ನೇಪಾಳದಲ್ಲಿ ಕುಳಿತು ನೂರಾರು ಕೋಟಿ ವಂಚಿಸುತ್ತಿದ್ದ ಬೃಹತ್ ಸೈಬರ್ ಜಾಲ ಬೇಧಿಸಿದ ಮಂಗಳೂರು ಪೊಲೀಸರು
ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದೂರುದಾರರಿಂದ ಒಂದು ಕೋಟಿ 38 ಲಕ್ಷ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಈ ವಂಚಕರು ನೇಪಾಳದಲ್ಲಿ ಕುಳಿತು ವಂಚನೆ ಮಾಡುತ್ತಿದ್ದ ಬಗ್ಗೆ ತನಿಖೆಯಿಂದ ಹಾಗೂ ತಾಂತ್ರಿಕ ವಿಶ್ಲೇಷಣೆಯಿಂದ ಪತ್ತೆ ಹಚ್ಚಿ ವಂಚಕರ ಗ್ಯಾಂಗ್ ನ್ನು ದಸ್ತಗಿರಿ ಮಾಡಲಾಗಿದೆ.
ಮಂಗಳೂರು: ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ವಂಚನೆ ಮಾಡುತ್ತಿದ್ದ ಬೃಹತ್ ಸೈಬರ್ ವಂಚಕರ ಜಾಲವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸರು ಬೇಧಿಸಿದ್ದು, ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದಾರೆ.
ಗುಜರಾತ್‌ನ ಬಾವಾ ನಗರ ಜಿಲ್ಲೆಯ ಮಕವನ್ ವಿಕ್ರಂ (25) , ಪಶ್ಚಿಮ ಬಂಗಾಲದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ(21), ಜಾರ್ಖಂಡ್‌ನ ಪುಪ್ಲ ಶಿವ ಕುಮಾರ್ ರಾವ್(32), ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24), ಹರ್ಷ್ ಮಿಸ್ರಾ (22), ನೌಶಾದ್ ಅಲಿ (34), ಮೊಹಮ್ಮದ್ ಆಕೀಬ್ ಅಲಿ (27), ಬಿಹಾರದ ರಾಜೀವ್ ರಂಜನ್ ಕುಮಾರ್(30), ರಾಜಸ್ಥಾನದ ಓಂ ಪ್ರಕಾಶ್ ಯಾಧವ್ ಬಂಧಿತರು.
ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೀನಾದ ವಂಚಕರೂ ಇದ್ದಾರೆ. ನೇಪಾಳ ಪೊಲೀಸರು ಚೀನಾದ ವಂಚಕರನ್ನು ಅರೆಸ್ಟ್ ಮಾಡಿದ್ದು, ಐವರು ಭಾರತೀಯ ಆರೋಪಿತರು ತಲೆಮರಿಸಿಕೊಂಡಿದ್ದಾರೆ. ಆರೋಪಿಗಳ ಫೋನ್ ಹಾಗೂ ಲ್ಯಾಪ್ ಟಾಪ್ ಪರಿಶೀಲಿಸಿದಾಗ ಒಟ್ಟು 624 ಬ್ಯಾಂಕ್ ಖಾತೆಗಳ ವಿವರ ಪತ್ತೆಯಾಗಿದೆ. ಈ ಬ್ಯಾಂಕ್ ಖಾತೆಗಳ ಮೇಲೆ NCRP PORTAL ನಲ್ಲಿ ಒಟ್ಟು 4580ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಈ ಪೈಕಿ ಒಂದು ಬ್ಯಾಂಕ್ ಖಾತೆಯಲ್ಲಿ 167 ಕೋಟಿ ರೂ. ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಬಳಸಿದ್ದ 10 ಬ್ಯಾಂಕ್ ಖಾತೆಗಳಲ್ಲಿ ಬರೋಬ್ಬರಿ 30,70,26,725ರೂ. ಹಣ ವರ್ಗಾವಣೆ ಆಗಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆ ಪಡೆಯಬೇಕಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಒಂದು ವಂಚಕರ ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್‌ರನ್ನು ನೇಮಕ ಮಾಡಿಕೊಂಡು, ವಂಚನೆಯ ಹಣವನ್ನು ವರ್ಗಾವಣೆ ಮಾಡುವುದು ಹಾಗೂ ಹಣವನ್ನು USDT ನಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಿದ್ದರು.
ಇನ್ನೊಂದು ವಂಚಕರ ತಂಡವು ಕಾಂಬೋಡಿಯಾ ಮತ್ತು ಇತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹೆಚ್ಚು ಹಣ ಗಳಿಸುವ ಆಮೀಷ ಒಡ್ಡಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದು, ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿರುವುದು ತಿಳಿದುಬಂದಿರುತ್ತದೆ.
ಸೆನ್ ಪೊಲೀ್ಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಉಪಯೋಗಿಸಲು ದೂರುದಾರರಿಗೆ ನೀಡಿದ್ದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ NCRP PORTAL ನಲ್ಲಿ ಸುಮಾರು 128 ಪ್ರಕರಣ ಮತ್ತು ಒಟ್ಟು 36 FIR ದಾಖಲಾಗಿರುತ್ತದೆ.
ವಂಚಕರು ಬೇರೆ ಬೇರೆ ಕಂಪನಿಯ ಹೆಸರಿನಲ್ಲಿ ಇನ್ ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮೂಲಕ ತಮ್ಮ ನಿಜವಾದ ಹೆಸರು ಮರೆ ಮಾಚಿ ಜಾಹೀರಾತು ಮೂಲಕ ಕಾರ್ಪೋರೇಟ್ ಖಾತೆಗಳು, ಕರೆಂಟ್ ಖಾತೆಗಳು, USDT TO INR Exchange, Management Operator ಗಳು ಮತ್ತು OTP Worker ಬೇಕಾಗಿದ್ದಾರೆ ಎಂಬುದಾಗಿ ಟೆಲಿಗ್ರಾಂ ಮತ್ತು ಇನ್ಸಾಟ್ರಾ ಗ್ರಾಂ ಮೂಲಕ ಬ್ಯಾಂಕ್ ಖಾತೆದಾರರನ್ನು ಸಂಪರ್ಕಿಸುತ್ತಾರೆ.
ದುರಾಸೆಗೊಳಗಾದವರು ಅವರನ್ನು ಸಂಪರ್ಕಿಸಿದಾಗ 5% ರಿಂದ 10% ಕಮಿಷನ್ ಕೊಡುವುದಾಗಿ ಮತ್ತು ಅವರಿಗೆ ಬೇಕಾದ ವಿಮಾನ ಟಿಕೆಟ್, ಕ್ಯಾಬ್ ಬುಕ್ಕಿಂಗ್, ಹೋಟೇಲ್, ಲಾಡ್ಜ್ ವ್ಯವಸ್ಥೆ ನೀಡುವುದಾಗಿ ಹಾಗೂ ಇವರಿಗೆ ವಿವಿಧ ರೀತಿಯ ಆಮಿಷ ನೀಡಿ, ದುಬೈ, ನೇಪಾಳ ಮುಂತಾದ ಕಡೆ ಕರೆಸಿಕೊಳ್ಳುತ್ತಾರೆ. ನಂತರ ಖಾತೆದಾರರನ್ನು ಮತ್ತು ಖಾತೆಗಳನ್ನು ಪೂರೈಸುವವರನ್ನು ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ವಂಚಕರು ತಮಗೆ ಸೇರಿದ ವಿವಿಧ ಕಂಪನಿಯ ಮೊಬೈಲ್ ಫೋನ್ ಗಳಿಗೆ ಖಾತೆದಾರರ ಸಿಮ್ ಹಾಕಿಕೊಂಡು, Net Banking, ಮುಖಾಂತರ ವಂಚನೆಯ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ವಂಚಕರು ವಂಚನೆ ಮಾಡಿದ ಹಣದಿಂದ USDT ಗಳನ್ನು ಬೇರೆ ಬೇರೆ ಕಡೆಯಿಂದ ಖರೀದಿ ಮಾಡಿ, ಪ್ರತಿದಿನ ವಿದೇಶದಲ್ಲಿನ ಆರೋಪಿತರಿಗೆ ಕಳುಹಿಸುತ್ತಾರೆ.
ಕಾಂಬೋಡಿಯಾ ಮತ್ತು ದುಬೈಗಳಲ್ಲಿ ಕುಳಿತು ನಮ್ಮ ದೇಶದ ನಾಗರಿಕರಿಗೆ ಮುಖ್ಯ ವಂಚಕರು ಅಪರಿಚಿತ ವಾಟ್ಸಾಪ್ ಮೊಬೈಲ್ ನಂಬರ್‌ಗಳ ಮೂಲಕ ಇನ್ ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ ಬುಕ್ ಗಳ ಮುಖಾಂತರ ಹೂಡಿಕೆದಾರರನ್ನು ಸಂಪರ್ಕಿಸಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಆರ್ಕಷಿಸುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭ ಬಂದಿರುವುದಾಗಿ ಆಪ್ ಮೂಲಕ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭಾಂಶ ಹಣವನ್ನು ನೀಡಿ ನಂಬಿಕೆ ಬರುವ ಹಾಗೆ ಮಾಡಿದ ನಂತರ ಉಳಿದ ಹಣನ್ನು ಡ್ರಾ ಮಾಡಬೇಕಾದರೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕೆಂದು ಪುಸುಲಾಯಿಸಿ ಹಣವನ್ನು ಹೂಡಿಕೆ ಮಾಡಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು 60 ಲಕ್ಷದಿಂದ ಒಂದು ಕೋಟಿವರೆಗೆ Investment fraud ಗೆ ಒಳಪಡಿಸುತ್ತಿದೆ.
ವಿದೇಶಗಳಲ್ಲಿ ಕೆಲಸ ಹುಡುಕುವ ಯುವಕರಿಗೆ ನಕಲಿ ಜಾಹಿರಾತು, ಏಜೆಂಟ್ ಗಳ ಮೂಲಕ ನಂಬಿಸಿ, ಪುಸಲಾಯಿಸಿ ಅವರನ್ನು ಟೂರಿಸ್ಟ್ ವೀಸಾದಲ್ಲಿ ಮಧ್ಯ ಪ್ರಾಂಚ್ಯ ದೇಶಗಳಿಗೆ ಕರೆದುಕೊಂಡು ಹೋಗಿ ಅವರಿಂದ ದಾಖಲೆಗಳನ್ನು ಮತ್ತು ಪಾಸ್ ಪೋರ್ಟ್ ತೆಗೆದುಕೊಂಡು ಅವರನ್ನು ಅಲ್ಲಿ ಗೊತ್ತಿರದೇ ಇರುವ ಸ್ಥಳದಲ್ಲಿ ಬಂಧಿಸುತ್ತಾರೆ. ಅವರಿಂದ ಒತ್ತಾಯ ಪೂರಕವಾಗಿ ಮುಗ್ದ ಹೂಡಿಕೆದಾರರಿಗೆ ಅವರ ಮಾತೃ ಭಾಷೆಯಲ್ಲೇ ಮಾತನಾಡಿಸಿ ಪುಸಲಾಯಿಸಿ ಹಣ ವರ್ಗಾಹಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ ಉಪಹಾರ ನೀಡದೇ ಹಾಗೂ ಕುಟುಂಬದವರೊಂದಿಗೆ ಸಂಪರ್ಕವನ್ನು ಮಾಡಲು ಅವಕಾಶ ಕೊಡದೇ ಕೂಡಿ ಹಾಕಿ ಭಾರತದ ನಾಗರೀಕರಿಗೆ ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದು, ಈ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಉದ್ಯೋಗಕ್ಕೆ ವಿದೇಶಗಳಿಗೆ ಏಜೆನ್ಸಿ ಮೂಲಕ ಹೋಗುವ ಯುವಕರು ಪ್ರೊಟೆಕ್ಟ್ಸ್ ಆಫ್ ಇಮಿಗ್ರೇಟ್ಸ್ ಬಳಿ ನೊಂದಣಿ ಆಗಿರುವ ಏಜೆನ್ಸಿ ಬಗ್ಗೆ ಸರಿಯಾದ ಮಾಹಿತಿ ಪಡೆದು ಅವರ ಮೂಲಕವಷ್ಟೇ ಕೆಲಸಗಳನ್ನು ಪಡೆದು, ಚೆಕ್ ಮಾಡಿ ಉದ್ಯೋಗಕ್ಕೆ ವಿದೇಶಕ್ಕೆ ಹೋಗುವುದು ಉತ್ತಮ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಜನರನ್ನು ವಿದೇಶದಲ್ಲಿ ಉತ್ತಮ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅವರನ್ನು ಸೈಬರ್ ಸ್ಲೇವರಿ ಆಗಿ ಕೆಲಸ ಮಾಡಿಸುತ್ತಿದ್ದವರನ್ನು ರಕ್ಷಿಸಲಾಗಿದ್ದು, ಅವರು ನೀಡಿದ ದೂರಿನ ಮೇಲೆ ಪ್ರಕರಣ ಕೂಡ ದಾಖಲಾಗಿರುತ್ತದೆ.
ವಂಚನೆಗೊಳಗಾದ ದೂರುದಾರರು ಅದೇ ದಿನ ದೂರನ್ನು ನೀಡಲು ವಿಳಂಬ ಮಾಡುವುದರಿಂದ ಹಣ ಮರಳಿ ಸಿಗುವುದು ಕಷ್ಟವಾಗುತ್ತದೆ.
ಕಮೀಷನ್ ಆಸೆಗೆ ಒಳಗಾಗಿ ಬ್ಯಾಂಕ್ ಖಾತೆಯನ್ನು ವಂಚಕರಿಗೆ ನೀಡಿದಲ್ಲಿ ಖಾತೆದಾರರು ಸಹ ಆರೋಪಿತರಾಗುತ್ತಾರೆ. ಮುಖ್ಯ ವಂಚಕರು ವಿದೇಶದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದರಿಂದ ಪ್ರಮುಖ ಆರೋಪಿಗಿಂತ ಮೊದಲೇ ಕಮಿಷನ್ ಆಸೆಗೆ ಒಳಗಾದವರು ಕಾನೂನು ಪ್ರಕಾರ ಶೀಘ್ರವಾಗಿ ದಸ್ತಗಿರಿಯಾಗುತ್ತಾರೆ.
ವಿದೇಶದಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯ ಆಕರ್ಷಿತ ಜಾಹೀರಾತುಗಳನ್ನು ನೋಡಿ, ಹೆಚ್ಚಿನ ಲಾಭಾಂಶದ ವಂಚನೆಗೆ ಒಳಗಾಗಬೇಡಿ ಹಾಗೂ ಹೂಡಿಕೆಯನ್ನು ಮಾಡುವಾಗ ನಕಲಿ ಸೆಬಿ ಸರ್ಟಿಪೀಕೇಟ್, ನಕಲಿ ಡಿಮ್ಯಾಟ್ ಖಾತೆಗಳನ್ನು ನೋಡಿ ಮೋಸ ಹೋಗಬೇಡಿ.
ಹೆಚ್ಚು ಹಣ ಗಳಿಸಬೇಕೆಂಬ ಆಸೆಗೆ ಬಿದ್ದ ಹೆಚ್ಚಿನ ವಿದ್ಯಾವಂತರು ಇತ್ತಿಚೀನ ದಿನಗಳಲ್ಲಿ ಆನ್ ಲೈನ್ ಹೂಡಿಕೆ, ಹಣ ದ್ವಿಗುಣ, ಟ್ರೇಡಿಂಗ್ ಹೂಡಿಕೆಯಲ್ಲಿ ವಿಚಾರಿಸದೇ ವಂಚಕರ ಮೋಸದ ಬಲೆಗೆ ಬಿದ್ದು, ಹಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ.
ಹೂಡಿಕೆ ಮಾಡಬೇಕಾದರೆ SEBI Registration ಆಗಿರುವ ಸಂಸ್ಥೆ ಅಥವಾ ಬ್ರೋಕರ್ ರವರಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಮಾಡಿಸುವುದು. ಹೆಚ್ಚಿನ ಲಾಭಾಂಶ ಭರವಸೆಯ ಹೂಡಿಕೆ ಬಗ್ಗೆ ಅತೀ ಹೆಚ್ಚಿನ ಕಾಳಜಿ ಅವಶ್ಯವಾಗಿದೆ.


