ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದವರಿಗೆ ದಂಡ
Mangaluru: ಮಂಗಳೂರು ನಗರದ ಲಾಲ್‌ಬಾಗ್, ಪಂಪ್‍ವೆಲ್ ಮತ್ತಿತ್ತರ ಕಡೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ತಿಳುವಳಿಕೆ ನೀಡಿ, ದಂಡ ವಿಧಿಸಲಾಯಿತು.
ಮಂಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ, ಸೋಮವಾರ ಮಂಗಳೂರು ನಗರದ ಲಾಲ್‌ಬಾಗ್, ಪಂಪ್‍ವೆಲ್ ಮತ್ತಿತ್ತರ ಕಡೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ತಿಳುವಳಿಕೆ ನೀಡಿ, ದಂಡ ವಿಧಿಸಲಾಯಿತು.
ಅಂಗಡಿಯ ಮಾಲೀಕರಿಗೂ ಸಹ ಸಿಂಗಲ್ ಬಿಡಿ ಮಾರಾಟ ಮಾಡದಂತೆ ಎಚ್ಚರಿಸಲಾಯಿತು. ತಂಬಾಕು ನಿಯಂತ್ರಣ ಕಾಯ್ದೆ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಕೇವಲ ಬಿಡಿ, ಸಿಗರೇಟ್ ಮಾತ್ರವಲ್ಲದೆ, ತಂಬಾಕು ಉತ್ಪನ್ನಗಳನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ 1,000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.
21 ವರ್ಷದೊಳಗಿನವರು ತಂಬಾಕು ಉತ್ಪನ್ನಗಳನ್ನು ಬಳಸುವುದು ಹಾಗೂ ಸಾಗಾಟ ಮಾಡುವುದು ಅಪರಾಧವಾಗಿದೆ. ಅಲ್ಲದೆ, ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಮತ್ತು ಸೇವನೆ ಮಾಡುವುದು ಅಪರಾಧವಾಗಿದೆ. ಇದರ ಉಲ್ಲಂಘನೆಗೆ ರೂ.1 ಸಾವಿರದವರೆಗೆ ದಂಡ ಹಾಕಬಹುದಾಗಿದೆ.
ಭಾರತ ಸರ್ಕಾರದ ಆದೇಶದಂತೆ ತಂಬಾಕು ಮುಕ್ತ ಯುವ ಅಭಿಯಾನ ಆರಂಭಿಸಲಾಗಿದ್ದು, ಯುವಜನರನ್ನು ತಂಬಾಕಿನ ದುಷ್ಪರಿಣಾಮಗಳಿಂದ ದೂರವಿಡುವುದು ಇದರ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಎಲ್ಲ ಮಕ್ಕಳು, ವಿದ್ಯಾರ್ಥಿಗಳು, ಯುವ ಜನತೆ ತಂಬಾಕಿನ ಉತ್ಪನ್ನಗಳಿಂದ ದೂರವಿರಬೇಕು ಎಂದು ಮನವಿ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ.ನವೀನ್ ಚಂದ್ರ ಕುಲಾಲ್ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಹಾಜರಿದ್ದರು.