ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯೋಜನೆಯಾದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅರ್ಹರು ಸೇವಾ ಸಿಂಧು ಪೋರ್ಟಲ್, ಹತ್ತಿರದ ಗ್ರಾಮ ಒನ್ ಕೇಂದ್ರ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು 2023, 2024, 2025 ಹಾಗೂ ಸದ್ಯ 2026ನೇ ಸಾಲಿನಲ್ಲಿ ಯಾವುದೇ ವೃತ್ತಿ ಪರ ಕೋರ್ಸ್, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವ-ಉದ್ಯೋಗ ಹೊಂದಿಲ್ಲದವರು, ಮತ್ತು ಉನ್ನತ ವ್ಯಾಸಂಗ ಮುಂದುವರೆಸದೇ ಇರುವವರು ಹಾಗೂ ಕರ್ನಾಟಕದಲ್ಲಿ ಕನಿಷ್ಠ 6 ವರ್ಷ ವಾಸವಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅದರಂತೆ ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ಅರ್ಹತೆ ಹೊಂದಿದವರಿಗೆ ಫಲಿತಾಂಶ ದಿನಾಂಕದಿಂದ 180 ದಿನಗಳ ನಂತರ ಪದವೀಧರರಿಗೆ ಪ್ರತೀ ತಿಂಗಳು ರೂ.3 ಸಾವಿರ ಹಾಗೂ ಡಿಪ್ಲೋಮಾ ಪಡೆದವರಿಗೆ ರೂ.1,500 ಗಳನ್ನು ನೇರ ನಗದು ವರ್ಗಾವಣೆ ಮೂಲಕ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಮೊದಲ ಕಂತಿನ ಹಣ ಪಾವತಿಯಾದ ನಂತರ, ಪ್ರತಿ ತಿಂಗಳು 25ರೊಲೈಗೆ ಸ್ವಯಂ ಘೋಷಣೆ ಮಾಡುವುದು ಕಡ್ಡಾಯವಾಗಿದ್ದು, ಸೇವಾ ಒನ್ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಮಾಡಿ ಸ್ವೀಕೃತಿ ಪಡೆಯುವುದು ಅಗತ್ಯವಾಗಿರುತ್ತದೆ.
ಅರ್ಜಿ ಸಲ್ಲಿಸಿರುವವರು ಸೇವಾ ಸಿಂಧು ಪೋರ್ಟಲ್‍ನಲ್ಲಿ ತಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಂಡು ಸ್ಥಳೀಯ ನಿವಾಸಿ ಪರಿಶೀಲನೆ ಬಾಕಿ ಇದ್ದಲ್ಲಿ, ಮೂಲ ದಾಖಲೆಗಳೊಂದಿಗೆ ಸಂಬಂಧಿತ ಕಛೇರಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿ ಎಂದು ಪರಿಶೀಲಿಸಿ ದೃಢೀಕರಿಸಿಕೊಳ್ಳಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗೆ ನಗರದ ಪಡೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ (ದೂರವಾಣಿ ಸಂಖ್ಯೆ: 0824-2457139) ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ (ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.