ಯೆಯ್ಯಾಡಿಯ ಶ್ರೀ ರಾಮ ಮಂದಿರಕ್ಕೆ ಶತಮಾನೋತ್ಸವದ ಸಂಭ್ರಮ;ನ.13ರಿಂದ ಸೀತಾರಾಮ ಕಲ್ಯಾಣೋತ್ಸವ, ಅಖಂಡ ಭಜನಾ ಸಪ್ತಾಹ
Yeyyadi Shree Rama Mandira: ಬ್ರಹ್ಮಶ್ರೀ ವೇದಮೂರ್ತಿ ದೇರೆಬೈಲ್ ವಿಠಲ್ ದಾಸ್ ತಂತ್ರಿ ಅವರ ಮಾರ್ಗದರ್ಶನ ಹಾಗೂ ಆಲಾಡಿ ನಾಗರಾಜ್ ಭಟ್ ಅವರ ಪೌರೋಹಿತ್ಯದಲ್ಲಿ 100ನೇ ವರ್ಷದ ಸಂಭ್ರಮಾಚರಣೆ ಹಾಗೂ 88ನೇ ವರ್ಷದ ಅಖಂಡ ಭಜನಾ ಸಪ್ತಾಹವು ನ.14ರಿಂದ ನ.21ರವರೆಗೆ ನಡೆಯಲಿದೆ. 14ರ ಬೆಳಗ್ಗೆ ಸೂರ್ಯೋದಯದ ಬೆಳಗ್ಗೆ 6.20ಕ್ಕೆ ಭಜನಾ ಸಪ್ತಾಹದ ದೀಪ ಪ್ರಜ್ವಲನೆಯೊಂದಿಗೆ ಆರಂಭವಾಗಿ ನ.21ರ ಶನಿವಾರದಂದು ಸೂರ್ಯೋದಯ ಪರ್ಯಂತ ನಡೆದು ಭಜನಾ ಮಂಗಲೋತ್ಸವ ಸಮಾಪನೆಗೊಳ್ಳಲಿದೆ.
ಮಂಗಳೂರು: ಯೆಯ್ಯಾಡಿಯಲ್ಲಿರುವ ಶ್ರೀ ರಾಮ ಮಂದಿರದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ನ.13ರಿಂದ ನ.22ರವರೆಗೆ ಸೀತಾರಾಮ ಕಲ್ಯಾಣೋತ್ಸವ, ಭಜನಾ ಸಪ್ತಾಹ ಹಾಗೂ ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ.
ಈ ಪವಿತ್ರ ಮಹೋತ್ಸವದ ಹಿನ್ನೆಲೆಯಲ್ಲಿ ನವೆಂಬರ್ 12ರಂದು ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ವಿವಿಧ ಕಲಾತಂಡಗಳು ಹಾಗೂ ಚಂಡೆ ವಾದ್ಯಗಳೊಂದಿಗೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಅದರಂತೆ ಬ್ರಹ್ಮಶ್ರೀ ವೇದಮೂರ್ತಿ ದೇರೆಬೈಲ್ ವಿಠಲ್ ದಾಸ್ ತಂತ್ರಿ ಅವರ ಮಾರ್ಗದರ್ಶನ ಹಾಗೂ ಆಲಾಡಿ ನಾಗರಾಜ್ ಭಟ್ ಅವರ ಪೌರೋಹಿತ್ಯದಲ್ಲಿ 100ನೇ ವರ್ಷದ ಸಂಭ್ರಮಾಚರಣೆ ಹಾಗೂ 88ನೇ ವರ್ಷದ ಅಖಂಡ ಭಜನಾ ಸಪ್ತಾಹವು ನ.14ರಿಂದ ನ.21ರವರೆಗೆ ನಡೆಯಲಿದೆ. 14ರ ಬೆಳಗ್ಗೆ ಸೂರ್ಯೋದಯದ ಬೆಳಗ್ಗೆ 6.20ಕ್ಕೆ ಭಜನಾ ಸಪ್ತಾಹದ ದೀಪ ಪ್ರಜ್ವಲನೆಯೊಂದಿಗೆ ಆರಂಭವಾಗಿ ನ.21ರ ಶನಿವಾರದಂದು ಸೂರ್ಯೋದಯ ಪರ್ಯಂತ ನಡೆದು ಭಜನಾ ಮಂಗಲೋತ್ಸವ ಸಮಾಪನೆಗೊಳ್ಳಲಿದೆ.

ಶತಮಾನೋತ್ಸವದ ಸಂಭ್ರಮದ ಹಿನ್ನಲೆಯಲ್ಲಿ ಕ್ಷೇತ್ರದ ಎಲ್ಲ ದೇವರ ಬಿಂಬಗಳಿಗೆ ಬೆಳ್ಳಿ ಕವಚ ಸಮರ್ಪಣೆಯಾಗಲಿದೆ. ಲಕ್ಷ್ಮಣ ವಿಗ್ರಹ ಹಾಗೂ ಸೀತಾ ಮಾತೆಯ ವಿಗ್ರಹಕ್ಕೆ ತಲಾ 9ಲಕ್ಷ ರೂ. ಸೇರಿದಂತೆ ಒಟ್ಟು 18 ಲಕ್ಷ ರೂ. ವೆಚ್ಚದಲ್ಲಿ ಬೆಳ್ಳಿ ಕವಚ ಸಮರ್ಪಿಸಲು ಅಂದಾಜಿಸಲಾಗಿದೆ. ಪ್ರತಿದಿನ ರಾತ್ರಿ 9 ಗಂಟೆಗೆ ರಂಗಪೂಜೆ ನೆರವೇರಲಿದೆ.
ನ.22ರಂದು ಸಂಜೆ 6 ಗಂಟೆಗೆ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀ ಕದ್ರಿ ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ದೇರೆಬೈಲ್ ವಿಠಲದಾಸ್ ತಂತ್ರಿ ಅವರಿಂದ ದೀಪ ಪ್ರಜ್ವಲನೆ ನಡೆಯಲಿದೆ. ಶ್ರೀ ಕ್ಷೇತ್ರ ಕೇಮಾರ್ನ ಶ್ರೀ ಈಶ ವಿಠಲ್ದಾಸ್ ಸ್ವಾಮೀಜಿ ಅವರಿಂದ ಧಾರ್ಮಿಕ ಆಶೀರ್ವಚನ ನಡೆಯಲಿದೆ. ಶ್ರೀ ರಾಮ ಮಂದಿರದ ಅರ್ಚಕರಾದ ಆಲಾಡಿ ನಾಗರಾಜ ಭಟ್, ಶ್ರೀರಾಮ ಮಂದಿರದ ಅಧ್ಯಕ್ಷ ಕಮಲಾಕ್ಷ ಎ. ಬಂಗೇರ ಉಪಸ್ಥಿತಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.

ಶಾಸಕರಾದ ವೇದವ್ಯಾಸ ಕಾಮತ್, ವೈ. ಭರತ್ ಶೆಟ್ಟಿ, ಸಚಿವ ಯುಟಿ ಖಾದರ್, ದೇವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಕೊಡಿಯಾಲ್ಬೈಲ್, ಗೌರವ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ, , ಪ್ರಧಾನ ಕಾರ್ಯದರ್ಶಿ ತುಳಸಿದಾಸ್ ಉರ್ವ, ಕೋಶಾಧಿಕಾರಿ ಎಕೆ. ಜಯರಾಮ್ ಯೆಯ್ಯಾಡಿ, ಸಂಗಟನಾ ಕಾರ್ಯದರ್ಶಿ ಹರಿಪ್ರಸಾದ್ ಅಜ್ಜಿಕಾನಕಟ್ಟೆ ಸೇರಿದಂತೆ ಹಲವು ಸಮಿತಿಗಳ ಸದಸ್ಯರು, ದಾನಿಗಳು ಹಾಗೂ ಸೇವಾ ಕಾರ್ಯಕರ್ತರು ಈ ಇಡೀ ಶ್ರೀ ರಾಮ ಭಜನಾ ಮಂದಿರದ ಶತಮಾನೋತ್ಸವದ ನೇತೃತ್ವ ವಹಿಸಲಿದ್ದಾರೆ.
ಅದೇದಿನ ರಾತ್ರಿ 7.30ರಿಂದ ಸಿದ್ದಿ ವಿನಾಯಕ್ ನೃತ್ಯಂ ಕೃಷ್ಣ ಪ್ರಿಯ ಹಾಗೂ ತಂಡದವರಿಂದ ಭರತನಾಟ್ಯ, 7.45ರಿಂದ ಮಂದಿರದ ಮಾತೃ ಸಂಘದ ಸದಸ್ಯರಿಂದ ನವಶಕ್ತಿ ನೃತ್ಯ ರೂಪಕ ಹಾಗೂ ರಾತ್ರಿ 8.30ಕ್ಕೆ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗದಿಂದ ಲಾವಣ್ಯ ವಿಶ್ವಾಸ್ದಾಸ್ ಅವರ ನಿರ್ಮಾಣ, ನಿರ್ದೇಶನದ “ಜೋಡು ಜೀಟಿಗೆ” ಸತ್ಯೋದ ಸಾದಿಗ್ ಧರ್ಮೊದ ಬೊಲ್ಲು ಕಲ್ಲುರ್ಟಿ ಕಲ್ಕುಡ ಕಥೆ ಆಧಾರಿತ ತುಳು ಪೌರಾಣಿಕ ನಾಟಕ ಪ್ರದರ್ಶನವೂ ನಡೆಯಲಿದೆ. ಕೃತಿಶೇಷ ಎಂ.ನಾಗೇಶ್ ಅಂಚನ್ ಮರೋಳಿ ದೊಡ್ಡಮನೆ ಇವರ ಸ್ಮರಣಾರ್ಥ ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ಹರಿಪ್ರಸಾದ್ ಅಜ್ಜಿಕಾನ ಕಟ್ಟೆ ಅವರು ಇದರ ಪ್ರಾಯೋಜಕತ್ವವನ್ನು ವಹಿಸಿದ್ದಾರೆ.

ನಗರದ ಕದ್ರಿ ಸೀಮೆಗೆ ಒಳಪಟ್ಟ ಬಾರೆಬೈಲ್ ಪರಿಸರದಲ್ಲಿರುವ ಐತಿಹಾಸಿಕ ಶ್ರೀ ರಾಮ ಭಜನಾ ಮಂದಿರವು ನೇ ವರ್ಷದ ಶತಮಾನೋತ್ಸವ ಹಾಗೂ 88ನೇ ವರ್ಷದ ವಾರ್ಷಿಕ ಅಖಂಡ ಭಜನಾ ಸಪ್ತಾಹದ ಸಂಭ್ರಮಕ್ಕೆ ಸಜ್ಜಾಗಿದೆ.
ದಿವಂಗತ ಪದ್ಮಪ್ಪ ಪೂಜಾರಿಯವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಶ್ರೀ ಆಲಾಡಿ ನಾರಾಯಣ ಭಟ್ ಅವರ ಪೌರೋಹಿತ್ಯದಲ್ಲಿ 1926ರಲ್ಲಿ ಸ್ಥಾಪನೆಗೊಂಡ ಈ ಮಂದಿರವು ಕಳೆದ ಒಂದು ಶತಮಾನದಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಭಕ್ತರ ಶ್ರದ್ಧಾಕೇಂದ್ರವಾಗಿ ಬೆಳೆದುಬಂದಿದೆ.
ನೂರು ವರ್ಷಗಳ ಭಕ್ತಿಪರಂಪರೆಯನ್ನು ಸ್ಮರಿಸುವ ಈ ಐತಿಹಾಸಿಕ ಸಂಭ್ರಮದಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತನು-ಮನ-ಧನದ ಸಹಕಾರ ನೀಡುವ ಮೂಲಕ ಶತಮಾನೋತ್ಸವ ಹಾಗೂ ಅಖಂಡ ಭಜನಾ ಸಪ್ತಾಹವನ್ನು ಯಶಸ್ವಿಗೊಳಿಸಬೇಕೆಂದು ಮಂದಿರದ ಆಡಳಿತ ಸಮಿತಿ, ಮಾತೃಸಂಘ ಹಾಗೂ ಶತಮಾನೋತ್ಸವ ಸಮಿತಿ ಮನವಿ ಮಾಡಿದೆ.