Dakshina Kannada Rajyotsava Award: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅಂತರರಾಷ್ಟ್ರೀಯ ಯೋಗ ತಜ್ಞ

Dakshina Kannada District Rajyotsava Award: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಅಂತರರಾಷ್ಟ್ರೀಯ ಯೋಗ ತಜ್ಞ ಹರೀಶ್ ಕೇವಳ ಭಾಜನರಾಗಿದ್ದಾರೆ.

Nov 5, 2026 - 11:25
Dakshina Kannada Rajyotsava Award: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅಂತರರಾಷ್ಟ್ರೀಯ ಯೋಗ ತಜ್ಞ

ಮಂಗಳೂರು: ಗ್ರಾಮೀಣ ಪರಿಸರದಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಪಡೆದು, ಯೋಗ ವಿದ್ಯೆಯ ಮೂಲಕ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕಂಪನ್ನು ಪಸರಿಸಿದ ಸಾಧಕ ಹರೀಶ್ ಕೇವಳ (Harish Kevala) ಅವರ ಜೀವನಪಯಣ ನಿಜಕ್ಕೂ ಪ್ರೇರಣಾದಾಯಕವಾಗಿದೆ. 

ದಕ್ಷಿಣ ಕನ್ನಡದ ಕಡಬ ತಾಲೂಕಿನ ಕುಂತೂರು ಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ತಜ್ಞರಾಗಿ ಗುರುತಿಸಿಕೊಂಡಿರುವ ಅವರು, ತಮ್ಮ ಸಾಧನೆಯ ಮೂಲಕ ಹುಟ್ಟೂರಿನ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಅವರ ಸುದೀರ್ಘ ಸಾಧನಾ ಪಯಣಕ್ಕೆ ಸಂದ ಮತ್ತೊಂದು ಗೌರವವಾಗಿದೆ.

ಕನ್ನಡ ಶಾಲೆಯಲ್ಲಿ ಅರಳಿದ ಯೋಗಾಸಕ್ತಿ:

ಕುಂತೂರಿನ ದಿವಂಗತ ಗೋವಿಂದ ಭಟ್ ಮತ್ತು ಕೃಷ್ಣ ಕುಮಾರಿ ದಂಪತಿಯ ಪುತ್ರರಾದ ಹರೀಶ್ ಕೇವಳ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರೈಸಿದರು. ಆ ಬಳಿಕ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು.

ಯೋಗದ ಮೇಲಿನ ವಿಶೇಷ ಆಸಕ್ತಿ ಅವರನ್ನು ಉನ್ನತ ಅಧ್ಯಯನದತ್ತ ಕರೆದೊಯ್ಯಿತು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನದಲ್ಲಿ ಎಂಎಸ್ಸಿ ಪದವಿ ಪಡೆದ ಅವರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಯಟ್ ಮತ್ತು ನ್ಯೂಟ್ರಿಷನ್‌ನಲ್ಲಿ ಡಿಪ್ಲೊಮಾ ಶಿಕ್ಷಣವನ್ನೂ ಪೂರ್ಣಗೊಳಿಸಿದರು. ಯೋಗವನ್ನು ಕೇವಲ ದೈಹಿಕ ವ್ಯಾಯಾಮವಾಗಿ ನೋಡದೆ, ಅದನ್ನು ವೈಜ್ಞಾನಿಕ ಹಾಗೂ ಸಮಗ್ರ ಆರೋಗ್ಯ ಪದ್ಧತಿಯಾಗಿ ಅರ್ಥೈಸಿಕೊಂಡು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡರು.

ಪೊಲೀಸರಿಂದ ಆರಂಭವಾದ ಯೋಗ ಸೇವೆ:

ವೃತ್ತಿಜೀವನದ ಆರಂಭದಲ್ಲಿಯೇ ಅಸೈಗೋಳಿಯ ಮೀಸಲು ಪೊಲೀಸ್ ಸಿಬ್ಬಂದಿಗೆ ಯೋಗ ತರಬೇತಿ ನೀಡುವ ಮೂಲಕ ತಮ್ಮ ಸೇವೆಯನ್ನು ಆರಂಭಿಸಿದರು. ರಕ್ತದೊತ್ತಡ ನಿಯಂತ್ರಣದಲ್ಲಿ ಯೋಗದ ಪರಿಣಾಮಕಾರಿತ್ವವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಪ್ರಯತ್ನ ನಡೆಸಿದರು.

ಆ ನಂತರ ಬೆಂಗಳೂರಿನ ಯಲಹಂಕ ಪೊಲೀಸ್ ತರಬೇತಿ ಕೇಂದ್ರ, ಗಾಂಧಿ ಸ್ಮಾರಕ ಭವನ ಹಾಗೂ ವಿವಿಧ ಐಟಿ ಕಂಪನಿಗಳಲ್ಲಿ ಯೋಗ ತರಬೇತುದಾರರಾಗಿ ಕಾರ್ಯನಿರ್ವಹಿಸಿದರು. ವಿವಿಧ ವಯೋಮಾನದ ಜನರು ಮತ್ತು ವೃತ್ತಿಪರರಿಗೆ ಯೋಗದ ಮಹತ್ವವನ್ನು ಪರಿಚಯಿಸುವ ಮೂಲಕ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡರು.

ವಿದೇಶಗಳಲ್ಲೂ ಕನ್ನಡಿಗನ ಯೋಗದ ಕಂಪು:

ಯೋಗ ಕ್ಷೇತ್ರದಲ್ಲಿನ ಅನುಭವ ಮತ್ತು ಪರಿಣತಿ ಅವರನ್ನು ಅಂತರರಾಷ್ಟ್ರೀಯ ವೇದಿಕೆಯತ್ತ ಕರೆದೊಯ್ದಿತು. ಸಂಯುಕ್ತ ಅರಬ್ ಒಕ್ಕೂಟದ ಅಬುಧಾಬಿ ಮತ್ತು ರಾಸ್ ಅಲ್ ಖೈಮಾ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಅವರು, ಅಲ್ಲಿನ ರಾಜಮನೆತನದ ಸದಸ್ಯರು ಸೇರಿದಂತೆ ಸಾವಿರಾರು ಮಂದಿಗೆ ಯೋಗ ಶಿಕ್ಷಣ ನೀಡಿದರು.

ವಿದೇಶಿ ಪ್ರವಾಸಿಗರು ಮತ್ತು ಗಣ್ಯರಿಗೆ ಯೋಗದ ಸರಳ ಆಸನಗಳು, ಪ್ರಾಣಾಯಾಮ ಹಾಗೂ ಧ್ಯಾನದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಅಲ್ಲಿನ ರೆಸಾರ್ಟ್‌ಗಳಲ್ಲಿ ನಡೆಸಿದ ಯೋಗ ತರಗತಿಗಳು ಯುರೋಪಿನ ಮ್ಯಾಗಜಿನ್‌ಗಳಲ್ಲಿಯೂ ಪ್ರಶಂಸೆಗೆ ಪಾತ್ರವಾದವು. 2017ರಲ್ಲಿ ಮಾಲ್ಡೀವ್ಸ್‌ಗೆ ತೆರಳಿದ ಅವರು, ಅಲ್ಲಿನ ವಿವಿಧ ರೆಸಾರ್ಟ್‌ಗಳಲ್ಲಿ ಗಣ್ಯರು ಮತ್ತು ಪ್ರವಾಸಿಗರಿಗೆ ಯೋಗ ತರಬೇತಿ ನೀಡಿದರು. ಭಾರತೀಯ ಯೋಗ ಪರಂಪರೆಯ ಸರಳತೆ, ವೈಜ್ಞಾನಿಕ ಮಹತ್ವ ಹಾಗೂ ಜೀವನಶೈಲಿಯೊಂದಿಗಿನ ಅದರ ಸಂಬಂಧವನ್ನು ವಿದೇಶಿಗರಿಗೆ ಪರಿಚಯಿಸಿದರು.

ಕೋವಿಡ್ ಸಂಕಷ್ಟದಲ್ಲೂ ಆರೋಗ್ಯ ಜಾಗೃತಿ: 

ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಭಾರತಕ್ಕೆ ಮರಳಿದ ಹರೀಶ್ ಕೇವಳ ಅವರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ಮಂಗಳೂರು ಮತ್ತು ಪುತ್ತೂರಿನ ಗ್ರಾಮೀಣ ಭಾಗಗಳಲ್ಲಿ ಯೋಗ ಜಾಗೃತಿ ಮೂಡಿಸಿದರು. ಶಾಲಾ ಮಕ್ಕಳು, ಹಿರಿಯ ನಾಗರಿಕರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಸಮಾಜದ ವಿವಿಧ ವರ್ಗದವರಿಗೆ ಯೋಗ ತರಬೇತಿ ನೀಡಿದರು.

ಸಂಕಷ್ಟದ ಸಮಯದಲ್ಲಿ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿಯೂ ಮುಖ್ಯ ಎಂಬ ಸಂದೇಶವನ್ನು ಯೋಗದ ಮೂಲಕ ಜನರಿಗೆ ತಲುಪಿಸಿದರು. ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಯೋಗವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.

ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಜಾಗತಿಕ ಸಾಧನೆ:

ಹರೀಶ್ ಕೇವಳ ಅವರ ಸಾಧನಾ ಪಯಣದ ಮಹತ್ವದ ಮೈಲಿಗಲ್ಲು 2022ರಲ್ಲಿ ಒದಗಿಬಂತು. ಕೇಂದ್ರ ಸರ್ಕಾರದಿಂದ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಆಯ್ಕೆಯಾದ ಅವರು, ಉತ್ತರ ಅಮೆರಿಕಾದ ಡೊಮಿನಿಕನ್ ರಿಪಬ್ಲಿಕ್‌ಗೆ ತೆರಳಿ ಭಾರತವನ್ನು ಪ್ರತಿನಿಧಿಸಿದರು. ಆ ದೇಶದಲ್ಲಿ ಭಾರತದ ಪ್ರಥಮ ಯೋಗ ಶಿಕ್ಷಕರಾಗಿ ನಿಯೋಜನೆಗೊಂಡು, ವಿಶ್ವವಿದ್ಯಾಲಯಗಳು, ಭಾರತೀಯ ರಾಯಭಾರ ಕಚೇರಿ ಹಾಗೂ ಶಾಲೆಗಳಲ್ಲಿ ಯೋಗ ಮತ್ತು ಭಾರತೀಯ ಸಂಸ್ಕೃತಿಯ ಕುರಿತು ಕಾರ್ಯಕ್ರಮಗಳನ್ನು ನಡೆಸಿದರು. ಯೋಗದ ಮೂಲಕ ಭಾರತದ ಸಾಂಸ್ಕೃತಿಕ ಮೌಲ್ಯಗಳು ಮತ್ತು ಜೀವನದರ್ಶನವನ್ನು ಪರಿಚಯಿಸಿದರು.

ಅಮೆರಿಕನ್ ವಿಶ್ವವಿದ್ಯಾಲಯದ ಉಪಕುಲಪತಿಗಳು ಹಾಗೂ ಸ್ಥಳೀಯ ರಾಯಭಾರ ಕಚೇರಿಯಿಂದ ವಿಶೇಷ ಗೌರವ ಮತ್ತು ಪ್ರಶಂಸೆಗೆ ಪಾತ್ರರಾದರು. ಒಬ್ಬ ಗ್ರಾಮೀಣ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ವಿದೇಶದಲ್ಲಿ ಗುರುತಿಸಿಕೊಳ್ಳುವುದು ಅವರ ಪರಿಶ್ರಮ ಮತ್ತು ಸಾಧನೆಯ ಮಹತ್ವವನ್ನು ಸಾರುತ್ತದೆ.

ಹತ್ತು ಸಾವಿರಕ್ಕೂ ಅಧಿಕ ಮಂದಿಗೆ ಯೋಗದ ಜ್ಞಾನಧಾರೆ:

ನಾಲ್ಕು ದೇಶಗಳಲ್ಲಿ ಕಾರ್ಯನಿರ್ವಹಿಸಿರುವ ಹರೀಶ್ ಕೇವಳ ಅವರು, 150ಕ್ಕೂ ಹೆಚ್ಚು ರಾಷ್ಟ್ರಗಳ ಜನರನ್ನು ಒಳಗೊಂಡಂತೆ ಹತ್ತು ಸಾವಿರಕ್ಕೂ ಅಧಿಕ ಮಂದಿಗೆ ಯೋಗದ ಜ್ಞಾನವನ್ನು ತಲುಪಿಸಿದ್ದಾರೆ. ಯೋಗದ ಮೂಲಕ ದೈಹಿಕ ಆರೋಗ್ಯ, ಮಾನಸಿಕ ಸಮತೋಲನ ಮತ್ತು ಆಂತರಿಕ ಶಾಂತಿಯ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ್ದಾರೆ.

ಯುವಜನತೆಗೆ ಸ್ಫೂರ್ತಿಯ ಸೆಲೆ:

ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದು, ಸ್ಥಳೀಯ ನೆಲೆಯಲ್ಲೇ ತಮ್ಮ ಬದುಕಿನ ಅಡಿಪಾಯ ಹಾಕಿಕೊಂಡು, ನಿರಂತರ ಪರಿಶ್ರಮ, ಅಧ್ಯಯನ ಮತ್ತು ಸಾಧನೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹರೀಶ್ ಕೇವಳ ಅವರ ಬದುಕು ಯುವಜನತೆಗೆ ದೊಡ್ಡ ಸಂದೇಶ ನೀಡುತ್ತದೆ.

ಸಾಧನೆಗೆ ನಗರಗಳ ಹಿನ್ನೆಲೆ, ದೊಡ್ಡ ಸಂಸ್ಥೆಗಳ ಬೆಂಬಲ ಅಥವಾ ಶ್ರೀಮಂತಿಕೆಯೇ ಮಾನದಂಡವಲ್ಲ. ಸ್ಪಷ್ಟ ಗುರಿ, ನಿರಂತರ ಪ್ರಯತ್ನ, ವಿಷಯದ ಮೇಲಿನ ಬದ್ಧತೆ ಮತ್ತು ಸೇವಾ ಮನೋಭಾವ ಇದ್ದರೆ ಗ್ರಾಮೀಣ ನೆಲೆಯಿಂದಲೂ ವಿಶ್ವದ ಗಮನ ಸೆಳೆಯಬಹುದು ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅವರ ಯೋಗ ಸೇವೆ ಮತ್ತು ಅಂತರರಾಷ್ಟ್ರೀಯ ಸಾಧನೆಗೆ ಸಂದ ಗೌರವ ಮಾತ್ರವಲ್ಲ; ಕುಂತೂರು, ಕಡಬ ಹಾಗೂ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯೂ ಹೌದು. ಭಾರತೀಯ ಯೋಗ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸುವ ಅವರ ಸೇವೆ ಇನ್ನಷ್ಟು ವಿಸ್ತಾರಗೊಳ್ಳಲಿ, ಮುಂದಿನ ಪೀಳಿಗೆಗೆ ಅವರ ಸಾಧನೆಯ ಪಯಣ ಸ್ಫೂರ್ತಿಯಾಗಲಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.