ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಿಲಿಗೆ 'ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ ಪ್ರಶಸ್ತಿ'
Shri Kshetra Dharmasthala Rural Development Project: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 'ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ ಪ್ರಶಸ್ತಿ'ಯು ಲಭಿಸಿದೆ.
ಬೆಳ್ತಂಗಡಿ (ಉಜಿರೆ): ಭಾರತೀಯ ರಿಸರ್ವ್ ಬ್ಯಾಂಕ್ ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾದ 'ಸಾಧನ್' ಇತ್ತೀಚೆಗೆ ದೆಹಲಿಯಲ್ಲಿ ಏರ್ಪಡಿಸಿದ್ದ 21ನೇ ರಾಷ್ಟ್ರೀಯ ಸಮಾವೇಶದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ಗೆ '2025-2026ರ ಸಾಲಿನ ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ - ಇಲಾಬೆನ್ ಸ್ಮಾರಕ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ'ಯು ಮಹಿಳಾ ಕಾರ್ಯಕರ್ತರಿಗೆ ಅತಿ ಸುರಕ್ಷಿತ ಕಾರ್ಯಸ್ಥಳ ಮತ್ತು ಉತ್ತಮ ಬಾಂಧವ್ಯದ ವಾತಾವರಣವನ್ನು ನೀಡುವುದರೊಂದಿಗೆ ದೇಶಕ್ಕೆ ಮಾದರಿಯಾಗಿರುವ ಸಂಸ್ಥೆಯಾಗಿರುವ ಹಿನ್ನೆಲೆ, ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್, ಯೋಜನೆಯ ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಆರ್ ಪೈ, ಪ್ರಾದೇಶಿಕ ನಿರ್ದೇಶಕ ಗೀತಾ ಬಿ ಝಾಗೂ ದಯಾಶೀಲರವರು ಸ್ವೀಕರಿಸಿದರು.

ಸಾಧನ್ ಸಂಸ್ಥೆಯು ದೇಶದ 210 ಆರ್ಥಿಕ ಸಂಸ್ಥೆಗಳ ನೋಂದಾವಣೆ ಹೊಂದಿರುವ 'ಭಾರತೀಯ ರಿಸರ್ವ್ ಬ್ಯಾಂಕ್' ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾಗಿದ್ದು, ಇದು ಬ್ಯಾಂಕ್‌ಗಳು, ಬ್ಯಾಂಕಿನ ಬಿ.ಸಿ.ಪ್ರತಿನಿಧಿ ಸಂಸ್ಥೆಗಳು, ಎಂಬಿಎಫ್‌ಸಿ, ಕಿರು ಫೈನಾನ್ಸಿಯಲ್ ಬ್ಯಾಂಕ್, ಕಿರು ಆರ್ಥಿಕ ಸಂಸ್ಥೆಗಳು ಹಾಗೂ ಕೋ ಆಪರೇಟಿವ್ ಸೊಸೈಟಿಗಳನ್ನು ಸದಸ್ಯರನ್ನಾಗಿ ಹೊಂದಿದೆ.
ಇಲಾಬೆನ್ ಅವರು, ದೇಶದ ಮಹಿಳಾ ಸಬಲೀಕರಣಕ್ಕೆ ವಿಶೇಷವಾದ ಕೊಡುಗೆ ನೀಡಿದ್ದಾರೆ. ಅವರ ಸ್ಮರಣಾರ್ಥವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದೊಂದು ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಕಿರು ಆರ್ಥಿಕ ವಲಯದ ಪ್ರಶಸ್ತಿಯಾಗಿರುತ್ತದೆ.
ಗ್ರಾಮಾಭಿವೃದ್ಧಿ ಯೋಜನೆಯ ಒಟ್ಟು 41,000 ಕಾರ್ಯಕರ್ತರಲ್ಲಿ 29,000 ಮಂದಿ ಮಹಿಳಾ ಕಾರ್ಯಕರ್ತರಿದ್ದು, ಅವರುಗಳಿಗೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಕಾರ್ಯಕರ್ತರಿಗೆ ಅತ್ಯುತ್ತಮ ತಂತ್ರಜ್ಞಾನವನ್ನು ವ್ಯವಸ್ಥೆಗೊಳಿಸಲಾಗಿದೆ. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಬೇಕಾದ ತರಬೇತಿಯನ್ನು ಆಗಾಗ ನೀಡಲಾಗುತ್ತಿದೆ.
ಉನ್ನತ ಆಡಳಿತ ನಿರ್ವಹಣೆ ಹಾಗೆಯೆ ಧನಾತ್ಮಕ ವಾತಾವರಣದ ಮೂಲಕ ದಿನನಿತ್ಯದ ಕಾರ್ಯಚಟುವಟಿಕೆಗಳು ಅತ್ಯಂತ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಅವಕಾಶವನ್ನು ಕಲ್ಪಿಸಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿಯೂ ಮಹಿಳಾ ಕಾರ್ಯಕರ್ತರಿಗೆ ನೇರವಾಗಿ ಅವರ ಕುಟುಂಬ ಮುಖ್ಯವಾಗಿ 'ಸ್ಪೇಸ್ ಜಾಯಿನಿಂಗ್' ಆಧಾರದ ಮೇಲೆ ಅವರಿಗೆ ಸೂಕ್ತವಾಗುವ ಪ್ರದೇಶಗಳಿಗೆ ವರ್ಗಾವಣೆಯನ್ನು ಮಾಡಲಾಗುತ್ತಿದೆ.
ಪಾರದರ್ಶಕವಾಗಿ ಬಡ್ತಿ ಪ್ರಕ್ರಿಯೆಗಳ ಮೂಲಕ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವುದರೊಂದಿಗೆ, ಅವರ ಪ್ರಗತಿಗೂ ಮುಕ್ತ ಅವಕಾಶವನ್ನು ನೀಡಲಾಗಿದೆ.
'POSH' ಕಾಯಿದೆಯ ಬಗ್ಗೆ ಆಯ್ದ ಪ್ರಮುಖ ಮಹಿಳಾ ಕಾರ್ಯಕರ್ತರಿಗೆ ವಿಶೇಷ ತರಬೇತಿಯನ್ನು ನೀಡಿ, ರಾಜ್ಯದಾದ್ಯಂತ ಮಹಿಳೆಯರ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಮಹಿಳಾ ಕಾರ್ಯಕರ್ತರ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದ್ದಲ್ಲದೆ ಉಲ್ಲಂಘನೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಸಂಸ್ಥೆಯು ಹೊಂದಿದೆ.
ಮಹಿಳಾ ಕಾರ್ಯಕರ್ತರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಹೇಮಾವತಿ ವೀರೇಂದ್ರ ಹೆಗ್ಗಡೆ ಅವರು ಪೌಷ್ಟಿಕ ಆಹಾರ, ಆರೋಗ್ಯದ ಅರಿವು, ವೈದ್ಯಕೀಯ ಶಿಬಿರಗಳು ಇತ್ಯಾದಿಗಳ ಮೂಲಕ ಕಾರ್ಯಕರ್ತರ ಆರೋಗ್ಯದ ಕುರಿತು ವಿಶೇಷ ಕಾಳಜಿಯನ್ನು ವಹಿಸುತ್ತಿದ್ದಾರೆ.
ಕಾರ್ಯಕರ್ತರಿಗೆ ವಾರ್ಷಿಕ ಸುಮಾರು ರೂ.5 ಲಕ್ಷ ಮೌಲ್ಯದ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತದೆ. ಮಹಿಳಾ ಕಾರ್ಯಕರ್ತರಿಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಡುವುದು, ಉತ್ತಮ ಬಾಂಧವ್ಯದ ವಾತಾವರಣವನ್ನು ಸೃಷ್ಟಿಸುವುದು, ಉತ್ತಮ ನಾಯಕತ್ವವನ್ನು ವಹಿಸಲು ಅವಕಾಶ ಮಾಡಿಕೊಡುವುದರೊಂದಿಗೆ ದೇಶಕ್ಕೆ ಮಾದರಿಯಾಗಿದೆ.
ಹೇಮಾವತಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ, ಸದ್ಯ 6,547 ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಮೂಲಕ 3,29,609 ಸದಸ್ಯರು ಸರ್ವಾಂಗೀಣ ಅಭಿವೃದ್ಧಿ ಹೊಂದಿದ್ದಾರೆ. ಹಾಗೆಯೇ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಸೇವೆಯ ಮೂಲಕ ಸುಮಾರು 42 ಲಕ್ಷ ಮಹಿಳೆಯರು ಬ್ಯಾಂಕಿನಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ಸಾಲ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿರುವುದಲ್ಲದೇ ಸಾಮಾಜಿಕವಾಗಿಯೂ ಅಭಿವೃದ್ಧಿಗೊಂಡು ನಿಜವಾದ ಅರ್ಥದಲ್ಲಿ ನಾರಿಶಕ್ತಿಗಳಾಗಿದ್ದಾರೆ.
ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆಯ ಎಲ್ಲಾ ಸಾಧನೆಗಳ ಹಿಂದೆ ಮಹಿಳಾ ಕಾರ್ಯಕರ್ತರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಹಾಗೆಯೇ ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವ ಮತ್ತು ಸಂಸ್ಕೃತಿಗಳ ಪ್ರತಿಬಿಂಬವಾಗಿದ್ದಾರೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗ ಅನಿಲ್ ಕುಮಾರ್ ಎಸ್.ಎಸ್ ಅವರು ಹೇಳಿದ್ದಾರೆ.