ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಘೋಷಣೆ: ಸಾಹಿತ್ಯ, ಕ್ರೀಡೆ, ಸಮಾಜ ಸೇವೆ ಸೇರಿ 71 ಮಂದಿ ಸಾಧಕರನ್ನು ಗುರುತಿಸಿದ ಸರ್ಕಾರ
71ನೇ ಕನ್ನಡ ರಾಜ್ಯೋತ್ಸವ(kannada Rajostava) ಆಚರಣೆಯ ಅಂಗವಾಗಿ ಒಟ್ಟು 71 ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಅವರು ಅಕ್ಟೋಬರ್ 30ರಂದು ಈ ಕುರಿತ ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಆದೇಶಾನುಸಾರ ಈ ಗೌರವ ನೀಡಲಾಗುತ್ತಿದೆ.
ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. 71ನೇ ಕನ್ನಡ(kannada) ರಾಜ್ಯೋತ್ಸವ(Rajostava) ಆಚರಣೆಯ ಅಂಗವಾಗಿ ಒಟ್ಟು 71 ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಅವರು ಅಕ್ಟೋಬರ್ 30ರಂದು ಈ ಕುರಿತ ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಆದೇಶಾನುಸಾರ ಈ ಗೌರವ ನೀಡಲಾಗುತ್ತಿದೆ.
ಜಾನಪದ ಕ್ಷೇತ್ರದಲ್ಲಿ ದಾವಲಸಾಬ ಅತ್ತಾರ (ಕೊಪ್ಪಳ), ಗೌರಮ್ಮ (ಚಾಮರಾಜನಗರ), ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ) ಸೇರಿದಂತೆ ಏಳು ಮಂದಿ ಆಯ್ಕೆಯಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಡಾ. ಸಿ.ಎ. ಶ್ರೀಧರ್, ಡಾ. ಎ. ನಾರಾಯಣ ಸ್ವಾಮಿ ಮತ್ತು ವಿ. ಮುರಳಿ, ನೃತ್ಯ ಕ್ಷೇತ್ರದಲ್ಲಿ ಡಾ. ಸತ್ಯನಾರಾಯಣ ರಾಜು ಪುರಸ್ಕೃತರಾಗಿದ್ದಾರೆ. ಚಲನಚಿತ್ರ ಮತ್ತು ಕಿರುತೆರೆ ವಿಭಾಗದಲ್ಲಿ ಕೆ. ವೆಂಕಟರಮಣ (ಬಾಬಜೀ), ಅಶೋಕ್ ಹಾಗೂ ಕೆ.ಎಸ್. ರವೀಂದ್ರನಾಥ್ ಅವರಿಗೆ ಗೌರವ ಸಲ್ಲಲಿದೆ. ಯಕ್ಷಗಾನದಲ್ಲಿ ಗೋಪಾಲ ಗಾಣಿಗ (ಉಡುಪಿ), ಬಯಲಾಟದಲ್ಲಿ ಹುಲಿಗೆಮ್ಮ (ಬಳ್ಳಾರಿ) ಆಯ್ಕೆಯಾಗಿದ್ದಾರೆ. ರಂಗಭೂಮಿಯಲ್ಲಿ ಆರು ಮಂದಿ, ಶಿಲ್ಪಕಲೆಯಲ್ಲಿ ಜಿ.ಬಿ. ಹಂಸಾನಂದ ಆಚಾರ್ಯ ಮತ್ತು ಕಾಡಪ್ಪ ಪರಶುರಾಮ ಗಾಡಿವಡ್ಡರ್, ಚಿತ್ರಕಲೆಯಲ್ಲಿ ಸಿ.ಬಿ. ಸೋಮಶೆಟ್ಟಿ, ಕರಕುಶಲದಲ್ಲಿ ಶಾಂತಾಬಾಯಿ (ಇಬ್ಬರೂ ಬೀದರ್) ಅವರಿಗೆ ಪ್ರಶಸ್ತಿ ದೊರೆತಿದೆ.

ಕೃಷಿ ಕ್ಷೇತ್ರದಲ್ಲಿ ಹೆಚ್.ಕೆ. ಶ್ರೀಕಂಠರು, ಬಿ.ಎ. ಚನ್ನಪ್ಪಗೌಡ, ಪರಿಸರ ವಿಭಾಗದಲ್ಲಿ ಡಾ. ಸ್ವಾಮಿ ಆನಂದ್ ಆರ್. ಆಯ್ಕೆಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರೊ. ರಾಜಾಸಾಬ್ ಎ.ಎಚ್. ಹಾಗೂ ಕೆನಡಾದ ಡಾ. ರಾಜಶೇಖರ ಮೂರ್ತಿ, ಮಾಧ್ಯಮದಲ್ಲಿ ಡಿ. ಉಮಾಪತಿ ಮತ್ತು ಎಂ.ಪಿ. ಸುಶೀಲ, ಛಾಯಾಚಿತ್ರದಲ್ಲಿ ವಿಶ್ವನಾಥ್ ಸುವರ್ಣ ಅವರಿಗೆ ಗೌರವ ಸಂದಿದೆ. ಸಮಾಜಸೇವೆ ವಿಭಾಗದಲ್ಲಿ ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಶಿವಯೋಗಿ ಸೇರಿ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ.
ವೈದ್ಯಕೀಯದಲ್ಲಿ ಡಾ. ವಿಜಯೇಂದ್ರ ಹೊನ್ನೂರಪ್ಪ ಮತ್ತು ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ, ಆಡಳಿತದಲ್ಲಿ ತೆರೆಸಾ ಭಟ್ಟಾಚಾರ್ಯ ಮತ್ತು ಡಾ. ಕೆ.ಎಸ್. ಸೋಮಶೇಖರ್, ಎಂಜಿನಿಯರಿಂಗ್ನಲ್ಲಿ ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಡಾ. ಇಂದಿರಾ ಹೆಗ್ಗಡೆ, ವೀರಹನುಮಾನ್, ಪ್ರೊ. ನಾರಾಯಣಘಟ್ಟ (ನಾಹೋ), ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ, ಡಾ. ಕರಿಗೌಡ ಬೀಚನಹಳ್ಳಿ ಹಾಗೂ ಡಾ. ಸಿದ್ದರಾಮ ಹೊನ್ಕಲ್ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಶಿಕ್ಷಣದಲ್ಲಿ ಫಾ. ಜೋಸೆಫ್ ಸಿ.ಸಿ. ಸೇರಿ ನಾಲ್ವರು, ನ್ಯಾಯಾಂಗದಲ್ಲಿ ಬಿ.ವಿ. ಆಚಾರ್ಯ, ಹೊರನಾಡು ವಿಭಾಗದಲ್ಲಿ ಅಕ್ಕ ಅಮೆರಿಕಾದ ಮಾಜಿ ಅಧ್ಯಕ್ಷ ರಮೇಶ್ ಆರ್. ಗೌಡ ಆಯ್ಕೆಯಾಗಿದ್ದಾರೆ. ಕ್ರೀಡೆಯಲ್ಲಿ ಎ.ವಿ. ರವಿ (ಜಿಮ್ ರವಿ), ಡಾ. ಎ.ಬಿ. ಸುಬ್ಬಯ್ಯ ಹಾಗೂ ಎಂ. ಗಿರೀಶ್ ಅವರಿಗೆ ಗೌರವ ಲಭಿಸಿದೆ. ಸಂಕೀರ್ಣ ವಿಭಾಗದಲ್ಲಿ ಎಂಟು ಮಂದಿ ಪುರಸ್ಕೃತರಾಗಿದ್ದಾರೆ.