ಬೆಂಗಳೂರು ಟೆಕ್ ಶೃಂಗಸಭೆ: ರೋಬೊಟ್ಗಳ ಓಟದ ಸ್ಪರ್ಧೆ ಆಯೋಜನೆ
Bengaluru Tech Summit: ಬೆಂಗಳೂರು ಟೆಕ್ ಶೃಂಗಸಭೆ 2026ರ ಉದ್ಘಾಟನಾ ಅಧಿವೇಶನಕ್ಕೂ ಮುನ್ನ, ನಾಲ್ಕು ಕಾಲುಗಳ ರೋಬೊಟ್ಗಳ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಬೆಂಗಳೂರು: ಭಾರತದ ರೋಬೊಟಿಕ್ಸ್, ಆಟೋನೊಮಸ್ ಇಂಟೆಲಿಜೆನ್ಸ್ ಮತ್ತು ಫಿಸಿಕಲ್ ಎಐ ಕ್ಷೇತ್ರಗಳಲ್ಲಿನ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ, 29ನೇ ಬೆಂಗಳೂರು ಟೆಕ್ ಶೃಂಗಸಭೆ 2026ರ ಉದ್ಘಾಟನಾ ಅಧಿವೇಶನಕ್ಕೂ ಮುನ್ನ, ನಾಲ್ಕು ಕಾಲುಗಳ ರೋಬೊಟ್ಗಳ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ವೀಕ್ಷಿಸಿದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಭಾರತೀಯ ರೋಬೊಟಿಕ್ಸ್ ಕಂಪನಿಗಳು ಅಭಿವೃದ್ಧಿಪಡಿಸಿರುವ ನಾಲ್ಕು ಕಾಲುಗಳ ರೋಬೊಟ್ಗಳು ವಿಶೇಷವಾಗಿ ವಿನ್ಯಾಸಗೊಳಿಸಲಾದ ಟ್ರ್ಯಾಕ್ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದವು. ಪ್ರತಿ ರೋಬೊಟ್ ಒಂದು ಸುತ್ತು ಪೂರ್ಣಗೊಳಿಸಿ, ಮತ್ತೆ ಆರಂಭದ ಸ್ಥಳಕ್ಕೆ ತಲುಪಬೇಕಿತ್ತು. ನಿಗದಿತ ಮಾರ್ಗವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಿದ ರೋಬೊಟ್ಗೆ ವಿಜೇತ ಸ್ಥಾನ ನೀಡಲಾಯಿತು.

ಭಾರತೀಯ ಕಂಪನಿಗಳು ಸ್ವದೇಶಿ ತಂತ್ರಜ್ಞಾನ ಬಳಸಿ ಅತ್ಯಾಧುನಿಕ ಸ್ವಾಯತ್ತ ರೋಬೊಟಿಕ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿರುವುದನ್ನು ಪ್ರದರ್ಶಿಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿತ್ತು ಎಂದು ಸಚಿವರು ಹೇಳಿದ್ದಾರೆ.
'ಜನರಲ್ ಆಟೋನಮಿ'ಯ 'ಪರಮ್' ರೋಬೊಟ್ಗೆ ಪ್ರಥಮ ಸ್ಥಾನ:
ಜನರಲ್ ಆಟೋನಮಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಾಲ್ಕು ಕಾಲುಗಳ 'ಪರಮ್' (Param) ರೋಬೊಟ್ ಪ್ರತಿ ಸೆಕೆಂಡಿಗೆ 4.3 ಮೀಟರ್ ಗರಿಷ್ಠ ವೇಗ ದಾಖಲಿಸುವ ಮೂಲಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿತು.
ಕಠಿಣ ಮತ್ತು ಅಸಮತಟ್ಟಾದ ಭೂಪ್ರದೇಶಗಳಲ್ಲಿಯೂ ಸಂಚರಿಸುವ ಸಾಮರ್ಥ್ಯ ಹೊಂದಿರುವ ಪರಮ್ ರೋಬೊಟ್, ರಕ್ಷಣಾ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಬಳಕೆಯಾಗುವ ಸಾಧ್ಯತೆಗಳಿವೆ. ಜನರಲ್ ಆಟೋನಮಿ ಸಂಸ್ಥೆಯು ಫಿಸಿಕಲ್ ಎಐ ಆಧಾರಿತ ತಂತ್ರಜ್ಞಾನ ಕಂಪನಿಯಾಗಿದ್ದು, ನಾಲ್ಕು ಕಾಲುಗಳ ಮತ್ತು ಮಾನವಾಕಾರದ ರೋಬೊಟ್ಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ವಿಶೇಷವಾಗಿ ರಕ್ಷಣಾ ಕ್ಷೇತ್ರದ ಅನ್ವಯಿಕೆಗಳಿಗೆ ಈ ಸಂಸ್ಥೆ ಆದ್ಯತೆ ನೀಡುತ್ತಿದೆ.
ಕೈಗಾರಿಕಾ ಮತ್ತು ಭದ್ರತಾ ಕ್ಷೇತ್ರಗಳಲ್ಲಿ 'ಧವ್' ರೋಬೊಟ್ ಬಳಕೆ:
ಎಕ್ಸ್ಟೆರಾ ರೋಬೊಟಿಕ್ಸ್ ಸಂಸ್ಥೆಯು 'ಧವ್' (Dhav) ಹೆಸರಿನ ನಾಲ್ಕು ಕಾಲುಗಳ ರೋಬೊಟ್ನ್ನು ಪ್ರದರ್ಶಿಸಿತು. ಕೈಗಾರಿಕಾ ಮತ್ತು ಭದ್ರತಾ ಕ್ಷೇತ್ರಗಳ ಬಳಕೆಗೆ ಅಭಿವೃದ್ಧಿಪಡಿಸಿರುವ ಈ ರೋಬೊಟ್ ಸ್ವಾಯತ್ತ ಬುದ್ಧಿಮತ್ತೆ ತಂತ್ರಜ್ಞಾನ ಹೊಂದಿದೆ.

ಕೈಗಾರಿಕಾ ಘಟಕಗಳಲ್ಲಿ ಸುಲಭವಾಗಿ ತಲುಪಲಾಗದ ಸ್ಥಳಗಳಲ್ಲಿ ಸ್ವಯಂಚಾಲಿತ ಕಣ್ಗಾವಲು ನಡೆಸುವುದು ಮತ್ತು ವಿವಿಧ ರೀತಿಯ ದತ್ತಾಂಶ ಸಂಗ್ರಹಿಸುವುದು ಇದರ ಪ್ರಮುಖ ಸಾಮರ್ಥ್ಯಗಳಾಗಿವೆ.
ಭದ್ರತಾ ಕಣ್ಗಾವಲಿನ ಭಾಗವಾಗಿ ತೆರೆದಿರುವ ಬಾಗಿಲುಗಳನ್ನು ಪತ್ತೆಹಚ್ಚುವುದು ಹಾಗೂ ಕಣ್ಗಾವಲಿನಲ್ಲಿರುವ ಪ್ರದೇಶಗಳಲ್ಲಿ ವ್ಯಕ್ತಿಗಳ ಚಲನವಲನಗಳನ್ನು ಗುರುತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ನಿರ್ಮಾಣ ಕ್ಷೇತ್ರದಲ್ಲಿ ಕಾಮಗಾರಿ ಸ್ಥಳಗಳ ಮೂರು ಆಯಾಮದ (3D) ನಕ್ಷೆ ಸಿದ್ಧಪಡಿಸುವುದು, ಕಾಮಗಾರಿಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಕಟ್ಟಡಗಳಲ್ಲಿನ ಬಿರುಕುಗಳಂತಹ ರಚನಾತ್ಮಕ ದೋಷಗಳನ್ನು ಗುರುತಿಸುವ ಕಾರ್ಯಗಳಿಗೂ 'ಧವ್' ರೋಬೊಟ್ ಬಳಕೆಯಾಗಲಿದೆ.
‘ಸ್ಟ್ರೈಡರ್ ರೋಬೊಟಿಕ್ಸ್’ನ ಎಂ3ಗೆ ಮೂರನೇ ಸ್ಥಾನ
ಸ್ಟ್ರೈಡರ್ ರೋಬೊಟಿಕ್ಸ್ ಸಂಸ್ಥೆಯ 'ಎಂ3' (M3) ನಾಲ್ಕು ಕಾಲುಗಳ ರೋಬೊಟ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿತು. ಭಾರತೀಯ ವಿಜ್ಞಾನ ಸಂಸ್ಥೆ (IISc) ಯಲ್ಲಿ ರಕ್ಷಣಾ ವಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ರೋಬೊಟ್, ಆರಂಭದಲ್ಲಿ ರಕ್ಷಣಾ ಕ್ಷೇತ್ರದ ಅಗತ್ಯಗಳಿಗಾಗಿ ರೂಪುಗೊಂಡಿತ್ತು. ಬಳಿಕ ಕೈಗಾರಿಕಾ ಕಣ್ಗಾವಲು, ನಿರ್ಮಾಣ ಸ್ಥಳಗಳ ಮೇಲ್ವಿಚಾರಣೆ ಹಾಗೂ ಸುರಕ್ಷತೆ ಮತ್ತು ಭದ್ರತಾ ಕಾರ್ಯಗಳಿಗೂ ಇದರ ಬಳಕೆಯನ್ನು ವಿಸ್ತರಿಸಲಾಗಿದೆ.
ಸುಮಾರು 45 ಕೆಜಿ ತೂಕದ ಉಪಕರಣಗಳನ್ನು ಹೊತ್ತೊಯ್ಯುವ ಸಾಮರ್ಥ್ಯ 'ಎಂ3' ರೋಬೊಟ್ನ ಪ್ರಮುಖ ವೈಶಿಷ್ಟ್ಯವಾಗಿದೆ. ಎಕ್ಸ್ಟೆರಾ ರೋಬೊಟಿಕ್ಸ್ನ ಧವ್ ರೋಬೊಟ್ಗೆ ಹೋಲಿಸಿದರೆ, ಇದರ ಹೊರೆ ಹೊರುವ ಸಾಮರ್ಥ್ಯ ಹೆಚ್ಚಾಗಿದೆ. ಆದರೆ ಎಕ್ಸ್ಟೆರಾ ಸಂಸ್ಥೆಯ ಹೊಸ ತಲೆಮಾರಿನ ರೋಬೊಟ್ಗಳು ಕೂಡ ಇದೇ ಮಟ್ಟದ ಹೊರೆ ಹೊರುವ ಸಾಮರ್ಥ್ಯ ಹೊಂದಿವೆ.
ಫಿಸಿಕಲ್ ಎಐ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಗೆ ಸಾಕ್ಷಿ:
ಈ ರೋಬೊಟ್ ಪ್ರದರ್ಶನವು ಸ್ವದೇಶಿ ರೋಬೊಟಿಕ್ಸ್ ಮತ್ತು ಸ್ವಾಯತ್ತ ತಂತ್ರಜ್ಞಾನಗಳ ವಿಸ್ತಾರಗೊಳ್ಳುತ್ತಿರುವ ಸಾಮರ್ಥ್ಯವನ್ನು ತೋರಿಸಿದೆ. ರಕ್ಷಣಾ ಕಾರ್ಯಾಚರಣೆ, ಕೈಗಾರಿಕಾ ಚಟುವಟಿಕೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಭದ್ರತಾ ವ್ಯವಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳು ಅತ್ಯಾಧುನಿಕ ರೋಬೊಟಿಕ್ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಫಿಸಿಕಲ್ ಎಐ ತಂತ್ರಜ್ಞಾನವು ಕೃತಕ ಬುದ್ಧಿಮತ್ತೆಯನ್ನು ನೈಜ ಭೌತಿಕ ಪರಿಸರದಲ್ಲಿ ಕಾರ್ಯನಿರ್ವಹಿಸುವ ಯಂತ್ರಗಳು ಮತ್ತು ರೋಬೊಟ್ಗಳೊಂದಿಗೆ ಸಂಯೋಜಿಸುವ ಮೂಲಕ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಪ್ರಯೋಗಾಲಯಗಳಲ್ಲಿನ ತಾಂತ್ರಿಕ ಆವಿಷ್ಕಾರಗಳನ್ನು ನೈಜ ಜಗತ್ತಿನ ಬಳಕೆಗೆ ತರುವಲ್ಲಿ ಇಂತಹ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸಲಿವೆ.
ಬೆಂಗಳೂರು ಟೆಕ್ ಶೃಂಗಸಭೆಯಂತಹ ಜಾಗತಿಕ ವೇದಿಕೆಗಳಲ್ಲಿ ಭಾರತೀಯ ನವೋದ್ಯಮಗಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದರಿಂದ ಉದ್ಯಮ ಸಹಯೋಗ, ಹೂಡಿಕೆ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.