TVS ಕುಟುಂಬದಲ್ಲಿ ಆಸ್ತಿ ವಿವಾದ: ಸಮಾನ ಪಾಲಿಗಾಗಿ ಲಕ್ಷ್ಮಿ ವೇಣು ಒತ್ತಾಯ!
TVS Family Dispute: ದೇಶದ ಪ್ರತಿಷ್ಠಿತ 'ಟಿವಿಎಸ್ ಗ್ರೂಪ್' ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿವಾದ ಭುಗಿಲೆದ್ದಿದ್ದು, ತೀವ್ರ ಸಂಚಲನ ಮೂಡಿಸಿದೆ.
ಚೆನ್ನೈ: ದೇಶದ ಪ್ರತಿಷ್ಠಿತ 'ಟಿವಿಎಸ್ ಗ್ರೂಪ್' ಕುಟುಂಬದಲ್ಲಿ ಆಸ್ತಿ ಹಂಚಿಕೆ ವಿವಾದ ಭುಗಿಲೆದ್ದಿದ್ದು, ತೀವ್ರ ಸಂಚಲನ ಮೂಡಿಸಿದೆ.
ಟಿವಿಎಸ್ ಸಮೂಹದ ಮುಖ್ಯಸ್ಥ ವೇಣು ಶ್ರೀನಿವಾಸನ್ ಅವರಿಗೆ ಸೇರಿದ ಕುಟುಂಬದ ಜಂಟಿ ಆಸ್ತಿಗಳನ್ನು ಕಾನೂನುಬದ್ಧವಾಗಿ ಪಾಲು ಮಾಡುವಂತೆ ಪುತ್ರಿ ಲಕ್ಷ್ಮಿ ವೇಣು ಕೋರಿದ್ದಾರೆ.
ಈ ಸಂಬಂಧ ತಮ್ಮ ತಂದೆಗೆ ನೋಟಿಸ್ ಕಳುಹಿಸಲಾಗಿದ್ದು, ಕುಟುಂಬದ ಯಜಮಾನನಾಗಿ ತಮ್ಮ ಜವಾಬ್ದಾರಿಗಳನ್ನು ಪೂರೈಸಿ, ಆಸ್ತಿಯನ್ನು ನ್ಯಾಯಯುತವಾಗಿ ಹಂಚಿಕೆ ಮಾಡುವಂತೆ ಲಕ್ಷ್ಮಿ ಕೇಳಿದ್ದಾರೆ.
2005ರಲ್ಲಿ ತಿದ್ದುಪಡಿ ಮಾಡಲ್ಪಟ್ಟ 'ಹಿಂದೂ ಉತ್ತರಾಧಿಕಾರ ಕಾಯ್ದೆ, 1956'ರ ಅಡಿಯಲ್ಲಿ, ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ತನಗೂ ಸಮಾನ ಪಾಲು ಪಡೆಯುವ ಹಕ್ಕಿದೆ ಎಂದು ವಾದಿಸಿದ್ದಾರೆ.
ಈ ಕಾಯ್ದೆಯ 'ಸೆಕ್ಷನ್ 6'ನ್ನು ಉಲ್ಲೇಖಿಸಿ, ಪೂರ್ವಜರ ಆಸ್ತಿಯಲ್ಲಿ ಪುತ್ರಿಯರಿಗೂ, ಪುತ್ರರಷ್ಟೇ ಹಕ್ಕುಗಳಿರುತ್ತವೆ. ಅವರು ಸ್ವತಂತ್ರವಾಗಿ ಆಸ್ತಿಯಲ್ಲಿ ಪಾಲು ಕೋರಬಹುದು ಎಂದು ಪ್ರತಿಪಾದಿಸಿದ್ದಾರೆ ಎಂದು 'ಎನ್‌ಡಿ ಟಿವಿ ವರದಿ ಮಾಡಿದೆ.
'ಟಿವಿಎಸ್ ಮೋಟಾರ್ ಕಂಪನಿ' ಅಧ್ಯಕ್ಷ, ತಮ್ಮ ಸಹೋದರ ಸುದರ್ಶನ್ ವೇಣು ಅವರಿಗೆ ಕುಟುಂಬದ ಸಂಪತ್ತಿನ ಹೆಚ್ಚಿನ ಪಾಲನ್ನು ನೀಡಲಾಗಿದೆ ಎಂದು ಲಕ್ಷ್ಮಿ ವೇಣು ಆರೋಪಿಸಿದ್ದಾರೆ.
ಲಕ್ಷ್ಮಿ ಅವರಿಗೆ ತಾಯಿ ಮಲ್ಲಿಕಾ ಶ್ರೀನಿವಾಸನ್ ಅವರಿಂದಲೂ ಬೆಂಬಲ ವ್ಯಕ್ತವಾಗಿದೆ. ಇಲ್ಲಿಯವರೆಗೆ ಸೌಹಾರ್ದಯುತ ಇತ್ಯರ್ಥಕ್ಕೆ ನಡೆಸಿದ ಪ್ರಯತ್ನಗಳು ಸಫಲಗೊಂಡಿಲ್ಲ. ಕೌಟುಂಬಿಕ ವಿಷಯಗಳಲ್ಲಿ ಮಗ ಮತ್ತು ಮಗಳಿಗೆ ಸಮಾನ ಹಕ್ಕುಗಳಿರಬೇಕು ಎಂದು ಹೇಳಿದ್ದಾರೆ.
2020ರಲ್ಲಿ ಟಿವಿಎಸ್ ಕುಟುಂಬ ಆಸ್ತಿ ವಿಭಜನೆಯಾದಾಗ, ಟಿವಿಎಸ್ ಹೋಲ್ಡಿಂಗ್ಸ್, ಟಿವಿಎಸ್ ಮೋಟಾರ್ ಕಂಪನಿ, ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಹಾಗೂ ಸುಂದರಂ-ಕ್ಲೇಟನ್ ಕಂಪನಿಗಳು ವೇಣು ಶ್ರೀನಿವಾಸನ್ ಅವರ ಪಾಲಿಗೆ ಬಂದಿದ್ದವು.