Sridhar Comaravalli: ರೇಖೆಗಳಲ್ಲಿ ಮೂಡುವ ವ್ಯಂಗ್ಯಲೋಕ - ಮೆಟ್ರೋ ಅಂಕಲ್ ಖ್ಯಾತಿಯ ಶ್ರೀಧರ್ ಕೊಮರವಳ್ಳಿ ಎಂಬ ದೈತ್ಯ ಪ್ರತಿಭೆ!
Metro Uncle Fame Sridhar Comaravalli: ಮೆಟ್ರೋ ಅಂಕಲ್ ಖ್ಯಾತಿಯ ಕಾರ್ಟೂನಿಸ್ಟ್ ಹಾಗೂ ಕ್ಯಾರಿಕೇಚರ್ ಕಲಾವಿದ ಶ್ರೀಧರ್ ಕೊಮರವಳ್ಳಿ ಕುರಿತ ವಿಶೇಷ ಲೇಖನ ಇಲ್ಲಿದೆ.
Metro Uncle Fame Sridhar Comaravalli: ಇವರು 'ಮೆಟ್ರೋ ಅಂಕಲ್'.. ಮೆಟ್ರೋ ರೈಲಿನಲ್ಲಿ ಜನಜಂಗುಳಿಯ ನಡುವೆ ಕುಳಿತರೂ ಇವರ ಕಣ್ಣು ಮಾತ್ರ ಸುತ್ತಮುತ್ತಲಿನ ಸಹಪ್ರಯಾಣಿಕರ ಮುಖಗಳ ಮೇಲೆ. ಕೈಯಲ್ಲಿ ಕಪ್ಪು ಇಂಕ್ ಪೆನ್, ಎದುರು ಬಿಳಿ ಹಾಳೆ. ಪ್ರಯಾಣದ ನಡುವೆಯೇ ಮುಖದ ಭಾವನೆ, ಹುಬ್ಬಿನ ಏರಿಳಿತ, ಕಣ್ಣಿನ ನೋಟ, ತುಟಿಯ ಚಲನೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಕೇವಲ ಒಂದೆರಡು ನಿಮಿಷಗಳಲ್ಲಿ ಅವರ ವ್ಯಂಗ್ಯ ಭಾವಚಿತ್ರವನ್ನು ಬಿಡಿಸಿ ಅದೇ ಸಹಪ್ರಯಾಣಿಕನ ಕೈಗೆ ನೀಡುತ್ತಾರೆ.
ಈಗಾಗಲೇ ಸಾವಿರಾರು ಮೆಟ್ರೋ ಪ್ರಯಾಣಿಕರ ಮುಖಗಳನ್ನು ತಮ್ಮ ಚುರುಕಾದ ರೇಖೆಗಳಲ್ಲಿ ಸೆರೆಹಿಡಿದು ಖ್ಯಾತರಾಗಿರುವ ಈ 'ಮೆಟ್ರೋ ಅಂಕಲ್' ಬೇರೆ ಯಾರೂ ಅಲ್ಲ, ಕನ್ನಡದ ಖ್ಯಾತ ಕಾರ್ಟೂನಿಸ್ಟ್ ಹಾಗೂ ಕ್ಯಾರಿಕೇಚರ್ ಕಲಾವಿದ ಶ್ರೀಧರ್ ಕೊಮರವಳ್ಳಿ.

ಅದೊಂದು ಸಮಾರಂಭ.. ವೇದಿಕೆಯಲ್ಲಿ ಗಣ್ಯರು ಭಾಷಣ ಮಾಡುತ್ತಿದ್ದಾರೆ. ಸಭಾಂಗಣದ ಎದುರು ಸಾಲಿನಲ್ಲಿ ಕುಳಿತಿರುವ ಹಿರಿಯ ವ್ಯಕ್ತಿಯೊಬ್ಬರು ಮಾತ್ರ ವೇದಿಕೆಯತ್ತ ನೋಡುವ ಬದಲು, ಭಾಷಣ ಮಾಡುತ್ತಿರುವ ಗಣ್ಯರ ಮುಖವನ್ನೇ ತದೇಕಚಿತ್ತದಿಂದ ಗಮನಿಸುತ್ತಿದ್ದಾರೆ. ಅವರ ಕೈಯಲ್ಲಿ ಕಪ್ಪು ಇಂಕ್ ಪೆನ್, ಎದುರಿಗೆ ಬಿಳಿ ಹಾಳೆ. ವೇದಿಕೆಯಲ್ಲಿ ಮಾತುಗಳು ಮುಂದುವರಿಯುತ್ತಿವೆ. ಆದರೆ ಈ ವ್ಯಕ್ತಿಯ ಗಮನ ಮಾತ್ರ ಭಾಷಣದ ಮೇಲಿಲ್ಲ.. ಮುಖದ ಮೇಲಿತ್ತು.
ಹುಬ್ಬಿನ ಏರಿಳಿತ, ಕಣ್ಣಿನ ನೋಟ, ತುಟಿಯ ಚಲನೆ, ಮುಖದ ಭಾವನೆ-ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ, ಅವರ ಕೈಯಲ್ಲಿರುವ ಪೆನ್ ಬಿಳಿ ಹಾಳೆಯ ಮೇಲೆ ಚುರುಕಾಗಿ ಓಡುತ್ತಿದೆ. ಕ್ಷಣಗಳು ಕಳೆಯುವಷ್ಟರಲ್ಲಿ ಹಾಳೆಯ ಮೇಲೆ ಒಂದು ವಿಭಿನ್ನ ಮುಖ ಮೂಡಿಬರುತ್ತದೆ. ನೋಡಿದವರಿಗೆ ಅಚ್ಚರಿ- 'ಅರೆ… ಇದೇನು ಕಲೆ!' ಎದುರಿಗೆ ಕುಳಿತಿರುವ ವ್ಯಕ್ತಿಯ ಮುಖವೇ ಅದು. ಆದರೆ ಸಾಮಾನ್ಯ ಭಾವಚಿತ್ರವಲ್ಲ, ಅವರ ವ್ಯಕ್ತಿತ್ವದ ವಿಶೇಷತೆಯನ್ನು ಹಿಡಿದಿಟ್ಟಿರುವ ವ್ಯಂಗ್ಯ ಭಾವಚಿತ್ರ!

ಇಂತಹ ಕ್ಷಣಗಳನ್ನು ತಮ್ಮ ಕಲೆಯ ಮೂಲಕ ಜೀವಂತಗೊಳಿಸುತ್ತಿರುವವರು ಶ್ರೀಧರ್ ಕೊಮರವಳ್ಳಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ವಿಆರ್‌ಎಸ್ ಪಡೆದಿರುವ ಶ್ರೀಧರ್, ಬಾಲ್ಯದಲ್ಲೇ ಚಿತ್ರಕಲೆಯತ್ತ ಆಸಕ್ತಿ ಬೆಳೆಸಿಕೊಂಡವರು. ಬ್ಯಾಂಕಿಂಗ್ ವೃತ್ತಿಯ ನಡುವೆಯೂ ತಮ್ಮ ಕಲಾಸಕ್ತಿಯನ್ನು ಕೈಬಿಡದೆ, ಕನ್ನಡದ ಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಹಾಗೂ ದೀಪಾವಳಿ ವಿಶೇಷಾಂಕಗಳಲ್ಲಿ ಕಾರ್ಟೂನ್ ಮತ್ತು ಕ್ಯಾರಿಕೇಚರ್‌ಗಳ ಮೂಲಕ ತಮ್ಮದೇ ಛಾಪು ಮೂಡಿಸಿದವರು.

ಬೆಂಗಳೂರಿನ ಜೆ.ಪಿ. ನಗರ ನಿವಾಸಿಯಾಗಿರುವ ಶ್ರೀಧರ್ ಅವರಿಗೆ ಕಾರ್ಟೂನ್ ಮತ್ತು ಕ್ಯಾರಿಕೇಚರ್ ಕೇವಲ ಕಲೆಯಲ್ಲ, ಅದು ಪ್ಯಾಶನ್. ಸಾವಿರಾರು ಕಾರ್ಟೂನ್ ಮತ್ತು ಕ್ಯಾರಿಕೇಚರ್‌ಗಳನ್ನು ರೂಪಿಸಿರುವ ಅವರು, 67ರ ಹರೆಯದಲ್ಲೂ ತಮ್ಮ ರೇಖೆಗಳಲ್ಲಿ ಯುವಕರ ಚುರುಕುತನವನ್ನು ಉಳಿಸಿಕೊಂಡಿದ್ದಾರೆ.
ಗಣ್ಯಾತಿಗಣ್ಯರಾಗಿರಲಿ.. ಸಾಮಾನ್ಯ ವ್ಯಕ್ತಿಯಾಗಿರಲಿ.. ಎದುರಿಗಿರುವವರ ಮುಖವನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ವ್ಯಕ್ತಿತ್ವದ ವಿಶಿಷ್ಟ ಲಕ್ಷಣವನ್ನು ಕೆಲವೇ ಕ್ಷಣಗಳಲ್ಲಿ ಹಿಡಿದುಕೊಂಡು ವ್ಯಂಗ್ಯ ಭಾವಚಿತ್ರವಾಗಿ ರೂಪಿಸುವುದು ಶ್ರೀಧರ್ ಅವರ ವಿಶೇಷತೆ.

ಬಿಳಿ ಹಾಳೆ.. ಕಪ್ಪು ಇಂಕ್.. ಕೆಲವು ಚುರುಕಾದ ರೇಖೆಗಳು.. ಅಷ್ಟೇ ಸಾಕು. ಅವರ ಕೈಯಲ್ಲಿ ಒಂದು ಮುಖವೇ ಹೊಸ ರೂಪ ಪಡೆದುಕೊಳ್ಳುತ್ತದೆ. ರೇಖೆಗಳು ಮಾತನಾಡುತ್ತವೆ.. ಮುಖ ಭಾವನೆಗಳನ್ನು ಹೇಳುತ್ತದೆ.. ವ್ಯಂಗ್ಯ ನಗಿಸುತ್ತದೆ.
ಶ್ರೀಧರ್ ಅವರ ಬದುಕಿನಲ್ಲಿ ಕಲೆಗೆ ಮತ್ತೊಂದು ಸುಂದರ ಸಂಗಾತಿಯೂ ಇದ್ದಾರೆ. ಅವರ ಪತ್ನಿ ವೆಂಕಟಲಕ್ಷ್ಮಿ ಅದ್ಭುತ ವೀಣಾ ಕಲಾವಿದೆ. ಒಂದೆಡೆ ಶ್ರೀಧರ್ ಅವರ ರೇಖೆಗಳು ಮುಖಗಳಿಗೆ ಜೀವ ತುಂಬಿದರೆ, ಮತ್ತೊಂದೆಡೆ ವೆಂಕಟಲಕ್ಷ್ಮಿಯವರ ವೀಣೆಯ ತಂತಿಗಳು ಸಂಗೀತದ ಮಾಧುರ್ಯವನ್ನು ಹರಿಸುತ್ತವೆ.
ಒಬ್ಬರ ಕೈಯಲ್ಲಿ ರೇಖೆಗಳ ನಾದ.. ಮತ್ತೊಬ್ಬರ ಕೈಯಲ್ಲಿ ವೀಣೆಯ ನಾದ. ಕಲೆ ಬೇರೆ.. ಅಭಿವ್ಯಕ್ತಿ ಬೇರೆ.. ಆದರೆ ಕಲೆಯ ಮೇಲಿನ ಪ್ರೀತಿ ಮಾತ್ರ ಒಂದೇ.