ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ: ಶಶಿಕುಮಾರ್‌ ಬದಲಿಗೆ ಎಸ್‌ಐಟಿ ಮುಖ್ಯಸ್ಥರಾಗಿ ಚೇತನ್‌ಸಿಂಗ್ ರಾಥೋಡ್

Sowjanya murder Case re-investigation: ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಎನ್. ಶಶಿಕುಮಾರ್ ಅವರನ್ನು ಸರ್ಕಾರವು ಈ ಮೊದಲು ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ರಚನೆಯಾಗಿರುವ ಎಸ್‌ಐಟಿ ತಂಡದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಆದರೆ, ಶಶಿಕುಮಾರ್‌ ಅವರನ್ನು ಬದಲಿಸಬೇಕೆಂದು ಸೌಜನ್ಯ ಪರ ಹೋರಾಟಗಾರರು ಒತ್ತಾಯಿಸಿದ್ದರು.

Oct 30, 2026 - 14:18
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ: ಶಶಿಕುಮಾರ್‌ ಬದಲಿಗೆ ಎಸ್‌ಐಟಿ ಮುಖ್ಯಸ್ಥರಾಗಿ  ಚೇತನ್‌ಸಿಂಗ್ ರಾಥೋಡ್

ಬೆಳ್ತಂಗಡಿ: ಇಡೀ ದೇಶದಲ್ಲೇ ಸಂಚಲನ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ(Sowjanya) ಅವರ ಅತ್ಯಾಚಾರಹಾಗೂ ಕೊಲೆ(rape and murder case) ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ(SIT) ಇದೀಗ ಹಿರಿಯ IPS ಅಧಿಕಾರಿ ಚೇತನ್‌ಸಿಂಗ್ ರಾಥೋಡ್ ಅವರು ನೇಮಕಗೊಂಡಿದ್ದಾರೆ.
 ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಎನ್. ಶಶಿಕುಮಾರ್ ಅವರನ್ನು ಸರ್ಕಾರವು ಈ ಮೊದಲು ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ರಚನೆಯಾಗಿರುವ ಎಸ್‌ಐಟಿ ತಂಡದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಆದರೆ, ಶಶಿಕುಮಾರ್‌ ಅವರನ್ನು ಬದಲಿಸಬೇಕೆಂದು ಸೌಜನ್ಯ ಪರ ಹೋರಾಟಗಾರರು ಒತ್ತಾಯಿಸಿದ್ದರು. ಶಶಿಕುಮಾರ್‌ ಅವರು ಧರ್ಮಸ್ಥಳದ ಜತೆಗೆ ಹೆಚ್ಚಿನ ಒಡನಾಟ ಹೊಂದಿರುವ ಕಾರಣ ಅವರನ್ನು ಎಸ್‌ಐಟಿ ತಂಡದ ಮುಖ್ಯಸ್ಥರಾಗಿ ಮಾಡುವುದರಿಂದ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗಬಹುದು ಎನ್ನುವುದು ಸೌಜನ್ಯ ಪರ ಹೋರಾಟಗಾರರ ಆರೋಪವಾಗಿತ್ತು. 
ಇನ್ನೊಂದೆಡೆ, ವೈಯಕ್ತಿಕ ಕಾರಣಗಳಿಂದ ತಮ್ಮನ್ನು ಎಸ್‌ಐಟಿ ತಂಡದ ಮುಖ್ಯಸ್ಥ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ಖುದ್ದು ಶಶಿಕುಮಾರ್‌ ಅವರು ಕೂಡ ನಿನ್ನೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಸಲೀಂ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ, ಶಶಿಕುಮಾರ್‌ ಅವರು ಕೂಡ ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ಶುಕ್ರವಾರ(ಅ.30) ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಮರು ತನಿಖೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಆ ಮೂಲಕ, ಸಿಐಡಿಯ ಐಜಿಪಿಯಾಗಿರುವ ಚೇತನ್‌ಸಿಂಗ್ ರಾಥೋಡ್ ಅವರನ್ನು ಎಸ್‌ಐಟಿ ತಂಡದ ಮುಖ್ಯಸ್ಥರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಹಾಗೆಯೇ ಎಸ್‌ಐಟಿ ಸದಸ್ಯರಾಗಿದ್ದ ವೆಂಕಟೇಶ್ ಪ್ರಸನ್ನ ಅವರು ಈ ತಂಡದಿಂದ ಹಿಂದೆ ಸರಿದಿದ್ದರು. ಇದೀಗ ಅವರ ಸ್ಥಾನಕ್ಕೆ ಹಾಸನ ಜಿಲ್ಲೆ ಎಎಸ್ಪಿ ಶ್ರೀನಿಧಿ ನೇಮಕಗೊಂಡಿದ್ದಾರೆ. ಇದರೊಂದಿಗೆ ಸೌಜನ್ಯ ಪ್ರಕರಣದ ಮರು ತನಿಖೆಯು ಮತ್ತಷ್ಟು ವೇಗ ಪಡೆಯುವ ಸಾಧ್ಯತೆಯಿದೆ. ಈ ಎಸ್‌ಐಟಿ ತಂಡದಲ್ಲಿ ಮಂಗಳೂರು ಪೊಲೀಸ್‌ ಆಯುಕ್ತರಾಗಿರುವ ಅತ್ಯಂತ ಖಡಕ್‌ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಸುಧೀರ್‌ ಕುಮಾರ್‌ ರೆಡ್ಡಿ ಅವರು ಕೂಡ ಇದ್ದಾರೆ. 
ಮರು ತನಿಖೆಗೆ ಮತ್ತಷ್ಟು ವೇಗ
13 ವರ್ಷಗಳ ಹಿಂದೆ ನಡೆದಿರುವ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ಮಾಡಿದ್ದು, ಅದರಂತೆ ವಿಶೇಷ ತನಿಖಾ ತಂಡವು ಈಗಾಗಲೇ ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಪ್ರಕರಣ ನಡೆದಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದ ಯೋಗೇಶ್‌ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಿದ್ದ ಭಾಸ್ಕರ್‌ ರೈ ಹಾಗೂ ಪ್ರಕರಣದ ಸಿಐಡಿ ತನಿಖಾ ತಂಡದಲ್ಲಿದ್ದ ರುದ್ರಮುನಿ ಅವರನ್ನು ಮಂಗಳೂರಿನ ಎಸ್‌ಐಟಿ ಕಚೇರಿಗೆ ಗುರುವಾರ(ಾ.29) ಕರೆಸಿಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ.