ಮಡಿಯಾಲದಲ್ಲಿ ಉಚಿತ ಉನ್ನತ ಶಿಕ್ಷಣ ಕೇಂದ್ರಕ್ಕೆ ನಾಳೆ ಭೂಮಿಪೂಜೆ
Madiyala: ಶ್ರೀ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಾಬ್ದಿ ಸ್ಮರಣಾರ್ಥ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಉಚಿತ ಪದವಿ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ನ.30 ರಂದು ಸೋಮವಾರದಂದು ಚಾಲನೆ ದೊರೆಯಲಿದೆ.
ಮಡಿಯಾಲ (ದಕ್ಷಿಣ ಕನ್ನಡ): ಶ್ರೀ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಾಬ್ದಿ ಸ್ಮರಣಾರ್ಥ, ಗ್ರಾಮೀಣ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಉಚಿತ ಪದವಿ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ನ.30 ರಂದು ಸೋಮವಾರದಂದು ಚಾಲನೆ ದೊರೆಯಲಿದೆ.
ಗ್ರಾಮೀಣ ಯುವಜನರಿಗೆ ಕೃಷಿ, ಉದ್ಯೋಗ, ಶಿಕ್ಷಣ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ.
ಇದರ ಪ್ರಮುಖ ಭಾಗವಾಗಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಸಂಶೋಧನೆ ಹಾಗೂ ನಾವೀನ್ಯತಾ ಕೇಂದ್ರ (Centre for Research and Innovation in Artificial Intelligence and Machine Learning) ಸ್ಥಾಪನೆಯಾಗಲಿದೆ.
ಅಂದು ಬೆಳಗ್ಗೆ 10.30ಕ್ಕೆ ಮಡಿಯಾಲದಲ್ಲಿ ನಡೆಯುವ ಭೂಮಿಪೂಜೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹಾಗೂ 'ಒನ್ ವರ್ಡ್ ಒನ್ ಫ್ಯಾಮಿಲಿ' ಸಂಸ್ಥಾಪಕ ಸದ್ಗುರು ಮಧುಸೂದನ್ ಸಾಯಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಸದ್ಗುರು ಮಧುಸೂದನ್ ಸಾಯಿ ಅವರು ಸಂಸ್ಥೆಯ ಆಶಯ, ಭವಿಷ್ಯದ ಶಿಕ್ಷಣದ ದೃಷ್ಟಿಕೋನ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಸಬಲೀಕರಣದ ಕುರಿತು ಸಂಸ್ಥಾಪಕರ ಭಾಷಣ ಮಾಡಲಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಅವಕಾಶಗಳನ್ನು ಉಚಿತವಾಗಿ ಒದಗಿಸುವ ಈ ಯೋಜನೆಯು ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡುವ ನಿರೀಕ್ಷೆಯಿದೆ.