ಥ್ಯಾಂಕ್ಸ್ ಟು ಡಾಕ್ಟರ್.. ಒಂದು ಜೀವ ಉಳಿಸಿಬಿಟ್ಟಿರಿ! ಈಶ್ವರಮಂಗಲದ ಹಿರಿಯ ವೈದ್ಯರ ಕಾರ್ಯಕ್ಕೆ ಮೆಚ್ಚಿಗೆ

Senior Doctor Shrikumar Katribail: ಈಶ್ವರಮಂಗಲದ ಹಿರಿಯ ವೈದ್ಯ ಡಾ.ಶ್ರೀಕುಮಾರ್ ಕತ್ರಿಬೈಲ್ ಅವರು, ಲಕ್ನೋದಿಂದ ಮುಂಬೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಹಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದ್ದಾರೆ.

Sep 30, 2026 - 22:13
Sep 30, 2026 - 22:17
ಥ್ಯಾಂಕ್ಸ್ ಟು ಡಾಕ್ಟರ್.. ಒಂದು ಜೀವ ಉಳಿಸಿಬಿಟ್ಟಿರಿ! ಈಶ್ವರಮಂಗಲದ ಹಿರಿಯ ವೈದ್ಯರ ಕಾರ್ಯಕ್ಕೆ ಮೆಚ್ಚಿಗೆ

'ಥ್ಯಾಂಕ್ಸ್ ಟು ಡಾಕ್ಟರ್... ನೀವು ಒಂದು ಜೀವವನ್ನೇ ಉಳಿಸಿಬಿಟ್ಟಿರಿ!' ಇಂಡಿಗೋ ವಿಮಾನ ಸಿಬ್ಬಂದಿಯ ಈ ಮಾತುಗಳೊಂದಿಗೆ ಸುಮಾರು 250 ಮಂದಿ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಬೀಳ್ಕೊಟ್ಟಾಗ, ಡಾ.ಶ್ರೀಕುಮಾರ್ ಕತ್ರಿಬೈಲ್ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಇದು ಸೆ.29 ರಂದು ವಿಮಾನದಲ್ಲಿ ನಡೆದ ಮಾನವೀಯ ಕ್ಷಣ.
 
ಉತ್ತರ ಭಾರತದ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಾಸ್ ಬರುತ್ತಿದ್ದ ವೇಳೆ, ಲಕ್ನೋದಿಂದ ಮುಂಬೈಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಬೆಳಗ್ಗೆ 9.30ರ ವೇಳೆಗೆ ಸಹಪ್ರಯಾಣಿಕರೊಬ್ಬರಿಗೆ ಏಕಾಏಕಿ ಎದೆನೋವು ಬಂದಿತ್ತು. ಎದೆಯನ್ನು ಗಟ್ಟಿಯಾಗಿ ಹಿಡಿದು ಚಡಪಡಿಸುತ್ತಿದ್ದ ಆ ವ್ಯಕ್ತಿಗೆ, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರೊಂದಿಗೆ ಪತ್ನಿ ಹಾಗೂ ಸುಮಾರು 2 ವರ್ಷದ ಮಗು ಕೂಡ ಇದ್ದರು.
 
ವಿಮಾನ ಸಿಬ್ಬಂದಿ ತಕ್ಷಣ, 'ವಿಮಾನದಲ್ಲಿ ವೈದ್ಯರು ಯಾರಾದರೂ ಇದ್ದಾರೆಯೇ?' ಎಂದು ಕೇಳಿದ್ದಾರೆ. ಸುಮಾರು 40 ವರ್ಷಗಳ ವೈದ್ಯಕೀಯ ಅನುಭವ ಹೊಂದಿರುವ ಡಾ.ಶ್ರೀಕುಮಾರ್ ಕತ್ರಿಬೈಲ್ ಕೂಡಲೇ ಸ್ಪಂದಿಸಿದ್ದಾರೆ.
 
ಪ್ರಯಾಣಿಕನ ಬಳಿ ತೆರಳಿ, ಆತನ ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅಗತ್ಯ ಪ್ರಥಮ ಚಿಕಿತ್ಸೆಗಳನ್ನು ಮಾಡಿದ್ದಾರೆ. ಹೃದಯದ ಕಾರ್ಯವನ್ನು ಗಮನಿಸಿ, ರಕ್ತದೊತ್ತಡ ಪರಿಶೀಲಿಸಿ, ಅಗತ್ಯ ಔಷಧ ನೀಡಿ ತುರ್ತು ವೈದ್ಯಕೀಯ ನೆರವು ಒದಗಿಸಿದ್ದಾರೆ. ಕೆಲವೇ ಸಮಯದಲ್ಲಿ ಪ್ರಯಾಣಿಕ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ್ದಾರೆ.
 
ಲಕ್ನೋದಿಂದ ಮುಂಬೈ ತಲುಪುವಷ್ಟರಲ್ಲಿ ಪ್ರಯಾಣಿಕನ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿ ವೀಲ್‌ಚೇರ್ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಿ, ಮುಂದಿನ ಚಿಕಿತ್ಸೆಗೆ ಸಹಕರಿಸಿದ್ದಾರೆ.
 
ಒಂದು ಜೀವ ಅಪಾಯದಲ್ಲಿದ್ದ ಸಂದರ್ಭದಲ್ಲಿ ವೈದ್ಯರಾಗಿ ತಮ್ಮ ಕರ್ತವ್ಯವನ್ನು ಮೀರಿ ಮಾನವೀಯತೆಯಿಂದ ಸ್ಪಂದಿಸಿದ ಡಾ.ಶ್ರೀಕುಮಾರ್ ಕತ್ರಿಬೈಲ್ ಅವರ ಕಾರ್ಯಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ. 250 ಮಂದಿ ಎದ್ದು ನಿಂತು ಚಪ್ಪಾಳೆ ತಟ್ಟಿದ ಕ್ಷಣ ವೈದ್ಯರ ಪಾಲಿಗೆ ಮರೆಯಲಾಗದ ಕ್ಷಣವಾಗಿತ್ತು.
 
ಬಿಎಂಎಸ್, ಎಂಡಿ ಪದವೀಧರರಾದ ಅವರು ತುರ್ತು ರೋಗಿಗಳ ನಿರ್ವಹಣೆಯಲ್ಲಿ ಅನುಭವ ಹೊಂದಿದ್ದು, ಕಳೆದ 41 ವರ್ಷಗಳಿಂದ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಗ್ರಾಮೀಣ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಳ್ವಾಸ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.
 
ವಿಮಾನದಲ್ಲಿ ನೀಡಲ್ಪಟ್ಟ ಕೆಲವೇ ನಿಮಿಷಗಳ ವೈದ್ಯಕೀಯ ನೆರವು, ಒಂದು ಕುಟುಂಬಕ್ಕೆ ಮತ್ತೆ ಬದುಕಿನ ಭರವಸೆಯನ್ನು ನೀಡಿತು.

ಸಂದೀಪ್ ಎರುಕೊಟ್ಯ ಯುವ ಉತ್ಸಾಹಿ ಪತ್ರಕರ್ತನಾಗಿದ್ದು, ಇದೀಗ ಡೇ2ಡೇ ನ್ಯೂಸ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ್ದೇನೆ. ಪ್ರಸ್ತುತ ಪುತ್ತೂರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವೆ.