ಸವಣೂರಿನಲ್ಲಿ 'ಸಹಕಾರ ರಶ್ಮಿ' ನೂತನ ಕಟ್ಟಡ ಲೋಕಾರ್ಪಣೆ
Puttur: ಕೆ.ಸೀತಾರಾಮು ರೈ ಅವರು ಅಧ್ಯಕ್ಷರಾಗಿರುವ 'ಆದರ್ಶ ವಿವಿಧೋದ್ದೇಶ ಸಹಕಾರ ಸಂಘ'ದ ಕೇಂದ್ರ ಕಚೇರಿ, ಸವಣೂರು ಶಾಖೆ & ವಾಣಿಜ್ಯ ಸಂಕೀರ್ಣಗಳನ್ನು ಒಳಗೊಂಡ 'ಸಹಕಾರ ರಶ್ಮಿ' ನೂತನ ಕಟ್ಟಡದ ಉದ್ಘಾಟನೆ ಮತ್ತು ಸಂಘದ ರಜತ ಮಹೋತ್ಸವ ಸೋಮವಾರ ನಡೆಯಿತು.
ಪುತ್ತೂರು: ಸಹಕಾರ ರತ್ನ ಸವಣೂರು ಕೆ.ಸೀತಾರಾಮು ರೈ ಅವರು ಅಧ್ಯಕ್ಷರಾಗಿರುವ 'ಆದರ್ಶ ವಿವಿಧೋದ್ದೇಶ ಸಹಕಾರ ಸಂಘ'ದ ಕೇಂದ್ರ ಕಚೇರಿ, ಸವಣೂರು ಶಾಖೆ & ವಾಣಿಜ್ಯ ಸಂಕೀರ್ಣಗಳನ್ನು ಒಳಗೊಂಡ 'ಸಹಕಾರ ರಶ್ಮಿ' ನೂತನ ಕಟ್ಟಡದ ಉದ್ಘಾಟನೆ ಮತ್ತು ಸಂಘದ ರಜತ ಮಹೋತ್ಸವ ಸೋಮವಾರ ನಡೆಯಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಂಘದ ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಹಕಾರ ರತ್ನ ಸವಣೂರು ಕೆ. ಸೀತಾರಾಮು ರೈ ಅವರು ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದು, ಅವರು ಸ್ಥಾಪಿಸಿದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಚಾರವಾಗಿದೆ. ಗ್ರಾಹಕರ ವಿಶ್ವಾಸ ಗಳಿಸಿರುವ ಸಂಘವು ಜಿಲ್ಲೆಯಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು 17 ಶಾಖೆಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಸೀತಾರಾಮು ರೈ ಅವರು ಸವಣೂರನ್ನು ಮಾದರಿ ಊರಾಗಿ ರೂಪಿಸಿರುವುದರಿಂದ ಅವರನ್ನು ಸವಣೂರಿನ ರತ್ನ ಎಂದು ಬಣ್ಣಿಸಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಕೆ.ಸೀತಾರಾಮು ರೈ ಅವರು ಸವಣೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸುವುದರೊಂದಿಗೆ ಊರಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ವಾಣಿಜ್ಯ ಸಂಕೀರ್ಣ ನಿರ್ಮಿಸಿ ಹಲವು ಮಂದಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದ್ದಾರೆ. ಇದೀಗ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ‘ಸಹಕಾರ ರಶ್ಮಿ’ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ. ಈ ಹಿಂದೆ ಮದುವೆ ಹಾಗೂ ಇತರ ಸಮಾರಂಭಗಳನ್ನು ನಡೆಸಲು ಪುತ್ತೂರು ಅಥವಾ ಸುಳ್ಯಕ್ಕೆ ತೆರಳಬೇಕಾದ ಪರಿಸ್ಥಿತಿಯಿತ್ತು. ಇದೀಗ ಒಂದು ಸಾವಿರ ಜನರಿಗೆ ಅನುಕೂಲವಾಗುವ ಸುಸಜ್ಜಿತ ಸಭಾಭವನವನ್ನು ನಿರ್ಮಿಸಿರುವುದು ಸವಣೂರಿನ ಜನರಿಗೆ ವರದಾನವಾಗಿದೆ ಎಂದು ಹೇಳಿದರು.
ರಜತ ಮಹೋತ್ಸವದ ಸ್ಮರಣಾರ್ಥ ನಿರ್ಮಿಸಲಾದ ಸಾರ್ವಜನಿಕ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ ಮಾತನಾಡಿ, ಸಂಘದ ಬೆಳ್ಳಿಹಬ್ಬದ ನೆನಪನ್ನು ಶಾಶ್ವತಗೊಳಿಸುವ ಉದ್ದೇಶದಿಂದ ಕೆ.ಸೀತಾರಾಮು ರೈ ಅವರು ‘ಸಹಕಾರ ರಶ್ಮಿ’ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಸವಣೂರಿನಲ್ಲಿ ವಿದ್ಯಾಕಾಶಿ ಮತ್ತು ಸಹಕಾರ ಕಾಶಿಯನ್ನು ನಿರ್ಮಿಸಿರುವ ಅವರು ನಾಡಿನ ಶ್ರೇಷ್ಠ ಸಹಕಾರಿಗಳಲ್ಲಿ ಒಬ್ಬರು ಎಂದು ತಿಳಿಸಿದರು.

ಆದರ್ಶ ರಜತ ಪ್ರಶಸ್ತಿ ಪ್ರದಾನ:
ಹಿರಿಯ ಸಹಕಾರಿ ಹಾಗೂ ಸಹಕಾರ ರತ್ನ ಜಾಕೆ ಮಾಧವ ಗೌಡ ಅವರಿಗೆ 'ಆದರ್ಶ ರಜತ ಸಂಭ್ರಮ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಸಂಘದ ಸಹಾಯಕ ಮಹಾಪ್ರಬಂಧಕ ಸುನಾದ್ರಾಜ್ ಶೆಟ್ಟಿ ಪ್ರಶಸ್ತಿ ಪತ್ರ ವಾಚಿಸಿದರು.
ಸೀತಾರಾಮು ರೈ ಸೇರಿದಂತೆ ಗಣ್ಯರಿಗೆ ಸನ್ಮಾನ:
ಸಹಕಾರ ರತ್ನ ಸವಣೂರು ಕೆ.ಸೀತಾರಾಮು ರೈ ಅವರನ್ನು ಶಿಷ್ಯವೃಂದದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಆಡಳಿತ ಮಂಡಳಿಯಲ್ಲಿ ಆರಂಭದಿಂದಲೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಎನ್.ಸುಂದರ ರೈ ಸವಣೂರು, ಎಸ್.ಎಂ.ಬಾಪು ಸಾಹೇಬ್ ಸುಳ್ಯ, ಬಿ.ಮಹಾಬಲ ರೈ ಬೋಳಂತೂರು ಹಾಗೂ ಪೂರ್ಣಿಮ ಎಸ್ ಆಳ್ವ ಮಂಗಳೂರು ಅವರನ್ನು ಗೌರವಿಸಲಾಯಿತು.
ಸಂಘದ ಆರಂಭದಿಂದಲೂ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ಮಹಾಪ್ರಬಂಧಕ ವಸಂತ್ ಜಾಲಾಡಿ, ನಿವೃತ್ತ ಸಿಬ್ಬಂದಿಗಳಾದ ಮೋನಪ್ಪ ಗೌಡ ವಿಟ್ಲ, ಶ್ರೀನಿವಾಸ ತಂತ್ರಿ ಉಜಿರೆ, ಮನೋಜ್ ಕುಮಾರ್ ಸುಳ್ಯ ಮತ್ತು ಸುರೇಖಾ ಬೆಳ್ತಂಗಡಿ ಅವರನ್ನು ಸನ್ಮಾನಿಸಲಾಯಿತು.
ನಿತ್ಯನಿಧಿ ಸಂಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಪುತ್ತೂರು ಶಾಖೆಯ ಕೃಷ್ಣಪ್ಪ, ಸುಬ್ರಹ್ಮಣ್ಯ ಶಾಖೆಯ ಶ್ರೀನಿವಾಸ ಡಿ., ಉಜಿರೆ ಶಾಖೆಯ ಮಂಜುನಾಥ ಶೆಟ್ಟಿ, ಸಂಘದ ಗುತ್ತಿಗೆದಾರರಾದ ಎಂ.ಎನ್. ಪ್ರಭಾಕರ್ (ಡೆಕ್ಕನ್ ಡೀಲ್, ಪುತ್ತೂರು) ಹಾಗೂ ಕಟ್ಟಡದ ಇಂಜಿನಿಯರ್ ಸಚ್ಚಿದಾನಂದ (ನಿರ್ಮಾಣ್ ಅಸೋಸಿಯೇಟ್ಸ್, ಪುತ್ತೂರು) ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮ ನಿರೂಪಿಸಿದ ರಾಕೇಶ್ ರೈ ಕೆಡೆಂಜಿ ಅವರಿಗೂ ಗೌರವಾರ್ಪಣೆ ಸಲ್ಲಿಸಲಾಯಿತು.