ಹೆದ್ದಾರಿ ಅಪಘಾತ ಸ್ಥಳಗಳಲ್ಲಿ ನಿಯಂತ್ರಣ ಕ್ರಮಕೈಗೊಳ್ಳಲು ಎಸ್‌ಪಿ ಸೂಚನೆ
Dakshina Kannada: ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರಂತರ ಅಪಘಾತಕ್ಕೆ ಕಾರಣವಾಗುವ ಸ್ಥಳಗಳ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ಕನ್ನಡ ಎಸ್‌ಪಿ ಡಾ.ಅರುಣ್ ಕುಮಾರ್ ಸೂಚಿಸಿದ್ದಾರೆ.
ಮಂಗಳೂರು: ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರಂತರ ಅಪಘಾತಕ್ಕೆ ಕಾರಣವಾಗುವ ಸ್ಥಳಗಳ ಸಂಚಾರ ವ್ಯವಸ್ಥೆ ನಿರ್ವಹಣೆಗೆ ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಸೇರಿದಂತೆ ಹಲವೆಡೆ ಪದೇ ಪದೇ ಅಪಘಾತವಾಗಿ ಹಾಗೂ ಜೀವಹಾನಿ ಆಗುವ ಘಟನೆಗಳು ನಡೆಯುತ್ತಿದ್ದು, ಇಂತಹ ಸ್ಥಳಗಳಲ್ಲಿ ವೇಗ ನಿಯಂತ್ರಣ, ಟ್ರಾಫಿಕ್ ಸಿಗ್ನಲ್, ಸೂಚನಾ ಫಲಕ ಸೇರಿದಂತೆ ವಿವಿಧ ಸಂಚಾರಿ ಸುರಕ್ಷತಾ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಈ ಸ್ಥಳಗಳಲ್ಲಿ ತಾತ್ಕಾಲಿಕ ಕ್ರಮ ಕೈಗೊಳ್ಳುವುದಲ್ಲದೆ ಭವಿಷ್ಯದ ದೃಷ್ಟಿಯಿಂದ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಲವೆಡೆ ರಾತ್ರಿ ವೇಳೆ, ಬೀದಿ ದೀಪವಿಲ್ಲದೆ ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಹೆದ್ದಾರಿಗಳಲ್ಲಿ ವಿದ್ಯುತ್ ದೀಪ ಅಳವಡಿಸುವಂತೆ ಅವರ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 42 ಪ್ರಮುಖ ಅಪಘಾತ ಸ್ಥಳ ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ವಾಹನಗಳಿಗೆ ಟಿಂಟೆಡ್ ಗ್ಲಾಸ್: 33703 ಕೇಸ್ ದಾಖಲು:
2025-26ರಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ವಿವಿಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಬಗ್ಗೆ 2604 ಕೇಸ್ ನಮೂದಾಗಿದೆ.
ಜಿಲ್ಲೆಯಲ್ಲಿ ಟಿಂಟೆಡ್ ಗ್ಲಾಸ್ ಅಳವಡಿಸಿದ 33,703 ವಾಹನಗಳ ಮೇಲೆ ಪ್ರಕರಣ ದಾಖಲಿಸಿ, 2025ರಲ್ಲಿ ರೂ.73.89 ಲಕ್ಷ ಮತ್ತು 2026ರಲ್ಲಿ ರೂ.75.88 ಲಕ್ಷ ದಂಡ ವಸೂಲು ಮಾಡಲಾಗಿದೆ. ಕರ್ಕಶ ಹಾರ್ನ್ ಅಳವಡಿಸಿದ ವಾಹನಗಳ ವಿರುದ್ಧ 2805 ಪ್ರಕರಣ ದಾಖಲಿಸಿ, 2026ರಲ್ಲಿ ರೂ.8.38 ಲಕ್ಷ ಹಾಗೂ 2025 ರಲ್ಲಿ ರೂ.7.44 ಲಕ್ಷ ದಂಡ ವಸೂಲು ಮಾಡಲಾಗಿದೆ.
ಶಾಲಾ ವಾಹನದಲ್ಲಿ ಮಿತಿಮೀರಿ ಮಕ್ಕಳನ್ನು ಸಾಗಿಸಿದ 974 ಪ್ರಕರಣ ದಾಖಲಿಸಲಾಗಿದೆ. ಮೀನು ಸಾಗಾಟ ವಾಹನಗಳಲ್ಲಿ ತ್ಯಾಜ್ಯ ನೀರನ್ನು ರಸ್ತೆಗೆ ಚೆಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 2026ರಲ್ಲಿ 535 ಪ್ರಕರಣ ದಾಖಲಿಸಿ, 2.65 ಲಕ್ಷ ದಂಡ ವಸೂಲು ಮಾಡಲಾಗಿದೆ. ಪೊಲೀಸ್ ಇಲಾಖೆ ಹಾಗೂ ಆರ್‌ಟಿಓ ಇಲಾಖೆಗಳು ಈ ಪ್ರಕರಣಗಳನ್ನು ದಾಖಲಿಸಿವೆ. ಸಂಚಾರ ನಿಯಮ ಉಲ್ಲಂಘನೆ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲು ಎಸ್‌ಪಿ ತಿಳಿಸಿದರು.
ರಸ್ತೆ ಅಪಘಾತ ನಡೆಸಿ ಜೀವಹಾನಿಗೆ ಕಾರಣವಾದ 279 ಪ್ರಕರಣಗಳಲ್ಲಿ 538 ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಡಿಸಿಪಿ ರವಿಶಂಕರ್, ಎಸಿಪಿ ನಜ್ಮಾ ಫಾರೂಕಿ, ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯಕ್, ಆರ್‌ಟಿಓ ಅಧಿಕಾರಿ ಮುರಗೇಂದ್ರ ಬಿ ಶಿರೋಳ್ಕರ್ ಮತ್ತಿತ್ತರರು ಉಪಸ್ಥಿತರಿದ್ದರು.