ಪುತ್ತೂರು: ಇಲ್ಲಿನ ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕವು ಪ್ರತಿಷ್ಠಿತ 'ಮಜ್ಜಾರಡ್ಕ ಶ್ರೀವಿಷ್ಣು ಯುವಸಿರಿ ಸಾಂಘಿಕ ಪ್ರಶಸ್ತಿ-2026'ಗೆ ಭಾಜನವಾಗಿದೆ.
ಕಳೆದ ಐದು ವರ್ಷಗಳಿಂದ ಕಾಲೇಜಿನ ಎನ್ಎಸ್ಎಸ್ ಘಟಕವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ.
ಸುಮಾರು 1000ಕ್ಕೂ ಅಧಿಕ ಸ್ವಯಂಸೇವಕರ ಭಾಗವಹಿಸುವಿಕೆಯೊಂದಿಗೆ ವೃದ್ಧಾಶ್ರಮ ಸೇವೆ, ಅನ್ನದಾನ, ಸ್ವಚ್ಛತಾ ಅಭಿಯಾನ, ರಕ್ತದಾನ, ಆರೋಗ್ಯ ಜಾಗೃತಿ, ಪರಿಸರ ಸಂರಕ್ಷಣೆ, ಗಿಡ ನೆಡುವಿಕೆ, ರಸ್ತೆ ಸುರಕ್ಷತಾ ಜಾಗೃತಿ, ಅಂಗನವಾಡಿ ಚಟುವಟಿಕೆಗಳು ಹಾಗೂ ಗ್ರಾಮೀಣ ಸೇವಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು, ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕವು ಮಹತ್ವದ ಪಾತ್ರ ವಹಿಸಿದೆ.
ನ.1 ರಂದು ಮಜ್ಜಾರಡ್ಕದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವವನ್ನು ಸ್ವೀಕರಿಸಲಾಯಿತು.
ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು ಮತ್ತು ಸ್ವಯಂಸೇವಕರು ಸಂತಸ ವ್ಯಕ್ತಪಡಿಸಿದ್ದಾರೆ.