BREAKING: ಎಂಆರ್‌ಪಿಎಲ್‌ನೊಳಗೆ ಭಾರೀ ಸ್ಫೋಟ.. ಜನರಲ್ಲಿ ಆತಂಕ
Mangaluru: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ 3ನೇ ಹಂತದ ತೈಲ ಸಂಸ್ಕರಣಾ ಘಟಕದಲ್ಲಿ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.
ದಕ್ಷಿಣ ಕನ್ನಡ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) 3ನೇ ಹಂತದ ತೈಲ ಸಂಸ್ಕರಣಾ ಘಟಕದಲ್ಲಿ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.
ಸ್ಫೋಟದ ಪರಿಣಾಮ ಎಂಆರ್‌ಪಿಎಲ್ ಘಟಕದಿಂದ ದಟ್ಟ ಹೊಗೆ-ಬೆಂಕಿ ಕಾಣಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಸ್ಥಳೀಯರ ಪ್ರಕಾರ, ಎಂಆರ್‌ಪಿಎಲ್ 3ನೇ ಹಂತದ ತೈಲ ಶುದ್ಧೀಕರಣ ಘಟಕದಿಂದ ಸ್ಫೋಟದ ಶಬ್ಧ ಕೇಳಿಸಿದ್ದು, ಜೋಕಟ್ಟೆ, ಬಜಪೆ, ಏರ್‌ಪೋರ್ಟ್ ಸುತ್ತ-ಮುತ್ತಲಿನವರೆಗೆ ಸ್ಫೋಟದ ತೀವ್ರತೆಯ ಅನುಭವವಾಗಿದೆ. ಕೆಲವರ ಪ್ರಕಾರ, ಬಾಯ್ಲರ್ ಸ್ಫೋಟವಾಗಿದೆ ಎನ್ನಲಾಗಿದೆ.
ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ಆದರೆ, ಎಂಆರ್‌ಪಿಎಲ್‌ನ ಮಹಿಳಾ ತಂಡ ಕೆಲಸ ಮಾಡುವ ಘಟಕದಲ್ಲಿ ಸ್ಫೋಟವಾಗಿದ್ದು, ದಟ್ಟ ಹೊಗೆಯಿಂದಾಗಿ ಅಲ್ಲಿಗೆ ರಕ್ಷಣಾ ತಂಡಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂಬ ವಿವರಗಳು ಲಭ್ಯವಾಗಿವೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ, ಖುದ್ದು ಪರಿಸ್ಥಿತಿ ಅವಲೋಕನ ನಡೆಸಲು ಬೆಳ್ತಂಗಡಿಯಿಂದ ಮಂಗಳೂರಿಗೆ ಬರುತ್ತಿದ್ದಾರೆ.
'ಎಂಆರ್‌ಪಿಎಲ್ ಸ್ಫೋಟದ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಲು ಸೂಚಿಸಲಾಗಿದೆ. ಬೆಳ್ತಂಗಡಿಯಲ್ಲಿ ಪೂರ್ವನಿಗದಿಯಾಗಿದ್ದ ನನ್ನ ಎಲ್ಲ ಸಾರ್ವಜನಿಕ ಕಾರ್ಯಕ್ರಮ ರದ್ದುಗೊಳಿಸಿದ್ದು, ಎಂಆರ್‌ಪಿಎಲ್ ಘಟಕದತ್ತ ತೆರಳುತ್ತಿದ್ದೇನೆ' ಎಂದು ಸಂಸದರು ತಿಳಿಸಿದ್ದಾರೆ.
ಹಾಗೆಯೇ ಈ ಘಟನೆ ಸಂಬಂಧ ಜಿಲ್ಲಾಧಿಕಾರಿಗಳ ಬಳಿ, ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಮಾಹಿತಿ ಪಡೆದಿದ್ದಾರೆ.
ಯಾವುದೇ ಪ್ರಾಣಹಾನಿ ಇಲ್ಲ:
ಎಂಆರ್‌ಪಿಎಲ್‌ನಲ್ಲಿ ಬೆಂಕಿ ಹಾಗೂ ಹೊಗೆ ಕಡಿಮೆಯಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದಾಗಿ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಭ್ಯವಾದ ಮಾಹಿತಿಯಂತೆ ಎಂಆರ್‌ಪಿಎಲ್‌ನಲ್ಲಿ ಸ್ಫೋಟದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಇತರ 6 ಮಂದಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಹೀಗಾಗಿ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.