ಪುತ್ತೂರು: 'ಮಣ್ಣ ಘಮದ ಸಾಹಿತ್ಯ ಸಂಭ್ರಮ'ದ ಆಶಯದ ದೃಶ್ಯಗೀತೆ ಬಿಡುಗಡೆ

Puttur: ಪುತ್ತೂರಿನಲ್ಲಿ 'ಮಣ್ಣ ಘಮದ ಸಾಹಿತ್ಯ ಸಂಭ್ರಮ' ಕಾರ್ಯಕ್ರಮದ ಆಶಯದ ದೃಶ್ಯಗೀತೆ ಬಿಡುಗಡೆ ಸಮಾರಂಭವು ನಡೆಯಿತು.

Nov 23, 2026 - 14:07
Nov 23, 2026 - 14:07
ಪುತ್ತೂರು: 'ಮಣ್ಣ ಘಮದ ಸಾಹಿತ್ಯ ಸಂಭ್ರಮ'ದ ಆಶಯದ ದೃಶ್ಯಗೀತೆ ಬಿಡುಗಡೆ

ಪುತ್ತೂರು: ಬೇರೆ ಭಾಷೆಗಳ ಪ್ರಭಾವ ಮತ್ತು ಅತಿಕ್ರಮಣದಿಂದ ಕನ್ನಡ ಭಾಷೆಯ ಉಳಿವಿಗೆ ಮುಂದಿನ ದಿನಗಳಲ್ಲಿ ಸವಾಲು ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ, ಕನ್ನಡದ ಹಿರಿಮೆಯನ್ನು ಎತ್ತಿಹಿಡಿಯಲು ಮತ್ತು ಭಾಷೆಗೆ ಹೊಸ ಚೈತನ್ಯ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕ ಮತ್ತು ನಾರಾಯಣ ಕುಂಬ್ರ ಅವರು, ಕಳೆದ 5 ವರ್ಷಗಳಿಂದ ನಿರಂತರ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಎಂದು  ಹಿರಿಯ ಸಾಹಿತಿ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ಡಾ.ಕೊಳ್ತಪ್ಪೆ ಗೋವಿಂದ ಭಟ್ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಸಭಾಂಗಣದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ  ಮಿತ್ರಂಪಾಡಿ ಜಯರಾಮ್ ರೈ (ಅಬುಧಾಬಿ) ನಿರ್ಮಾಣ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಸಂಯೋಜನೆಯಲ್ಲಿ ನಡೆಯಲಿರುವ 'ಮಣ್ಣ ಘಮದ ಸಾಹಿತ್ಯ ಸಂಭ್ರಮ' ಕಾರ್ಯಕ್ರಮದ ಆಶಯದ ದೃಶ್ಯಗೀತೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿ, ಆಲೋಚನೆಗಳು ಹಾಗೂ ದೈನಂದಿನ ವ್ಯವಹಾರಗಳು ಭಾಷೆಯ ಮೂಲಕವೇ ಅಭಿವ್ಯಕ್ತಗೊಳ್ಳುತ್ತವೆ. ಭಾಷೆ ದುರ್ಬಲವಾದರೆ ಅದರೊಂದಿಗೆ ಸಂಸ್ಕೃತಿಯೂ ದುರ್ಬಲವಾಗುತ್ತದೆ. ಮಾತೃಭಾಷೆಯ ಅಳಿವು ನಮ್ಮ ನೆಲದಲ್ಲೇ ನಾವು ಅನ್ಯರಂತೆ ಬದುಕುವ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಆದ್ದರಿಂದ ಕನ್ನಡಿಗರು ತಮ್ಮ ಜೀವನಕ್ಕೆ ನೀಡುವಷ್ಟೇ ಮಹತ್ವವನ್ನು ಮಾತೃಭಾಷೆಯ ಉಳಿವಿಗೂ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡದ ಬಗ್ಗೆ ಜನರಲ್ಲಿ ಅಭಿಮಾನ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಪುತ್ತೂರು ಭಾಗದ 32 ಗ್ರಾಮಗಳ ಪೈಕಿ ಈಗಾಗಲೇ 22 ಗ್ರಾಮಗಳಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕನ್ನಡದ ವೈಭವವನ್ನು ಮೆರೆಸುವ ಮೂಲಕ ಭಾಷೆಯ ಪುನರುಜ್ಜೀವನಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಕಳೆದ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ತಮ್ಮ ಬದುಕಿನ ಸಾರ್ಥಕ ಕ್ಷಣಗಳಲ್ಲಿ ಒಂದಾಗಿದೆ. ಅಧ್ಯಕ್ಷ ಸ್ಥಾನದ ಕೊನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಈ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬ ಭಾವನಾತ್ಮಕ ತೊಳಲಾಟವಿದೆ. ಆದರೆ ಕನ್ನಡಾಭಿಮಾನಿಗಳ ಒಡನಾಟ ಮತ್ತು ಸಾಹಿತ್ಯ ಸೇವೆಯೇ ತಾನು ಗಳಿಸಿದ ಬಹುದೊಡ್ಡ ಸಂಪತ್ತು ಎಂದು ಭಾವುಕರಾದರು.

ತಮ್ಮ ಇತಿಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ, ಗೌರವ ಮತ್ತು ಗಾಂಭೀರ್ಯಕ್ಕೆ ಯಾವುದೇ ಚ್ಯುತಿ ಬಾರದಂತೆ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹಿಂದಿನ ಅಧ್ಯಕ್ಷರು ಹಾಕಿಕೊಟ್ಟ ಪರಂಪರೆಯ ಹಾದಿಯಲ್ಲಿಯೇ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬಂದಿದ್ದು, ಎಲ್ಲರ ಸಹಕಾರದಿಂದ ಹಲವು ಮಹತ್ವದ ಕಾರ್ಯಗಳನ್ನು ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಹಿಂದಿನ ಕಾಲದಲ್ಲಿ ಸಾಹಿತಿಗಳು, ಸಂಘಟಕರು ಹಾಗೂ ಉದ್ಯಮಿಗಳು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಹಲವು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಆದರೆ ಆಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಅಂತರ್ಜಾಲದ ಪ್ರಭಾವ ಇಂದಿನಷ್ಟು ಇರದ ಕಾರಣ ಅವರ ಸಾಧನೆಗಳು ಹೆಚ್ಚಿನ ಪ್ರಚಾರ ಪಡೆಯಲು ಸಾಧ್ಯವಾಗಿರಲಿಲ್ಲ. ಇಂದು ಪತ್ರಿಕಾ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಹಿತ್ಯಿಕ ಚಟುವಟಿಕೆಗಳು ವ್ಯಾಪಕವಾಗಿ ಜನರನ್ನು ತಲುಪುತ್ತಿವೆ ಎಂದು ಹೇಳಿದರು.

'ಗ್ರಾಮ ಸಾಹಿತ್ಯ ಸಂಭ್ರಮ'ದಂತಹ ಬೃಹತ್ ಕಾರ್ಯಕ್ರಮಗಳು ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧ್ಯವಾಗುವಂಥದ್ದಲ್ಲ. ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆಯಾಗಿ ಕಾರ್ಯನಿರ್ವಹಿಸಿದರೂ ಅದರ ಹಿಂದೆ ಅನೇಕ ಮಂದಿಯ ಸಂಘಟಿತ ಶ್ರಮ ಮತ್ತು ಸಹಕಾರವಿದೆ. ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದರೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಸೇವೆಯಲ್ಲಿ ಸದಾ ತೊಡಗಿಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಾರಾಯಣ ಕುಂಬ್ರ ಅವರು, ಆಗಮಿಸಿದ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮದ ಉದ್ದೇಶ ಹಾಗೂ ಸಾಹಿತ್ಯ ಸಂಭ್ರಮದ ಆಶಯಗಳನ್ನು ವಿವರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಂಬ್ರ ದುರ್ಗಾಪ್ರಸಾದ್ ರೈ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 

ಕಟೀಲು ಮೇಳದ ಯಕ್ಷಗಾನ ಕಲಾವಿದ ಗಣೇಶ ಪಾಲೆಚ್ಚಾರು ಮಾತನಾಡಿ, ಪುತ್ತೂರಿನಲ್ಲಿ ದೊಡ್ಡ ಸಾಹಿತ್ಯಿಕ ಬಳಗವಿದ್ದು, ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಮೂವತ್ತಕ್ಕೂ ಅಧಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಅದರಲ್ಲೂ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ವಿಸ್ತರಿಸಿರುವುದು ಗಮನಾರ್ಹ ಸಾಧನೆ ಎಂದರು.

ವೇದಿಕೆಯಲ್ಲಿ ಅಪೂರ್ವ ಕಾರಂತ್ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು 

ದೃಶ್ಯಗೀತೆ ನಿರ್ಮಾಣಕ್ಕೆ ಸಹಕಾರ ನೀಡಿದ ಪಾರ್ಥವಿ ಕ್ರಿಯೇಷನ್ಸ್‌ನ ಮಂಜುಳಾ ಮುರಳೀಕೃಷ್ಣ, ಸುನೀತಾ ಎನ್., ಹರ್ಷಿತಾ ಪಿ. ಕಡೇಶಿವಾಲಯ ಹಾಗೂ ಹಿರಿಯ ಸಾಹಿತಿಗಳಾದ ಡಾ. ಕೊಳ್ತಪ್ಪೆ ಗೋವಿಂದ ಭಟ್ ಮತ್ತು ಅಬ್ದುಲ್ ಸಮದ್ ಬಾವಾ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ತಸ್ವಿ ಶಾಂಭವಿ ಜೋಗಿಬೆಟ್ಟು ಪ್ರಾರ್ಥಿಸಿದರು. ಸುನೀತಾ ಎನ್ ಸ್ವಾಗತಿಸಿದರು. ಹರ್ಷಿತಾ ಪಿ ಕಡೇಶಿವಾಲಯ ಕಾರ್ಯಕ್ರಮ ನಿರೂಪಿಸಿದರು. ಅಪೂರ್ವ ಕೊಲ್ಯ ವಂದಿಸಿದರು. ಅಶ್ವಿಜ ಶ್ರೀಧರ್ ಬೆಳ್ತಂಗಡಿ ಸನ್ಮಾನಿತರ ಸನ್ಮಾನಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಚಿಗುರೆಲೆ ಸಾಹಿತ್ಯ ಬಳಗದ ಸದಸ್ಯರು, ಸಾಹಿತ್ಯಾಸಕ್ತರು ಹಾಗೂ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.