ಮಹಿಳಾ ಮೀಸಲಾತಿ ಸಂವಿಧಾನದ ಭರವಸೆಯಾಗಿ ಉಳಿಯದೆ ರಾಜಕೀಯ ವಾಸ್ತವವಾಗಬೇಕು: ಡಾ.ಜಿ.ಪರಮೇಶ್ವರ
Dr.G.Parameshwara: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವಿಭಾಗದ ಪ್ರಥಮ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿದರು.
ಬೆಂಗಳೂರು: ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯನ್ನು ಸಾಧ್ಯವಾದಷ್ಟು ಶೀಘ್ರ ನಡೆಯುವ ಚುನಾವಣೆಗಳಿಂದಲೇ ಜಾರಿಗೊಳಿಸಲು ಕಾನೂನಾತ್ಮಕವಾಗಿ ಸ್ಪಷ್ಟವಾದ, ನಿಗದಿತ ಕಾಲಮಿತಿಯ ಕಾರ್ಯಯೋಜನೆಯನ್ನು ರೂಪಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವಿಭಾಗದ ಪ್ರಥಮ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯವು ಕೇವಲ ಸಂವಿಧಾನದಲ್ಲಿ ನೀಡಿರುವ ಭರವಸೆಯಾಗಿ ಉಳಿಯಬಾರದು. ಆಡಳಿತದಲ್ಲಿ ಹಾಗೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ನಿಜವಾದ ಪಾಲುದಾರಿಕೆ ದೊರೆಯಬೇಕು ಎಂದು ಒತ್ತಿ ಹೇಳಿದರು.

'ಮಹಿಳೆಯರಿಗೆ ನಾಯಕತ್ವ ವಹಿಸುವ ಸಾಮರ್ಥ್ಯವಿದೆಯೇ ಎಂಬುದು ಇಂದು ನಮ್ಮ ಮುಂದಿರುವ ಪ್ರಶ್ನೆಯಲ್ಲ. ಮಹಿಳೆಯರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಆದರೆ ಮಹಿಳೆಯರೊಂದಿಗೆ ಅಧಿಕಾರ ಹಂಚಿಕೊಳ್ಳುವ ಧೈರ್ಯವನ್ನು ನಮ್ಮ ಸಾಂಸ್ಥಿಕ ರಚನೆಗಳು ತೋರಿವೆಯೇ ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ' ಎಂದು ತಿಳಿಸಿದರು.
ಈ ಸಮ್ಮೇಳನವು ಕೇವಲ ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಚರ್ಚಿಸುವ ಕಾರ್ಯಕ್ರಮವಲ್ಲ. ಸಮಾನತೆ, ವಿಶ್ವಾಸಾರ್ಹತೆ ಹಾಗೂ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಮಹತ್ವದ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಸುದೀರ್ಘ ಹೋರಾಟವನ್ನು ಸ್ಮರಿಸಿದ ಡಾ.ಪರಮೇಶ್ವರ ಅವರು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಸರ್ಕಾರವು 2008ರಲ್ಲಿ ಸಂವಿಧಾನದ 108ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು ಎಂದು ತಿಳಿಸಿದರು. ಅಂದಿನ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿತ್ತು. ಮಸೂದೆಯ ಪರವಾಗಿ 186 ಮತಗಳು ಹಾಗೂ ವಿರುದ್ಧವಾಗಿ ಕೇವಲ ಒಂದು ಮತ ಚಲಾವಣೆಯಾಗಿತ್ತು ಎಂದು ನೆನಪಿಸಿದರು.

ಆ ಮಸೂದೆ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರಗೊಳ್ಳಲು ಸಾಧ್ಯವಾಗದಿದ್ದರೂ, ಮಹಿಳಾ ಮೀಸಲಾತಿಗೆ ಸಂಸತ್ತಿನಲ್ಲಿ ಎಷ್ಟು ದೊಡ್ಡ ಮಟ್ಟದ ಬೆಂಬಲವಿದೆ ಎಂಬುದನ್ನು ಅಂದಿನ ಬೆಳವಣಿಗೆ ತೋರಿಸಿಕೊಟ್ಟಿತ್ತು ಎಂದು ಹೇಳಿದರು.
2018ರ ಜುಲೈನಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್ ಪಕ್ಷವು ಯಾವುದೇ ಷರತ್ತುಗಳಿಲ್ಲದೆ ಬೆಂಬಲ ನೀಡುವುದಾಗಿ ತಿಳಿಸಿದ್ದನ್ನೂ ಅವರು ಸ್ಮರಿಸಿದರು. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಕಾರಣದಿಂದ ಮಹಿಳಾ ಮೀಸಲಾತಿ ಜಾರಿಯಲ್ಲಿ ಅನಗತ್ಯ ವಿಳಂಬವಾಗಬಾರದು ಎಂದು ಕಾಂಗ್ರೆಸ್ ಪಕ್ಷವು ತನ್ನ 2024ರ ಚುನಾವಣಾ ಪ್ರಣಾಳಿಕೆಯಲ್ಲಿಯೂ ಒತ್ತಾಯಿಸಿತ್ತು ಎಂದು ತಿಳಿಸಿದರು.
2023ರಲ್ಲಿ ಜಾರಿಗೆ ಬಂದ ಸಂವಿಧಾನದ 106ನೇ ತಿದ್ದುಪಡಿಯ ಮೂಲಕ ಮಹಿಳಾ ಮೀಸಲಾತಿಗೆ ಸಂವಿಧಾನಾತ್ಮಕ ಮಾನ್ಯತೆ ನೀಡಿರುವುದನ್ನು ಸ್ವಾಗತಿಸಿದ ಡಾ.ಪರಮೇಶ್ವರ ಅವರು, ಈ ಭರವಸೆ ಇನ್ನೂ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನಿಗದಿತ ಸ್ಥಾನಗಳನ್ನು ಕಲ್ಪಿಸುವ ಮೂಲಕ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
2026ರ ಏಪ್ರಿಲ್ನಲ್ಲಿ ಈ ಸಂವಿಧಾನ ತಿದ್ದುಪಡಿ ಅಧಿಕೃತವಾಗಿ ಜಾರಿಗೆ ಬಂದಿದ್ದರೂ, ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ಜನಗಣತಿ ಹಾಗೂ ಅದರ ನಂತರ ನಡೆಯುವ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಜೋಡಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಕ್ಷೇತ್ರ ಪುನರ್ವಿಂಗಡಣೆ ಹಾಗೂ ಶಾಸನಸಭೆಗಳ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ಮತ್ತೊಂದು ಸಂವಿಧಾನ ತಿದ್ದುಪಡಿಯನ್ನು 2026ರ ಏಪ್ರಿಲ್ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲು ನಡೆದ ಪ್ರಯತ್ನ ವಿಫಲವಾಗಿರುವುದನ್ನೂ ಅವರು ಪ್ರಸ್ತಾಪಿಸಿದರು.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ವಿಚಾರವನ್ನು ಚುನಾವಣಾ ಕ್ಷೇತ್ರಗಳ ವ್ಯಾಪಕ ಪುನರ್ರಚನೆ ಹಾಗೂ ಅದರ ಸುತ್ತಲಿನ ಭಿನ್ನಾಭಿಪ್ರಾಯಗಳೊಂದಿಗೆ ಜೋಡಿಸಿರುವುದರಿಂದ ಅನುಷ್ಠಾನದಲ್ಲಿ ಎಂತಹ ಸಮಸ್ಯೆಗಳು ಎದುರಾಗುತ್ತಿವೆ ಎಂಬುದನ್ನು ಈ ಬೆಳವಣಿಗೆಗಳು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟರು.
'ಕೇಂದ್ರ ಸರ್ಕಾರ ಹಾಗೂ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನನ್ನ ಮನವಿ ಏನೆಂದರೆ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಸಾಧ್ಯವಾದಷ್ಟು ಶೀಘ್ರ ನಡೆಯುವ ಚುನಾವಣೆಗಳಿಂದಲೇ ಕಲ್ಪಿಸಲು ಸ್ಪಷ್ಟವಾದ, ಕಾನೂನುಬದ್ಧವಾದ ಹಾಗೂ ನಿಗದಿತ ಕಾಲಮಿತಿಯ ಮಾರ್ಗವನ್ನು ರೂಪಿಸುವ ಬಗ್ಗೆ ದೇಶ ಒಮ್ಮತಕ್ಕೆ ಬರಬೇಕು' ಎಂದು ಒತ್ತಾಯಿಸಿದರು.
ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ವ್ಯಾಪಕ ಭಿನ್ನಾಭಿಪ್ರಾಯಗಳಿಂದ ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ಪ್ರತ್ಯೇಕಗೊಳಿಸಲು ಅಗತ್ಯವಿರುವ ಸಂವಿಧಾನಾತ್ಮಕ ಬದಲಾವಣೆಗಳ ಬಗ್ಗೆ ಸಂಸತ್ತು ಒಮ್ಮತದ ಮೂಲಕ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
'ಸಂವಿಧಾನದಲ್ಲಿ ನೀಡಿರುವ ಭರವಸೆ ಕೇವಲ ಬರಹಕ್ಕೆ ಸೀಮಿತವಾಗಬಾರದು. ಮುಂದಿನ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಆ ಭರವಸೆ ನಿಜವಾಗಿಯೂ ಜಾರಿಯಾಗಿರುವುದನ್ನು ದೇಶದ ಜನರು ನೋಡುವಂತಾಗಬೇಕು' ಎಂದು ಹೇಳಿದರು.
'ಭದ್ರ ಬುನಾದಿ, ಬಲಿಷ್ಠ ಧ್ವನಿ: ಎಲ್ಲರನ್ನೂ ಒಳಗೊಳ್ಳುವ ಸೈಬರ್ ಜಗತ್ತು ಮತ್ತು ನೂತನ ಮಹಿಳಾ ಶಾಸಕರಿಗೆ ಮಾರ್ಗದರ್ಶನದ ಹಾದಿಗಳು' ಎಂಬ ಸಮ್ಮೇಳನದ ವಿಷಯದ ಕುರಿತು ಮಾತನಾಡಿದ ಡಾ. ಪರಮೇಶ್ವರ ಅವರು, ಡಿಜಿಟಲ್ ವೇದಿಕೆಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನ ಸೆಳೆದರು.
ಡಿಜಿಟಲ್ ವೇದಿಕೆಗಳಿಂದ ಮಹಿಳೆಯರಿಗೆ ನಾಗರಿಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು, ಸಮುದಾಯಗಳನ್ನು ಸಂಘಟಿಸಲು ಹಾಗೂ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳು ದೊರೆತಿವೆ. ಆದರೆ ಇದೇ ವೇದಿಕೆಗಳಲ್ಲಿ ಮಹಿಳಾ ನಾಯಕಿಯರು ಅವಹೇಳನಕಾರಿ ಟೀಕೆಗಳು, ಬೆದರಿಕೆಗಳು, ಸಂಘಟಿತ ಕಿರುಕುಳ, ತಿರುಚಿದ ಚಿತ್ರಗಳು ಹಾಗೂ ಡೀಪ್ಫೇಕ್ಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ದಾಳಿಗಳನ್ನು ಕೇವಲ ಮಹಿಳೆಯರ ವೈಯಕ್ತಿಕ ಸುರಕ್ಷತೆಯ ಸಮಸ್ಯೆ ಎಂದು ನೋಡಬಾರದು. ಇವು ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆಗೂ ದೊಡ್ಡ ಬೆದರಿಕೆಯಾಗಿವೆ ಎಂದು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳು ಹಾಗೂ ಅದರ ಭಾರತ ಪ್ರಾದೇಶಿಕ ವಿಭಾಗದ ಮಹಿಳಾ ಶಾಸಕರಿಗಾಗಿ ಸಾಮಾನ್ಯ ಸುರಕ್ಷತಾ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಬೇಕು ಎಂದು ಸಲಹೆ ನೀಡಿದರು. ಸೈಬರ್ ದಾಳಿಗಳು ಹಾಗೂ ಕಿರುಕುಳದ ಘಟನೆಗಳ ಬಗ್ಗೆ ಗೌಪ್ಯವಾಗಿ ದೂರು ನೀಡುವ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ತ್ವರಿತ ನೆರವು, ಡಿಜಿಟಲ್ ಸುರಕ್ಷತೆ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಅರಿವು, ಸಾರ್ವಜನಿಕ ಸಂವಹನ ಹಾಗೂ ಶಾಸನಸಭೆಯ ಕಾರ್ಯಕಲಾಪಗಳಿಗೆ ಸಂಬಂಧಿಸಿದ ಸಂಶೋಧನೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡುವ ವ್ಯವಸ್ಥೆಗಳನ್ನು ಇದರಲ್ಲಿ ಒಳಗೊಳ್ಳಬೇಕು ಎಂದು ಹೇಳಿದರು.
ಮೊದಲ ಬಾರಿಗೆ ಆಯ್ಕೆಯಾಗುವ ಮಹಿಳಾ ಜನಪ್ರತಿನಿಧಿಗಳಿಗೆ ಅನುಭವ ಹೊಂದಿರುವ ಸಂಸದರು ಮತ್ತು ಶಾಸಕರಿಂದ ಮಾರ್ಗದರ್ಶನ ದೊರೆಯುವಂತೆ ಸ್ವತಂತ್ರವಾದ, ಪಕ್ಷಾತೀತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು. ಇದರಿಂದ ಹೊಸದಾಗಿ ಆಯ್ಕೆಯಾಗುವ ಮಹಿಳಾ ಜನಪ್ರತಿನಿಧಿಗಳು ಆತ್ಮವಿಶ್ವಾಸ, ಅಗತ್ಯ ಜ್ಞಾನ ಹಾಗೂ ಶಾಸನಸಭೆಗಳ ಕಾರ್ಯನಿರ್ವಹಣೆಯ ಬಗ್ಗೆ ತಿಳಿವಳಿಕೆ ಪಡೆದುಕೊಂಡು ಸಮರ್ಥವಾಗಿ ನಾಯಕತ್ವ ವಹಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇವಲ ರಾಜಕೀಯ ಪ್ರಾತಿನಿಧ್ಯ ನೀಡುವುದರಿಂದ ಮಹಿಳಾ ಸಬಲೀಕರಣದ ಉದ್ದೇಶ ಈಡೇರುವುದಿಲ್ಲ ಎಂದು ಒತ್ತಿ ಹೇಳಿದ ಅವರು, ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಿಂದ ಬರುವ ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ಭಾಗವಹಿಸಲು ಅನುಕೂಲವಾಗುವಂತಹ ವಾತಾವರಣವನ್ನು ನಮ್ಮ ಶಾಸನಸಭೆಗಳು ನಿರ್ಮಿಸಬೇಕು ಎಂದು ಹೇಳಿದರು.
ಮಹಿಳಾ ಜನಪ್ರತಿನಿಧಿಗಳಿಗೆ ಶಾಸನಸಭೆಯ ಕಾರ್ಯಕಲಾಪಗಳಿಗೆ ಸಂಬಂಧಿಸಿದ ವಿಶ್ವಾಸಾರ್ಹ ಸಂಶೋಧನಾ ನೆರವು, ಸುರಕ್ಷಿತ ಪ್ರಯಾಣ ಮತ್ತು ವಸತಿ ವ್ಯವಸ್ಥೆ, ಸಾಧ್ಯವಿರುವ ಕಡೆಗಳಲ್ಲಿ ಕುಟುಂಬದ ಜವಾಬ್ದಾರಿಗಳಿಗೂ ಅನುಕೂಲವಾಗುವಂತಹ ಸದನದ ಕಾರ್ಯವಿಧಾನಗಳು, ಮಕ್ಕಳ ಆರೈಕೆಗೆ ಸೂಕ್ತ ಸೌಲಭ್ಯಗಳು ಹಾಗೂ ಕಿರುಕುಳದ ವಿರುದ್ಧ ಪರಿಣಾಮಕಾರಿ ದೂರು ಮತ್ತು ಪರಿಹಾರ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಇದರ ಜೊತೆಗೆ ಪ್ರಮುಖ ಶಾಸನಸಭಾ ಸಮಿತಿಗಳ ಅಧ್ಯಕ್ಷತೆಯನ್ನು ಮಹಿಳೆಯರಿಗೆ ವಹಿಸಲು ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಹೇಳಿದರು.
ವಿಶೇಷವಾಗಿ ರಾಜಕೀಯ ಹಿನ್ನೆಲೆಯ ಕುಟುಂಬಗಳಿಂದ ಬಾರದ ಹಾಗೂ ಹೆಚ್ಚಿನ ಆರ್ಥಿಕ ಸಂಪನ್ಮೂಲಗಳಿಲ್ಲದ ಮಹಿಳೆಯರು ಕೂಡ ರಾಜಕೀಯ ಪ್ರವೇಶಿಸಿ, ಇತರರಂತೆ ಸಮಾನ ಅವಕಾಶಗಳೊಂದಿಗೆ ನಾಯಕತ್ವ ವಹಿಸುವಂತಾಗಲು ಇಂತಹ ವ್ಯವಸ್ಥೆಗಳು ಅತ್ಯಂತ ಅಗತ್ಯವಾಗಿವೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಚಿಂತನೆಗೆ ಕರ್ನಾಟಕ ನೀಡಿರುವ ಐತಿಹಾಸಿಕ ಕೊಡುಗೆಯನ್ನು ಸ್ಮರಿಸಿದ ಡಾ.ಪರಮೇಶ್ವರ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಅಲ್ಲಮಪ್ರಭುಗಳೊಂದಿಗೆ ಗುರುತಿಸಿಕೊಂಡಿರುವ ಅನುಭವ ಮಂಟಪದ ಬಗ್ಗೆ ಪ್ರಸ್ತಾಪಿಸಿದರು. ಅಂದಿನ ಅನುಭವ ಮಂಟಪದಲ್ಲಿ ಸಮಾನತೆ, ಕಾಯಕದ ಗೌರವ, ಎಲ್ಲರೂ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮನೋಭಾವ ಹಾಗೂ ಸಾರ್ವಜನಿಕ ಚರ್ಚೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಂತಹ ಮೌಲ್ಯಗಳಿಗೆ ಮಹತ್ವ ನೀಡಲಾಗಿತ್ತು ಎಂದು ಹೇಳಿದರು. ಶರಣರು ಪ್ರತಿಪಾದಿಸಿದ ಎಲ್ಲರನ್ನೂ ಒಳಗೊಳ್ಳುವ ಚಿಂತನೆಗಳು ಇಂದಿನ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ನಮಗೆ ಮಹತ್ವದ ಪಾಠಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಸಂವಿಧಾನ ರಚನೆಯಲ್ಲಿ ಮಹಿಳೆಯರು ನೀಡಿರುವ ಕೊಡುಗೆಯನ್ನು ಸ್ಮರಿಸಿದ ಅವರು, ಸರೋಜಿನಿ ನಾಯ್ಡು, ಕಸ್ತೂರಬಾ ಗಾಂಧಿ, ಅರುಣಾ ಆಸಫ್ ಅಲಿ, ಸುಚೇತಾ ಕೃಪಲಾನಿ, ಕಮಲಾದೇವಿ ಚಟ್ಟೋಪಾಧ್ಯಾಯ, ಹಂಸಾ ಮೆಹ್ತಾ, ದುರ್ಗಾಬಾಯಿ ದೇಶಮುಖ್ ಹಾಗೂ ರಾಜಕುಮಾರಿ ಅಮೃತ್ ಕೌರ್ ಅವರಂತಹ ಮಹಾನ್ ಮಹಿಳಾ ನಾಯಕಿಯರಿಗೆ ಗೌರವ ಸಲ್ಲಿಸಿದರು.
ನಮ್ಮ ದೇಶವು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಆರಂಭದಿಂದಲೇ ಎಲ್ಲ ವಯಸ್ಕರಿಗೂ ಮತದಾನದ ಹಕ್ಕು ನೀಡಿರುವುದು ಸಮಾನತೆಯ ವಿಚಾರದಲ್ಲಿ ಕೈಗೊಂಡ ಅತ್ಯಂತ ಮಹತ್ವದ ನಿರ್ಧಾರವಾಗಿದೆ ಎಂದು ಹೇಳಿದರು. ಆ ಸಮಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಮಹಿಳೆಯರಿಗೆ ಪುರುಷರಷ್ಟೇ ಸಮಾನವಾದ ಮತದಾನದ ಹಕ್ಕು ದೊರೆತಿರಲಿಲ್ಲ. ಅಂತಹ ಸಂದರ್ಭದಲ್ಲಿ ಭಾರತವು ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡುವ ಮೂಲಕ ಸಮಾನತೆಯ ಬಗ್ಗೆ ತನ್ನ ಬದ್ಧತೆಯನ್ನು ತೋರಿಸಿತ್ತು ಎಂದು ಅಭಿಪ್ರಾಯಪಟ್ಟರು.
ಆದರೆ ಮತದಾನದ ಹಕ್ಕು ಪಡೆದ ಮಹಿಳೆಯರು ಆಡಳಿತ ನಡೆಸುವ ಅಧಿಕಾರವನ್ನು ಸಮಾನವಾಗಿ ಪಡೆಯುವವರೆಗಿನ ನಮ್ಮ ಪ್ರಯಾಣ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳಿದರು.
2047ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿರುವ ಹಿನ್ನೆಲೆಯಲ್ಲಿ ಮಾತನಾಡಿದ ಡಾ.ಪರಮೇಶ್ವರ ಅವರು, ಗ್ರಾಮಸಭೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಜ್ಯ ವಿಧಾನಸಭೆಗಳು, ಸಂಸತ್ತು ಹಾಗೂ ಸರ್ಕಾರದ ಅತ್ಯುನ್ನತ ಹುದ್ದೆಗಳವರೆಗೆ ಪ್ರತಿಯೊಂದು ಹಂತದಲ್ಲಿಯೂ ಮಹಿಳೆಯರು ನಾಯಕತ್ವ ವಹಿಸುವ ಅವಕಾಶಗಳನ್ನು ಪಡೆಯುವಂತಾಗಬೇಕು. ಅಂತಹ ಪರಿಸ್ಥಿತಿಯನ್ನು ನಿರ್ಮಿಸಲು ನಾವು ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬುದರ ಆಧಾರದಲ್ಲಿಯೇ ದೇಶದ ಪ್ರಜಾಪ್ರಭುತ್ವದ ಪ್ರಗತಿಯನ್ನು ಅಳೆಯಬೇಕು ಎಂದು ಹೇಳಿದರು.
ದೇಶದ ಅತ್ಯಂತ ಸಣ್ಣ ಹಳ್ಳಿಗಳಲ್ಲಿ ಬೆಳೆಯುವ ಪ್ರತಿಯೊಬ್ಬ ಹೆಣ್ಣುಮಗುವೂ ಮಹಿಳೆಯರು ರಾಜಕೀಯ ಅಧಿಕಾರವನ್ನು ಚಲಾಯಿಸುವುದನ್ನು ನೋಡಬೇಕು. ತಾನೂ ಕೂಡ ಒಂದು ದಿನ ಅಂತಹ ಸ್ಥಾನಕ್ಕೆ ಏರಬಹುದು, ತನಗೂ ಅಂತಹ ಅವಕಾಶಗಳಿವೆ ಎಂಬ ವಿಶ್ವಾಸ ಆಕೆಯಲ್ಲಿ ಮೂಡುವಂತಹ ಭಾರತವನ್ನು ನಾವು ನಿರ್ಮಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ತಮ್ಮ ಭಾಷಣದ ಕೊನೆಯಲ್ಲಿ ಡಾ.ಪರಮೇಶ್ವರ ಅವರು, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಪ್ರಜಾಪ್ರಭುತ್ವವು ಅವರಿಗೆ ಮಾಡುವ ಉಪಕಾರವಲ್ಲ. ಬದಲಾಗಿ ಸಮಾನತೆಯ ಬಗ್ಗೆ ಪ್ರಜಾಪ್ರಭುತ್ವ ನೀಡಿರುವ ಭರವಸೆಯನ್ನು ಎಷ್ಟರಮಟ್ಟಿಗೆ ಈಡೇರಿಸಿದೆ ಎಂಬುದನ್ನು ಅಳೆಯುವ ಮಾನದಂಡವಾಗಿದೆ ಎಂದು ಹೇಳಿದರು.
ಮಹಿಳೆಯರಿಗೆ ಕೇವಲ ಸಾಂಕೇತಿಕ ಗೌರವ ನೀಡುವುದನ್ನು ಮೀರಿ, ನಿಜವಾದ ರಾಜಕೀಯ ಅಧಿಕಾರ, ಶಾಸನಸಭೆಗಳ ಕಾರ್ಯಕಲಾಪಗಳಲ್ಲಿ ಅರ್ಥಪೂರ್ಣ ಭಾಗವಹಿಸುವಿಕೆ ಹಾಗೂ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಮಾನತೆಯನ್ನು ಅನುಭವಿಸುವ ಅವಕಾಶಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ದೇಶಕ್ಕೆ ಪ್ರಬಲ ಸಂದೇಶವನ್ನು ನೀಡಬೇಕು ಎಂದು ಕರೆ ನೀಡಿದರು.