ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ನಿವಾಸಕ್ಕೆ ಛಲವಾದಿ ನಾರಾಯಣಸ್ವಾಮಿ ಭೇಟಿ
Puttur: ಪುತ್ತೂರಿನ ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಮನೆಗೆ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿದ್ದಾರೆ.
ಪುತ್ತೂರು: ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಕಾಸಲೆ ಅವರೊಂದಿಗೆ ಪುತ್ತೂರಿನ ಮಿತ್ತೂರಿನಲ್ಲಿರುವ ಬಿಜೆಪಿ ಮಾಧ್ಯಮ ವಿಭಾಗದ ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ನಿವಾಸಕ್ಕೆ ಭೇಟಿ ನೀಡಿದರು.
ಕನ್ನಡ ಪತ್ರಿಕೋದ್ಯಮದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಸುರೇಶ್ ಬೆಳಗಜೆ ಅವರು, ಸುದ್ದಿ ಬಿಡುಗಡೆ, ಹೊಸದಿಗಂತ, ಉದಯವಾಣಿ ಹಾಗೂ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿಯಲ್ಲಿ ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಬಿಜೆಪಿ ರಾಜ್ಯ ಮಾಧ್ಯಮ ವಿಭಾಗದಲ್ಲಿ ಸುದ್ದಿ ನಿರ್ವಹಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ವಿಭಾಗದ ರಾಜ್ಯ ಸದಸ್ಯರಾದ ರತನ್ ರಮೇಶ್ ಪೂಜಾರಿ, ಟಿ.ಡಿ.ವಿಜಯೇಂದ್ರ, ಪ್ರಮುಖರಾದ ಪ್ರಶಾಂತ್ ಕುಮಾರ್, ಸುರೇಶ್ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಭೇಟಿ ಆತ್ಮೀಯ ಮಾತುಕತೆ ಹಾಗೂ ಸೌಹಾರ್ದದ ಭೇಟಿಯಾಗಿ ನಡೆಯಿತು.