ಜೋಡುಕಲ್ಲಿನ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ: ಅರುಣ್ ಕುಮಾರ್
ಅರುಣ್ ಕುಮಾರ್ ಪುತ್ತಿಲ ಅವರು ಜೋಡುಕಲ್ಲಿನ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೇರಳದ ಮಂಜೇಶ್ವರದ ಜೋಡುಕಲ್ಲಿನಲ್ಲಿ ನಾಲ್ಕು ದಶಕಗಳಿಂದ ಹಿಂದೂಗಳು ಆರಾಧನೆ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಗಣೇಶ ಮಂದಿರದ ಸ್ಥಳದಲ್ಲಿ ಶಾಶ್ವತ ಚಪ್ಪರ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹಿಂದೂಗಳು ಹೋರಾಟ ನಡೆಸುತ್ತಿದ್ದಾರೆ.
ಕಾಸರಗೋಡು: ಕೇರಳದ ಮಂಜೇಶ್ವರದ ಜೋಡುಕಲ್ಲಿನಲ್ಲಿ ಕಳೆದ ಸುಮಾರು ನಾಲ್ಕು ದಶಕಗಳಿಂದ ಹಿಂದೂಗಳು ಆರಾಧನೆ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಗಣೇಶ ಮಂದಿರದ ಸ್ಥಳದಲ್ಲಿ ಶಾಶ್ವತ ಚಪ್ಪರ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಕಳೆದ 18 ದಿನಗಳಿಂದ ಹಿಂದೂಗಳು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.
ಈ ಹೋರಾಟಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಜೋಡುಕಲ್ಲಿನ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಪುತ್ತಿಲ ಅವರು, "ಸೂರ್ಯ ಚಂದ್ರರಿರುವವರೆಗೂ ಹಿಂದೂ ಸಂಸ್ಕೃತಿ ಶಾಶ್ವತ. ಜೋಡುಕಲ್ಲಿನ ಹಿಂದೂಗಳು ನಡೆಸುತ್ತಿರುವ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ ನೀಡುವಂತಹ ಹೋರಾಟವಾಗಿದೆ. ಅಗತ್ಯ ಬಂದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಈ ಹೋರಾಟದಲ್ಲಿ ಜೊತೆಯಾಗುತ್ತೇನೆ. ಕೇರಳ ಸರ್ಕಾರ ಶೀಘ್ರದಲ್ಲೇ ತನ್ನ ಹಿಂದೂ ವಿರೋಧಿ ನೀತಿಯನ್ನು ಸರಿಪಡಿಸಬೇಕು. ಇದರ ಹಿಂದೆ ಷಡ್ಯಂತ್ರ ನಡೆಸಿದ ಮುಸ್ಲಿಂ ಲೀಗ್‌ಗೆ ಉತ್ತರ ನೀಡುವುದು ಹಿಂದೂ ಸಮಾಜಕ್ಕೆ ಗೊತ್ತಿದೆ" ಎಂದು ಹೇಳಿದರು.

ಅಲ್ಲದೆ, ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಜೋಡುಕಲ್ಲಿನ ಹಿಂದೂಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ನಾಲ್ಕು ದಶಕಗಳ ಧಾರ್ಮಿಕ ಆಚರಣೆ ಮತ್ತು ಆರಾಧನಾ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಜೋಡುಕಲ್ಲಿನ ಹೋರಾಟಕ್ಕೆ ವಿವಿಧ ಹಿಂದೂ ಸಂಘಟನೆಗಳು ಹಾಗೂ ಮುಖಂಡರಿಂದ ಬೆಂಬಲ ವ್ಯಕ್ತವಾಗುತ್ತಿದೆ.