Rajyotsava Award: ಜನಪದ–ದೈವಾರಾಧನೆ ಕ್ಷೇತ್ರದ ಸಾಧನೆಗೆ ಶಶಾಂಕ ಶಂಕರ ನೆಲ್ಲಿತ್ತಾಯರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Rajyotsava Award: ಜನಪದ–ದೈವಾರಾಧನೆ ಕ್ಷೇತ್ರದ ವಿಶಿಷ್ಟ ಸಾಧನೆಗೆ ಶಶಾಂಕ ಶಂಕರ ನೆಲ್ಲಿತ್ತಾಯರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಪುತ್ತೂರು: ತುಳುನಾಡಿನ ಜನಪದ ಕಲೆ, ದೈವಾರಾಧನೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ & ಬೆಳವಣಿಗೆಗೆ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ ಪುತ್ತೂರಿನ ಶಶಾಂಕ ಶಂಕರ ನೆಲ್ಲಿತ್ತಾಯ (Shashank Shankar Nellithaya) ಅವರಿಗೆ 2026ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಯಕ್ಷಗಾನ ಕಲಾವಿದರಾಗಿ, ದೈವಾರಾಧನಾ ಪರಂಪರೆಯ ಸಾಧಕರಾಗಿ ಹಾಗೂ ಪಾಡ್ದನ–ಸಂಧಿ ಪರಂಪರೆಯ ಸಂರಕ್ಷಕರಾಗಿ ಗುರುತಿಸಿಕೊಂಡಿರುವ ಶಶಾಂಕ ನೆಲ್ಲಿತ್ತಾಯ ಅವರು, ಆಧುನಿಕ ಎಂಜಿನಿಯರಿಂಗ್ ಶಿಕ್ಷಣದ ಜೊತೆಗೆ ತುಳುನಾಡಿನ ಮಣ್ಣಿನ ಸಂಸ್ಕೃತಿಯೊಂದಿಗೆ ಗಾಢವಾದ ನಂಟು ಬೆಳೆಸಿಕೊಂಡವರು. ಪರಂಪರೆಯ ಉಳಿವು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾದ ಜವಾಬ್ದಾರಿ ಎಂಬ ಆಶಯದೊಂದಿಗೆ ಅವರು ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಗುರುಗಳ ಮಾರ್ಗದರ್ಶನ:
ಯಕ್ಷಗಾನ ಕಲೆಯಲ್ಲಿ ತಂದೆ ರಮಾನಂದ ನೆಲ್ಲಿತ್ತಾಯ ಅವರೇ ಪ್ರಥಮ ಗುರು ಹಾಗೂ ಸ್ಫೂರ್ತಿ. ಹಿರಿಯ ಕಲಾವಿದ ಕೀರ್ತಿಶೇಷ ಡಾ.ಶ್ರೀಧರ ಭಂಡಾರಿ ಮಾರ್ಗದರ್ಶನದಲ್ಲಿ 14ಕ್ಕೂ ಹೆಚ್ಚು ವರ್ಷಗಳ ಕಾಲ ಕಲೆಯನ್ನು ಅಭ್ಯಾಸ ಮಾಡಿ ವಿವಿಧ ಆಯಾಮಗಳಲ್ಲಿ ಪರಿಣತಿ ಪಡೆದಿದ್ದಾರೆ. ಕೀರ್ತಿಶೇಷ ಸಂಪಾಜೆ ಶೀನಪ್ಪ ರೈ, ಕೀರ್ತಿಶೇಷ ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಹಾಗೂ ಸುಬ್ರಾಯ ಹೊಳ್ಳ ಕಾಸರಗೋಡು ಸೇರಿದಂತೆ ಹಲವು ಹಿರಿಯ ಕಲಾವಿದರ ಮಾರ್ಗದರ್ಶನ ಇವರ ಕಲಾ ಪಯಣಕ್ಕೆ ಪ್ರೇರಣೆಯಾಗಿದೆ.

ಡಾ.ಶೇಣಿ ಗೋಪಾಲಕೃಷ್ಣ ಭಟ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಪರ್ಧೆಯಲ್ಲಿ ಇಂದ್ರಜಿತು ಪಾತ್ರ ನಿರ್ವಹಿಸಿ ಬಂಗಾರದ ಪದಕ ಗಳಿಸಿರುವುದು ಇವರ ಯಕ್ಷಗಾನ ಸಾಧನೆಯ ಪ್ರಮುಖ ಹೆಗ್ಗಳಿಕೆ.
ದೈವಾರಾಧನೆಯಲ್ಲಿ 25 ವರ್ಷಗಳ ಸುದೀರ್ಘ ಸೇವೆ:
ಪರಂಪರಾಗತವಾಗಿ ಬಲ್ನಾಡು ದಂಡನಾಯಕ ಉಳ್ಳಾಳ್ತಿ ದೈವಸ್ಥಾನದ ಅರ್ಚಕರ ಮನೆತನಕ್ಕೆ ಸೇರಿದ ಶಶಾಂಕ ನೆಲ್ಲಿತ್ತಾಯ ಅವರು, ಬಾಲ್ಯದಿಂದಲೇ ದೈವಾರಾಧನೆಯ ಸಂಸ್ಕಾರವನ್ನು ಮೈಗೂಡಿಸಿಕೊಂಡವರು. ಕುಟುಂಬದ ಹಿರಿಯರು ಹಾಗೂ ತುಳುನಾಡಿನ ಹಿರಿಯ ದೈವಾರಾಧಕರ ಮಾರ್ಗದರ್ಶನದಲ್ಲಿ ಆಚರಣೆ, ಸಂಪ್ರದಾಯ, ಪಾಡ್ದನ ಮತ್ತು ಸಂಧಿ ಪರಂಪರೆಯ ಕುರಿತು ಆಳವಾದ ಅನುಭವ ಸಂಪಾದಿಸಿದ್ದಾರೆ.
2000ರ ಮೇ 20ರಂದು ಶಿಶಿಲ ಶಿಶಿಲೇಶ್ವರ ದೇಗುಲದ ಜಾತ್ರಾ ಮಹೋತ್ಸವದ ನೇಮೋತ್ಸವದಲ್ಲಿ ಪ್ರಥಮ ಬಾರಿಗೆ ಪಾರಿ ಹೇಳುವ ಮೂಲಕ ದೈವಾರಾಧನಾ ಕ್ಷೇತ್ರದಲ್ಲಿ ಪಯಣ ಆರಂಭಿಸಿದ ಅವರು, ಇದೀಗ 25 ವರ್ಷಗಳಿಗೂ ಅಧಿಕ ಅನುಭವ ಹೊಂದಿದ್ದಾರೆ.
ಈವರೆಗೆ ಐದು ಸಾವಿರಕ್ಕೂ ಅಧಿಕ ಭೂತಕೋಲಗಳಲ್ಲಿ ಮಧ್ಯಸ್ಥನಾಗಿ ಭಾಗವಹಿಸಿದ್ದು, ಪ್ರತಿವರ್ಷ 150ಕ್ಕೂ ಅಧಿಕ ಭೂತಕೋಲಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, 30ಕ್ಕೂ ಹೆಚ್ಚು ದೈವಗಳ ಸಂಧಿ–ಪಾಡ್ದನಗಳನ್ನು ಕಂಠಪಾಠ ಮಾಡಿಕೊಂಡಿರುವುದು ಇವರ ವಿಶೇಷ ಸಾಧನೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇಗುಲ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಶಿಶಿಲ ಶಿಶಿಲೇಶ್ವರ ದೇಗುಲ, ಬಲ್ನಾಡು ದಂಡನಾಯಕ ಉಳ್ಳಾಳ್ತಿ ದೈವಸ್ಥಾನ, ಮುಗೇರಡ್ಕ ಮೂವರು ದೈವಗಳ ದೈವಸ್ಥಾನ, ಪಳ್ಳತಡ್ಕ ಹೊಸಮ್ಮ ದೈವಸ್ಥಾನ, ಕಬಕ ಅಡ್ಯಾಲ್ಲಾಯ ಹಾಗೂ ಪಾಂಗಲಾಯಿ ಅರಸು ಮುಂಡ್ಯತ್ತಾಯ ದೈವಸ್ಥಾನ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳಲ್ಲಿ ದೈವಾರಾಧನಾ ಸೇವೆ ಸಲ್ಲಿಸಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ನೂರಕ್ಕೂ ಅಧಿಕ ದೇವಸ್ಥಾನ, ದೈವಸ್ಥಾನ ಹಾಗೂ ತರವಾಡುಗಳಲ್ಲಿ ಸನ್ಮಾನಿಸಲಾಗಿದೆ.
ಪ್ರಶಸ್ತಿ-ಗೌರವಗಳ ಗರಿ:
ಯಕ್ಷಗಾನದಲ್ಲಿ ಇಂದ್ರಜಿತು ಪಾತ್ರಕ್ಕೆ ಬಂಗಾರದ ಪದಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನ ಹಾಗೂ ಸಹ್ಯಾದ್ರಿ ಫ್ರೆಂಡ್ಸ್ (ರಿ.) ವತಿಯಿಂದ 2026ನೇ ಸಾಲಿನ 'ಸಹ್ಯಾದ್ರಿ ಸಿರಿ ಪ್ರಶಸ್ತಿ' ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ. ಇದೀಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಇವರ ಸಾಂಸ್ಕೃತಿಕ ಬದುಕಿನ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ರಮಾನಂದ ನೆಲ್ಲಿತ್ತಾಯ ಮತ್ತು ಜ್ಯೋತಿ ರಮಾನಂದ ನೆಲ್ಲಿತ್ತಾಯ ದಂಪತಿಯ ಪುತ್ರರಾಗಿರುವ ಶಶಾಂಕ ಅವರು, ಪತ್ನಿ ಪೂರ್ಣಿಮಾ ಹಾಗೂ ಸಹೋದರಿ ಪ್ರಿಯಾಂಕ ಅವರ ಸಹಕಾರದೊಂದಿಗೆ ತಮ್ಮ ಕಲಾ ಮತ್ತು ಸಾಂಸ್ಕೃತಿಕ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಯಕ್ಷಗಾನದ ರಂಗಸ್ಥಳದಿಂದ ದೈವಾರಾಧನೆಯ ಕಳದವರೆಗೆ ತುಳುನಾಡಿನ ಜನಪದ ಪರಂಪರೆಯನ್ನು ತಮ್ಮ ಅನುಭವ, ಅಧ್ಯಯನ ಮತ್ತು ಸೇವೆಯ ಮೂಲಕ ಜೀವಂತವಾಗಿರಿಸಿರುವ ಶಶಾಂಕ ಶಂಕರ ನೆಲ್ಲಿತ್ತಾಯ ಅವರ ಸಾಧನೆ ಸಾಂಸ್ಕೃತಿಕ ಲೋಕಕ್ಕೆ ಪ್ರೇರಣೆಯಾಗಿದೆ. ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಕಲಾಭಿಮಾನಿಗಳು, ಹಿತೈಷಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್ನಿಂದ ಹಿಡಿದು ಇನ್ಸ್ಟಾ, ಎಕ್ಸ್, ಫೇಸ್ಬುಕ್, ಯೂಟ್ಯೂಬ್, ನ್ಯೂಸ್ ಆಪ್ವರೆಗೆ ಎಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.