ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು: ಫ್ರೆಶರ್ಸ್ ಡೇ ಉದಯಂ-2026 ಆಯೋಜನೆ
Vivekananda Engineering College: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿ ಫ್ರೆಶರ್ಸ್ ಡೇ 'ಉದಯಂ-2026' ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪುತ್ತೂರು: ಮಾನವ ಜೀವನದಲ್ಲಿ ಹಣ ಮಾಡಬೇಕು. ಆದರೆ, ಅದರ ಜೊತೆಗೆ ಸಮಾಜಕ್ಕೆ ಒಳಿತಾಗುವ, ದೇಶಕ್ಕೆ ಹಿತವಾಗುವ ಕೆಲಸವನ್ನು ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಮತ್ತು ಸೋಲಾರ್ ಉದ್ಯಮಿ ಸೂರಜ್ ಕುಮಾರ್ ಹೇಳಿದರು.
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಯಲ್ಲಿ ಈಚೆಗೆ ಏರ್ಪಡಿಸಿದ್ದ ಫ್ರೆಶರ್ಸ್ ಡೇ 'ಉದಯಂ-2026' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.
ಎಂಜಿನಿಯರಿಂಗ್ ಎಂದರೆ ಅದೊಂದು ಮನಸ್ಥಿತಿ. ಅದಕ್ಕೆ ನಿರ್ದಿಷ್ಟ ಗುರಿಯನ್ನು ಜೋಡಿಸಿಕೊಂಡರೆ ಮಾತ್ರ ನಾವಂದುಕೊಂಡಂತೆ ಆಗಬಹುದು. ನಾವು ಎಲ್ಲಿಯೇ ಹೋಗಲಿ, ಯಾವುದೇ ಉದ್ಯೋಗವನ್ನು ಮಾಡಲಿ, ಅಲ್ಲಿ ನಮ್ಮತನವನ್ನು ಬಿಟ್ಟುಕೊಡಬಾರದು. ದೇಶದ ಘನತೆ ಗೌರವವನ್ನು ಎತ್ತಿ ಹಿಡಿಯುವ ಕಾಯಕದಲ್ಲಿ ನಿರತರಾಗಬೇಕು ಎಂದರು.
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ದೇವಿಚರಣ್ ರೈ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಮತ್ತು ಸಮಯಪಾಲನೆ ಅಗತ್ಯವಾಗಿದೆ. ಜೀವನದಲ್ಲಿ ಏನನ್ನು ಸಾಧಿಸಬೇಕಾದರೂ. ಇವೆರಡು ಅಗತ್ಯವಾಗಿ ಬೇಕು. ಜೀವನದಲ್ಲಿ ಒಳ್ಳೆಯದಾಗಬೇಕಾದರೆ, ಒಳ್ಳೆಯ ಕರ್ಮ ಮಾಡಬೇಕು. ವಿದ್ಯಾರ್ಥಿಗಳಿಗೆ ಉತ್ತಮವಾಗಿ ಓದುವುದೇ ಸತ್ಕರ್ಮ ಎಂದು ತಿಳಿಸಿದರು.
ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ಮಾತನಾಡಿ, ಜ್ಞಾನ, ವರ್ತನೆ ಹಾಗೂ ಕೌಶಲ ಈ ಮೂರು ವಿಷಯಗಳು ಜೀವನದಲ್ಲಿ ಅಗತ್ಯವಾದವು. ಪುಸ್ತಕದಿಂದ ದೊರೆತ ಜ್ಞಾನ, ಸರಿಯಾದ ಅಭ್ಯಾಸದಿಂದ ಗಳಿಸಿಕೊಂಡ ಉತ್ತಮ ವರ್ತನೆ, ಇವೆರಡರ ಜೊತೆಗೆ ಉತ್ತಮ ಕೌಶಲವಿದ್ದರೆ ಮಾನವ ಉನ್ನತ ಸ್ಥಾನವನ್ನು ಗಳಿಸಿಕೊಳ್ಳಬಲ್ಲ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ, ಕೆಲವು ವಿದ್ಯಾರ್ಥಿಗಳು ದೊಡ್ದ ಕಲ್ಪನೆಯೊಂದಿಗೆ ಎಂಜಿನಿಯರಿಂಗ್ ಶಿಕ್ಷಣಕ್ಕೆ ಸೇರಿದ್ದರೆ, ಇನ್ನು ಕೆಲವರು ಹೆತ್ತವರ ಆಶೋತ್ತರಗಳಿಗೆ ಅನುಗುಣವಾಗಿ ಈ ಕೋರ್ಸುಗಳಿಗೆ ಸೇರಿರಬಹುದು. ಆದರೆ, ನಿಮ್ಮ ಧ್ಯೇಯ ಒಳ್ಳೆಯ ತಾಂತ್ರಿಕ ಶಿಕ್ಷಣವನ್ನು ಗಳಿಸುವುದಷ್ಟೇ ಆಗಿರಬೇಕು. ಎಜಿನಿಯರಿಂಗ್ ಎಂದರೆ ಅಂತ್ಯವಿಲ್ಲದ ಅವಕಾಶಗಳ ಆಗರ. ಎಂಜಿನಿಯರಿಂಗ್ನಲ್ಲಿ ಬಹುವಿಧ ವಿಷಯಗಳನ್ನು ಅಭ್ಯಸಿಸಿದರೆ, ಅವಕಾಶ ಅಧಿಕವಾಗಿದೆ ಎಂದರು.
ಕಾಲೇಜಿನಲ್ಲಿ ನಡೆದ ವಿಸಿಎಲ್ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ವಿಜೇತ ವಿದ್ಯಾರ್ಥಿ ತಂಡಗಳಿಗೆ ಈ ವೇಳೆ ಬಹುಮಾನ ವಿತರಿಸಲಾಯಿತು.
ಮೂಲವಿಜ್ಞಾನ ವಿಭಾಗದ ಸಂಯೋಜಕ ಡಾ.ಶ್ವೇತಾಂಬಿಕಾ.ಪಿ, ಪ್ರೊ.ತೇಜಸ್ವಿನಿ.ಎಲ್.ಪಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ.ಶ್ರೀನಿಧಿ ಎ ಹಾಗೂ ಪ್ರೊ.ನಿಶಾ ಜಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನೂಷಾ ರೈ ಸ್ವಾಗತಿಸಿದರು, ಕೀರ್ತನಾ ವಂದಿಸಿದರು. ಶ್ರೀನಿವಾಸ್ ಹೆಗ್ಡೆ ಮತ್ತು ಆಶಿತಾ ಕಾರ್ಯಕ್ರಮ ನಿರ್ವಹಿಸಿದರು.