ಕೋಪದ ಬರದಲ್ಲಿ 14 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ !

ಹತ್ತನೇ ತರಗತಿ ವಿದ್ಯಾರ್ಥಿನಿ ವಿಕಾಸಿನಿ (14) ಸ್ವಂತ ಮಗಳನ್ನೇ ತಂದೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಆರೋಪಿ ತಂದೆ ಶಿವಶಾಸ್ತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗಳು ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು.

Oct 30, 2026 - 19:45
ಕೋಪದ ಬರದಲ್ಲಿ 14 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಂದ ತಂದೆ !

ತಮಿಳುನಾಡು: ತಂದೆಯೇ ತನ್ನ 14 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಾನೂರ್‌ನಲ್ಲಿ ನಡೆದಿದೆ. 
ಹತ್ತನೇ ತರಗತಿ ವಿದ್ಯಾರ್ಥಿನಿ ವಿಕಾಸಿನಿ (14) ಕೊಲೆಯಾದ ದುರ್ದೈವಿಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ ಶಿವಶಾಸ್ತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:

ವಿಕಾಸಿನಿ  ರಾಣಿಪೇಟೆಯಲ್ಲಿ ತನ್ನ ಅಜ್ಜಿಯ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದು, ಇದೇ ವೇಳೆ ಸ್ಥಳೀಯ ನಿವಾಸಿಯಾಗಿದ್ದ ಯುವಕನೊಬ್ಬ ಈಕೆಯನ್ನು ಪ್ರೀತಿಸತೊಡಗಿದ್ದ ಎನ್ನಲಾಗಿದೆ. ವಿಕಾಸಿನಿ ಶಾಲಾ ಸಮಯದಲ್ಲಿ ಇಬ್ಬರೂ ಭೇಟಿಯಾಗಿ ಮಾತನಾಡಿಕೊಳ್ಳುತ್ತಿದ್ದರು. ಈ ವಿಷಯ ತಿಳಿದ ಅಜ್ಜಿ, ತಕ್ಷಣವೇ ವಿಕಾಸಿತಿಯ ತಂದೆ ಶಿವಶಾಸ್ತ್ರಿಗೆ ವಿಷಯ ತಿಳಿಸಿದ್ದು, ಕೂಡಲೇ ಮಗಳನ್ನು ವಿಲ್ಲುಪುರಂಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಅದರಂತೆ, ಶಿವಶಾಸ್ತ್ರಿ ನಾಲ್ಕು ತಿಂಗಳ ಹಿಂದಷ್ಟೇ ಮಗಳನ್ನು ತನ್ನ ಸ್ವಗ್ರಾಮಕ್ಕೆ ಕರೆತಂದಿದ್ದರು.


ಇದಾದ ಬಳಿಕ  ಹತ್ತಿರ ಶಾಲೆಯೊಂದಕ್ಕೆ ಆಕೆಯನ್ನು ದಾಖಲು ಮಾಡಿದ್ದರು. ಜೊತೆಗೆ  ಯುವಕನೊಂದಿಗಿನ ಪ್ರೇಮ ಸಂಬಂಧವನ್ನು ಕೈಬಿಡುವಂತೆ ತಂದೆ ಹಲವು ಬಾರಿ ಮಗಳಿಗೆ ಎಚ್ಚರಿಕೆ ನೀಡಿದ್ದರು.  ಆದದೆ ಮಗಳು ತಂದೆಯ ಮಾತನ್ನು ಧಿಕ್ಕರಿಸಿ, ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ಮತ್ತು ಆತನ ಜತೆ ಹೊರಗೆ ಹೋಗುವುದನ್ನು ಮುಂದುವರಿಸಿದ್ದಳು.

 

ಮಗಳ ವರ್ತನೆಯಿಂದ ರೋಸಿಹೋದ ತಂದೆ ಶಿವಶಾಸ್ತ್ರಿ, ಪತ್ನಿ ಮನೆಯಲ್ಲಿ ಇಲ್ಲದ ಸಮಯವನ್ನು ಬಳಸಿಕೊಂಡು ಹಿರಿಯ ಮಗಳನ್ನು ಸಹೋದರನ ಮನೆಗೆ ಕಳುಹಿಸಿ ಕಿರಿಯ ಪುತ್ರಿಯಾಗಿದ್ದ ವಿಕಾಸಿನಿ ಬಳಿ  ಪ್ರೀತಿ-ಪ್ರೇಮದ ವಿಚಾರವಾಗಿ ತಿಳಿ ಹೇಳಿದ್ದ ಎನ್ನಲಾಗಿದೆ. 

ವಿದ್ಯಾಭ್ಯಾಸದ  ವಯಸ್ಸಿನಲ್ಲಿ ಪ್ರೀತಿ-ಪ್ರೇಮದ ವಿಚಾರ ಬಿಟ್ಟು,  ಯುವಕನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ತಿಳಿಸಿದ್ದ .

ಆದರೆ, ತಂದೆಯ ಮಾತಿಗೆ ಮಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು, ಆ ಯುವಕನ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಲು ಸಿದ್ದವಿಲ್ಲ ಎಂದಾಗ ತಂದೆ-ಮಗಳು ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಜಗಳ ನಡೆದಿದೆ ಎನ್ನಲಾಗಿದೆ.

ಮಾತಿಗೆ ಮಾತು ಬೆಳೆದು,  ಕೋಪಗೊಂಡ ಶಿವಶಾಸ್ತ್ರಿ, ಆಕ್ರೋಶದ ಭರದಲ್ಲಿ ಮಗಳ ಕತ್ತು ಹಿಸುಕಿದ್ದಾನೆ. 

ಮಗಳು ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದ ತಕ್ಷಣ, ಆತ ಗಾಬರಿಗೊಂಡು ಹತ್ತಿರದಲ್ಲೇ ವಾಸವಿರುವ ತನ್ನ ಸಹೋದರನಿಗೆ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ಸ್ಥಳೀಯರ ಸಹಾಯದಿಂದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರೊಳಗೆ ಮಗಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಕೃತ್ಯ ಎಸಗಿದ ಬಳಿಕ ಶಿವಶಾಸ್ತ್ರಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.