6,000ಕ್ಕೂ ಅಧಿಕ ಮಕ್ಕಳಿಗೆ ಸಾಹಿತ್ಯ ವೇದಿಕೆ ಕಲ್ಪಿಸಿದ ನಾರಾಯಣ ಕುಂಬ್ರಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Dakshina Kannada District Rajyotsava Award: 6,000ಕ್ಕೂ ಅಧಿಕ ಮಕ್ಕಳಿಗೆ ಸಾಹಿತ್ಯ ವೇದಿಕೆ ಕಲ್ಪಿಸಿದ ನಾರಾಯಣ ಕುಂಬ್ರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಪುತ್ತೂರು: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿ ಬೆಳೆಸುವುದರ ಜೊತೆಗೆ, ಸಾಹಿತ್ಯವನ್ನು ಗ್ರಾಮೀಣ ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ, ಸಾಹಿತಿ ಹಾಗೂ ಸಂಘಟಕ ನಾರಾಯಣ ಕುಂಬ್ರ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ, ಮಿತ್ರಂಪಾಡಿ ಜಯರಾಮ್ ರೈ ಅವರ ಪೋಷಕತ್ವದಲ್ಲಿ ಮತ್ತು ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ ನಡೆಯುತ್ತಿರುವ 'ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ' ಅಭಿಯಾನದಡಿ ಕಳೆದ ಐದು ವರ್ಷಗಳಿಂದ ನಾರಾಯಣ ಕುಂಬ್ರ ಅವರು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯ 32 ಗ್ರಾಮಗಳಲ್ಲಿ ಪ್ರತಿ ತಿಂಗಳು ಗ್ರಾಮ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಗ್ರಾಮೀಣ ಮಟ್ಟಕ್ಕೆ ವಿಸ್ತರಿಸಿದ್ದಾರೆ. ಗ್ರಾಮೀಣ ಹಾಗೂ ನಗರಸಭಾ ವ್ಯಾಪ್ತಿಯ 162 ಶಾಲೆಗಳ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಕಲ್ಪಿಸಿರುವುದು ಈ ಅಭಿಯಾನದ ಪ್ರಮುಖ ಸಾಧನೆಯಾಗಿದೆ.

ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸ ಕಥನ, ನನ್ನ ನೆಚ್ಚಿನ ಶಿಕ್ಷಕ/ ಶಿಕ್ಷಕಿ ಹಾಗೂ ನನ್ನ ಆಪ್ತಮಿತ್ರ ಎಂಬ ಐದು ವಿಭಿನ್ನ ಗೋಷ್ಠಿಗಳ ಮೂಲಕ ಮಕ್ಕಳಲ್ಲಿ ಬರವಣಿಗೆ, ಓದು ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಲಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ‘ಕನ್ನಡದಲ್ಲೂ ಐಎಎಸ್ ಬರೆಯಿರಿ’ ಎಂಬ ವಿಶೇಷ ಕಾರ್ಯಾಗಾರ ಆಯೋಜಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 200ಕ್ಕೂ ಅಧಿಕ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಸುಮಾರು 300ಕ್ಕೂ ಅಧಿಕ ಯುವ ಹಾಗೂ ಹಿರಿಯ, ತೆರೆಮರೆಯ ಕವಿಗಳಿಗೆ ಸಾಹಿತ್ಯ ವೇದಿಕೆ ಕಲ್ಪಿಸಿರುವುದು ಗಮನಾರ್ಹ.
ಕವಿತೆಯಿಂದ ಆರಂಭವಾದ ಸಾಹಿತ್ಯ ಪಯಣ:
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ನಾರಾಯಣ ಕುಂಬ್ರ ಅವರು ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಕನ್ನಡ ಕವನಗಳನ್ನು ಬರೆಯುವ ಮೂಲಕ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡವರು. ಕನ್ನಡ ಶಿಕ್ಷಕಿಯರಾದ ಸರೋಜಿನಿ, ಜಯಶ್ರೀ ನಾಯಕ್ ಹಾಗೂ ಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಸಾಹಿತ್ಯದ ಪ್ರಾಥಮಿಕ ಪಾಠಗಳನ್ನು ಕಲಿತ ಅವರು, ಆರಂಭದಲ್ಲಿ ಹನಿಗವನ ಮತ್ತು ಚುಟುಕುಗಳನ್ನು ರಚಿಸುತ್ತಿದ್ದರು. ಬಳಿಕ ಹೊಸ ವರ್ಷ, ಯುಗಾದಿ ಸೇರಿದಂತೆ ವಿವಿಧ ಹಬ್ಬಗಳ ಕುರಿತು ಕವನಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿರುಚಿಯನ್ನು ಬೆಳೆಸಿಕೊಂಡರು.
ಪ್ರಸ್ತುತ ನೆಹರು ನಗರದ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ ಕಳೆದ 13 ವರ್ಷಗಳಿಂದ ಪ್ರಯೋಗಾಲಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಜೀವನದ ಜತೆಗೆ ಸಾಹಿತ್ಯ ಮತ್ತು ಸಂಘಟನಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಬಹುಮುಖ ಸಾಧನೆ:
ನಾರಾಯಣ ಕುಂಬ್ರ ಅವರ 'ಸ್ವಪ್ನಗಳ ತೇರು' ಮತ್ತು 'ಹನಿ ದನಿ' ಕವನ ಸಂಕಲನಗಳು ಪ್ರಕಟಗೊಂಡಿವೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಅವರು, 67 ಕವಿಗಳ ಕವನಗಳನ್ನು ಒಳಗೊಂಡ 'ಸದ್ಭಾವ ಚಿಗುರು' ಸಂಪಾದಿತ ಕೃತಿಯ ಸಂಪಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಸಾಹಿತ್ಯ ರಚನೆಯಾದ 'ಬಿಲ್ವಾರ್ಚನೆ', 'ಸೋಮವಾರ ಸಂತೆಗೆ' ಹಾಗೂ 'ಮೊಳಗಲಿ ಕನ್ನಡದ ಕಹಳೆ' ದೃಶ್ಯಗೀತೆಗಳು ಬಿಡುಗಡೆಯಾಗಿ ಜನಮನ್ನಣೆ ಗಳಿಸಿವೆ.
ಚಿಗುರೆಲೆ ಸಾಹಿತ್ಯ ಬಳಗದ ಮೂಲಕ ವಾರದ ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಅವರು, ಈಗಾಗಲೇ 80 ಸರಣಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳು ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಹಾಗೂ ಪುರಸ್ಕಾರಗಳನ್ನು ಪಡೆದಿದ್ದಾರೆ. 2023ನೇ ಸಾಲಿನಲ್ಲಿ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದ ಸಾಧನೆಗಾಗಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಸಾಹಿತ್ಯ ಎಲ್ಲರಿಗೂ ತಲುಪಬೇಕು ಎಂಬ ಆಶಯ:
ಸಾಹಿತ್ಯವು ಕೇವಲ ಪುಸ್ತಕ ಮತ್ತು ವೇದಿಕೆಗಳಿಗೆ ಸೀಮಿತವಾಗದೆ ಜನಸಾಮಾನ್ಯರ ಬದುಕಿನ ಭಾಗವಾಗಬೇಕು ಎಂಬ ಆಶಯದೊಂದಿಗೆ ನಾರಾಯಣ ಕುಂಬ್ರ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರು, ಜನಪದ ಕಲಾವಿದರು, ಸಾಮಾನ್ಯರು, ಮಕ್ಕಳು, ಹಿರಿಯರು, ಕಿರಿಯರು ಹಾಗೂ ವಿಶೇಷಚೇತನರನ್ನು ಒಳಗೊಂಡಂತೆ ಎಲ್ಲ ವರ್ಗದವರಿಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುತ್ತಿದ್ದಾರೆ.
ಸಾಹಿತ್ಯದ ಮೂಲಕ ಹೊಸ ಪ್ರತಿಭೆಗಳನ್ನು ಗುರುತಿಸುವುದು, ಕನ್ನಡ ಓದುವ ಅಭಿರುಚಿ ಬೆಳೆಸುವುದು, ಯುವ ಬರಹಗಾರರನ್ನು ಪ್ರೋತ್ಸಾಹಿಸುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯದ ವಾತಾವರಣ ನಿರ್ಮಿಸುವುದು ಅವರ ಸಂಘಟನಾ ಕಾರ್ಯದ ವಿಶೇಷತೆಯಾಗಿದೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ ನಾಯಕ್ ಅವರ ಸಹಕಾರದೊಂದಿಗೆ ಗ್ರಾಮ ಸಾಹಿತ್ಯ ಸಂಭ್ರಮದ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಸಾಹಿತ್ಯವನ್ನು ಜನರ ಬಳಿಗೆ ಕೊಂಡೊಯ್ಯುವ ನಿರಂತರ ಪ್ರಯತ್ನ, ಎಲ್ಲರನ್ನೂ ಒಳಗೊಳ್ಳುವ ಸಂಘಟನಾ ಚಾತುರ್ಯ ಹಾಗೂ ಗ್ರಾಮೀಣ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸಿದ ಸೇವೆಯನ್ನು ಗುರುತಿಸಿ ವಿವಿಧ ಸಂಘ-ಸಂಸ್ಥೆಗಳು ಈಗಾಗಲೇ ಅವರನ್ನು ಗೌರವಿಸಿವೆ. ಇದೀಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವರ ಸಾಹಿತ್ಯಿಕ ಮತ್ತು ಸಾಮಾಜಿಕ ಸೇವೆಗೆ ಸಂದ ಮತ್ತೊಂದು ಮಹತ್ವದ ಗೌರವವಾಗಿದೆ.