ವಂದೇ ಮಾತರಂ ಗೀತೆ ನಮ್ಮ ಅಸ್ಮಿತೆಯ ಗುರುತು: ರಾಜೇಶ ಪದ್ಮಾರ್
Vivekananda College: ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ 'ವಂದೇ ಮಾತರಂ' 150ನೇ ವರ್ಷದ ಆಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪುತ್ತೂರು: ವಂದೇ ಮಾತರಂ ಗೀತೆಯೂ ಏಕತೆಯನ್ನು ಸಾರುವುದರೊಂದಿಗೆ, ಜನರಲ್ಲಿ ಪ್ರೇರಣೆಯನ್ನು ಮೂಡಿಸುತ್ತದೆ. ಇದರ ನಿರ್ಮಾತೃ ಬಂಕಿಮ ಚಂದ್ರ ಚಟರ್ಜಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ ಪದ್ಮಾರ್ ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ & ಸಂಶೋಧನಾ ಕೇಂದ್ರ, ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಸಹಯೋಗದಲ್ಲಿ, ಈಚೆಗೆ ನಡೆದ ವಂದೇ ಮಾತರಂ 150ನೇ ವರ್ಷದ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.
ಯಾವುದೇ ಜಾತಿ, ಬೇಧವಿಲ್ಲದೆ ರೂಪಿಸಿದ ಈ ವಂದೇ ಮಾತರಂ ಗೀತೆಯು ಬ್ರಿಟಿಷರ ಆಳ್ವಿಕೆಯನ್ನು ಅಂತ್ಯಗೊಳಿಸುವ ಉದ್ದೇಶದಿಂದ, ಬಂಗಾಳ ವಿಭಜನೆಯ ವಿರೋಧವಾಗಿ 'ವಂಗ ಭಂಗ' ಚಳವಳಿಯ ಧ್ಯೇಯ ಗೀತೆಯಾಗಿ ಮೂಡಿಬಂದ ಗೀತೆಯಿದು. ಕೊಲ್ಕತ್ತಾದಿಂದ ಹೊರಟ ಹೋರಾಟದ ಗೀತೆ ವಿಶ್ವಾದ್ಯಂತ ವ್ಯಾಪಿಸಿತು ಹಾಗೂ ಯುಗಾಂತರ ಸಂಘಟನೆಯ ಆರಂಭಕ್ಕೆ ಮುಂದಡಿಯಿಟ್ಟಿತು. ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಈ ಜಯಘೋಷವನ್ನು ಕೂಗಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ, ಸಮಾಜದ ಪ್ರತಿಯೊಂದು ಸ್ಥರಗಳಲ್ಲೂ ವಂದೇ ಮಾತರಂ ಕುರಿತು ಜಾಗೃತಿ ಮೂಡಬೇಕು. ವಂದೇ ಮಾತರಂ ಕುರಿತ ಈ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ರಾಷ್ಟ್ರಿಯತೆಯೆಡೆಗೆ ಎಚ್ಚರಿಸುವ ಕಾರ್ಯವಿದು ಎಂದರು.
ಸಮಾರಂಭದ ಬಳಿಕ ವಿದ್ಯಾರ್ಥಿಗಳು ಒಕ್ಕೊರಲಿನಿಂದ ವಂದೇ ಮಾತರಂ ಗೀತೆಯನ್ನು ಹಾಡಿದರು.
ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ.ವಿಜಯ ಸರಸ್ವತಿ ಬಿ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ವಿಶೇಷ ಅಧಿಕಾರಿ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಪ್ರಕಾಶ್ ವಂದಿಸಿದರು. ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಜೆ ರೈ ನಿರೂಪಿಸಿದರು.