ವಿದ್ಯಾರ್ಥಿ ಜೀವನದಲ್ಲೇ ದೀರ್ಘಕಾಲದ ಗುರಿ ಹೊಂದಬೇಕು: ಸು.ರಾಮಣ್ಣ
Vivekananda Engineering College: ಇಲ್ಲಿ ವೃತ್ತಿವಾದ ಮತ್ತು ಆದರ್ಶವಾದ ಎಂಬ ವಿಷಯದ ಕುರಿತು ಸು.ರಾಮಣ್ಣ ಅವರು ಉಪನ್ಯಾಸ ನೀಡಿದರು.
ಪುತ್ತೂರು: ಮನುಷ್ಯನ ಜೀವನದ ಗುರಿ ವೈಯಕ್ತಿಕ ಸಾಧನೆಗೆ ಮಾತ್ರ ಸೀಮಿತವಾಗಿರಬಾರದು. ಸಮಾಜಕ್ಕೆ ಹಾಗೂ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶ ನಮ್ಮದಾಗಿರಬೇಕು. ಇದಕ್ಕಾಗಿ ವಿವಿಧ ವರ್ಗದ ಜನರೊಂದಿಗೆ ಬೆರೆತು ಕಾರ್ಯನಿರ್ವಹಿಸಬೇಕು. ಆಗ ಸಮಾಜದ ನೈಜ ಅಗತ್ಯಗಳ ಅರಿವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.
ಇಲ್ಲಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಾವರ್ಕರ್ ಸಭಾಭವನದಲ್ಲಿ ಈಚೆಗೆ 'ವೃತ್ತಿವಾದ ಮತ್ತು ಆದರ್ಶವಾದ' ವಿಷಯದ ಕುರಿತು ಉಪನ್ಯಾಸ ನೀಡಿದರು.

ಓದು ಮತ್ತು ಜ್ಞಾನಸಂಗ್ರಹ ನಮ್ಮ ಸಾಧನೆಯ ಮೊದಲ ಹಂತ. ವಿದ್ಯಾರ್ಥಿ ದೆಸೆಯಲ್ಲಿಯೇ ದೀರ್ಘಕಾಲದ ಗುರಿಯನ್ನು ಹೊಂದಬೇಕು. ಜೀವನದಲ್ಲಿ ಕನಸು ಕಾಣಬೇಕು. ದೇವರು ನೀಡಿರುವ ಬುದ್ಧಿಶಕ್ತಿ ಹಾಗೂ ವ್ಯಕ್ತಿತ್ವವನ್ನು ಸಮರ್ಥವಾಗಿ ಬಳಸಿಕೊಂಡು ಸಾಧಕರಾಗಬೇಕು ಎಂದು ಹೇಳಿದರು.
ದೇಶದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಮಾತುಗಳನ್ನು ಸ್ಮರಿಸಿದ ಅವರು, ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದರ ಜೊತೆಗೆ ಸೃಷ್ಟಿಯ ಹಿತಕ್ಕಾಗಿ ಬದುಕಬೇಕು ಎಂದರು.
ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾಮಿ ವಿವೇಕಾನಂದ, ವೀರ ಸಾವರ್ಕರ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ನಮಗೆ ದಾರಿದೀಪವಾಗಬೇಕು. ಮಾನವೀಯತೆಯನ್ನು ಉಳಿಸುವ ನಿಟ್ಟಿನಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿಯೂ ಸೂಕ್ತ ನಿರ್ಧಾರ ಕೈಗೊಂಡ ಪೈಲಟ್ ಕ್ಯಾಪ್ಟನ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ನಿಜವಾದ ಸಾಧಕ ಎಂದು ಬಣ್ಣಿಸಿದರು.

ಕೋಟ್ಯಂತರ ರೂಪಾಯಿ ವೇತನ ಪಡೆಯುವ ತಂತ್ರಜ್ಞರಾಗುವುದಕ್ಕಿಂತ ಸರ್.ಎಂ.ವಿಶ್ವೇಶ್ವರಯ್ಯ ಅವರಂತೆ ದೇಶಕ್ಕೆ ಕೊಡುಗೆ ನೀಡುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಡಿ ಕಲ್ಲಾಜೆ, ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್, ಆಡಳಿತ ಮಂಡಳಿ ಸಂಚಾಲಕ ಪ್ರಸನ್ನ ದರ್ಬೆ, ನಿರ್ದೇಶಕ ಮನೋಜ್ ಕುಮಾರ್, ಸುಜಿತ್ ಕುಮಾರ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅಚ್ಯುತ ನಾಯಕ್, ವಿವೇಕಾನಂದ ಸಿಬಿಎಸ್‌ಇ ಶಾಲೆಯ ಸಂಚಾಲಕ ರವಿನಾರಾಯಣ, ವಿವೇಕಾನಂದ ವಸತಿ ನಿಲಯಗಳ ನಿರ್ದೇಶಕ ರಾಜಗೋಪಾಲ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ಅ.ನಾ.ರವಿ ಮತ್ತಿತರರು ಉಪಸ್ಥಿತರಿದ್ದರು.
ರವಿಕೃಷ್ಣ ಡಿ. ಕಲ್ಲಾಜೆ ಸ್ವಾಗತಿಸಿದರು. ಡಾ.ಪುರುಷೋತ್ತಮ ಚಿಪ್ಪಾರ್ ವಂದಿಸಿದರು. ಪ್ರೊ.ನಿರುಪಮಾ ಕೆ ಕಾರ್ಯಕ್ರಮ ನಿರೂಪಿಸಿದರು.