Commonwealth Games-2026: ಮುಂದುವರಿದ ಭಾರತದ ಪದಕ ಬೇಟೆ
Commonwealth Games-2026: 23ನೇ ಕಾಮನ್‌ವೆಲ್ತ್ ಕ್ರೀಡಾಕೂಟ-2026ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.
ಗ್ಲ್ಯಾಸ್ಗೋ: 23ನೇ ಕಾಮನ್‌ವೆಲ್ತ್ ಕ್ರೀಡಾಕೂಟ-2026ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ವೇಟ್‌ಲಿಫ್ಟಿಂಗ್ 48 ಕೆಜಿ ವಿಭಾಗದಲ್ಲಿ ಸಾಯಿಕೋಮ್ ಮೀರಾಬಾಯಿ ಚಾನು (Saikhom Mirabai Chanu) ಚಿನ್ನದ ಪದಕ ಜಯಿಸಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಇದು ಅವರ ಸತತ 3ನೇ ಸ್ವರ್ಣ ಪದಕವಾಗಿದೆ. ಈ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. 2014 ಹಾಗೂ 2022ರ ಕಾಮನ್‌ವೆಲ್ತ್‌ನಲ್ಲಿಯೂ ಚಿನ್ನ ಜಯಿಸಿದ್ದರು.

ಪುರುಷರ 65 ಕೆಜಿ ವಿಭಾಗದಲ್ಲಿ ವೇಟ್‌ಲಿಫ್ಟರ್ ರಾಜಾ ಮುತ್ತುಪಾಂಡಿ (Raja Muthupandi) ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಸ್ನ್ಯಾಚ್‌ನಲ್ಲಿ 126 ಕೆಜಿ ಮತ್ತು ಕ್ಲೀನ್ ಹಾಗೂ ಜರ್ಕ್‌ನಲ್ಲಿ 160 ಕೆಜಿ ಸೇರಿ ಒಟ್ಟು 286 ಕೆಜಿ ತೂಕ ಎತ್ತಿ, ಈ ಸಾಧನೆ ಮಾಡಿದ್ದಾರೆ. ಇವರು ತಮಿಳುನಾಡಿನ ವೆಲ್ಲೂರು ಮೂಲದವರಾಗಿದ್ದಾರೆ.
ಅದೇ ರೀತಿಯಲ್ಲಿ ಪುರುಷರ 60 ಕೆಜಿ ತೂಕದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಚನಂಬಮ್ ಋಷಿಕಾಂತ್ ಸಿಂಗ್ (Chanambam Rishikant Singh) ಕೂಡ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಮಣಿಪುರದ ಇಂಫಾಲ್ ಮೂಲದ ಅವರು, ಸ್ನ್ಯಾಚ್ ವಿಭಾಗದಲ್ಲಿ 121 ಕೆಜಿ ತೂಕ ಎತ್ತಿ, ಹೊಸ ಇತಿಹಾಸ ಬರೆದಿದ್ದಾರೆ.
ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್ ವಿಭಾಗದಲ್ಲಿ ಪೋಲಿಯೊ ಪೀಡಿತ ಝಂದು ಕುಮಾರ್ (Jhandu Kumar) ಕಂಚಿನ ಪದಕವನ್ನು ಜಯಿಸಿದ್ದಾರೆ. 28 ವರ್ಷದ ಅವರು, 181 ಕೆಜಿ ಹಾಗೂ 190 ಕೆಜಿ ಭಾರ ಎತ್ತಿ 130.9 ಅಂಕಗಳನ್ನು ಗಳಿಸಿದ್ದರು.