ಘಟನೆ ನಡೆದಿರುವುದು ಗಂಭೀರ ವಿಚಾರವಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್-29 ಫೈಟರ್ ಜೆಟ್‌ಗಳು ಈ ರೀತಿ ಹಾರಾಟದ ವೇಳೆಯೇ ಪತನಗೊಳ್ಳುತ್ತಿರುವುದಕ್ಕೆ ರಕ್ಷಣಾ ವಲಯದಲ್ಲಿಯೂ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.