ಬೆಂಗಳೂರು: ಕನ್ನಡದ ಖ್ಯಾತ ಭಾಷಾತಜ್ಞರು, ಹಿರಿಯ ಸಾಹಿತಿ ಹಾಗೂ ವಿಮರ್ಶಕ ಕೆ.ವಿ.ನಾರಾಯಣ (K.V.Narayana) ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಯಲಹಂಕದ ಅವರ ನಿವಾಸದಲ್ಲಿ ಗುರುವಾರ ತಡರಾತ್ರಿ ಆರೋಗ್ಯ ಏರುಪೇರಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಅ.20, 1948 ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಖ್ಯಾತ ಸಾಹಿತಿ ಜಿ.ಎಸ್.ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರ ಸಾಹಿತ್ಯ ಕೃಷಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಸಿಎಂ & ಡಿಸಿಎಂ ಸಂತಾಪ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಖ್ಯಾತ ವಿಮರ್ಶಕ, ಭಾಷಾತಜ್ಞ ಹಾಗೂ ಹಿರಿಯ ಸಾಹಿತಿ ಕೆ.ವಿ.ನಾರಾಯಣ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೆ.ವಿ.ನಾರಾಯಣ ಅವರು ಅಮೂಲ್ಯ ಕೊಡುಗೆಗಳನ್ನು ನೀಡಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿ, ಕುವೆಂಪು ಭಾಷಾ ಭಾರತಿ ಅಧ್ಯಕ್ಷರಾಗಿ ಸಲ್ಲಿಸಿದ ಅವರ ಸೇವೆ ಸದಾ ಸ್ಮರಣೀಯ ಎಂದು ಹೇಳಿದ್ದಾರೆ.
ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಕೂಡ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು, ಕನ್ನಡದ ಖ್ಯಾತ ಭಾಷಾತಜ್ಞರು, ಹಿರಿಯ ಸಾಹಿತಿ, ವಿಮರ್ಶಕರು ಆದ ಕೆ.ವಿ.ನಾರಾಯಣ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು ಎಂದಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಆಳವಾದ ಅಧ್ಯಯನ, ವಿದ್ವತ್ಪೂರ್ಣ ಚಿಂತನೆ ಹಾಗೂ ನಿರಂತರ ಬರವಣಿಗೆಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿರುವುದು ಅವರ ಪಾಂಡಿತ್ಯಪೂರ್ಣ ಸಾಹಿತ್ಯ ಸಾಧನೆಗೆ ಸಂದ ಗೌರವವಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದವರ ಅಗಲಿಕೆಯಿಂದ ಸಾರಸ್ವತ ಲೋಕವಿಂದು ಬಡವಾಗಿದೆ. ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ಹಾಗೂ ಓದುಗರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.