ಗೌರೀಶ್ ಅಕ್ಕಿ ಸ್ಟುಡಿಯೋದ 'ಧನ್ಯವಾದ ಕರ್ನಾಟಕ' ಸಮಾರಂಭ: ಕ್ಷೇತ್ರಾಧಿಪತಿ ಎಕ್ಸಲೆನ್ಸ್ ಅವಾರ್ಡ್ಸ್ 2026 ಪ್ರದಾನ
Dhanyavada Karnataka: ಗೌರೀಶ್ ಅಕ್ಕಿ ಸಾರಥ್ಯದ 'ಗೌರೀಶ್ ಅಕ್ಕಿ ಸ್ಟುಡಿಯೋ' ಆಯೋಜಿಸಿದ್ದ 'ಧನ್ಯವಾದ ಕರ್ನಾಟಕ' ಹಾಗೂ 'ಕ್ಷೇತ್ರಾಧಿಪತಿ ಎಕ್ಸಲೆನ್ಸ್ ಅವಾರ್ಡ್ಸ್ 2026' ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಈಚೆಗೆ ಅದ್ಧೂರಿಯಾಗಿ ನೆರವೇರಿತು.
ಬೆಂಗಳೂರು: ಖ್ಯಾತ ಪತ್ರಕರ್ತ, ಉದ್ಯಮಿ ಗೌರೀಶ್ ಅಕ್ಕಿ ಸಾರಥ್ಯದ 'ಗೌರೀಶ್ ಅಕ್ಕಿ ಸ್ಟುಡಿಯೋ' ಆಯೋಜಿಸಿದ್ದ 'ಧನ್ಯವಾದ ಕರ್ನಾಟಕ' ಹಾಗೂ 'ಕ್ಷೇತ್ರಾಧಿಪತಿ ಎಕ್ಸಲೆನ್ಸ್ ಅವಾರ್ಡ್ಸ್ 2026' ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಈಚೆಗೆ ಅದ್ಧೂರಿಯಾಗಿ ನೆರವೇರಿತು.
ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್ 10 ಲಕ್ಷ ಚಂದಾದಾರಿಕೆ (1 Million Subscribers) ಮೈಲಿಗಲ್ಲು ಮುಟ್ಟಿದ ಸಂಭ್ರಮಕ್ಕೆ ಸಾಕ್ಷಿಯಾಯ್ತು ಈ ವೇದಿಕೆ. ಗೌರೀಶ್ ಅಕ್ಕಿ ಸ್ಟುಡಿಯೋದ ಅತಿಥಿಗಳು, ಆಪ್ತ ಗೆಳೆಯರು, ಮಾಧ್ಯಮ ಮಿತ್ರರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಈ ಸಮಾರಂಭ ಜರುಗಿತು.
ಕನ್ನಡಿಗರಿಗೆ ಧನ್ಯವಾದ ಅರ್ಪಿಸುವ ಈ ವಿಶೇಷ ಸಂದರ್ಭದಲ್ಲಿ ವಿಭಿನ್ನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ 10 ಕನ್ನಡಿಗರನ್ನು ಗುರುತಿಸಿ ಅವರಿಗೆ 'ಕ್ಷೇತ್ರಾಧಿಪತಿ ಎಕ್ಸಲೆನ್ಸ್ ಅವಾರ್ಡ್ಸ್ 2026' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (FKCCI) ಅಧ್ಯಕ್ಷ ಟಿ.ಸಾಯಿರಾಮ್ ಪ್ರಸಾದ್ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿಜಿಪಿ ಜೆ.ಅರುಣ್ ಚಕ್ರವರ್ತಿ ಭಾಗವಹಿಸಿದ್ದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಗೌರೀಶ್ ಅಕ್ಕಿ ಸ್ಟುಡಿಯೋದ ಸಂಸ್ಥಾಪಕ ಗೌರೀಶ್ ಅಕ್ಕಿ, '10 ಲಕ್ಷ ಇದು ದೊಡ್ಡ ಸಂಖ್ಯೆ ಅಥವಾ ಸಾಧನೆಯೇನಲ್ಲ. ನಮಗೆ ನಾವು ಅಭಿನಂಧನೆ ಹೇಳಿಕೊಳ್ಳುವಂಥ ಕಾರ್ಯಕ್ರಮವೂ ಅಲ್ಲ, ಬದಲಾಗಿ ಇಷ್ಟೆಲ್ಲ ಪ್ರೀತಿ, ಪ್ರೋತ್ಸಾಹ ನೀಡಿ ಮುನ್ನಡೆಸುತ್ತಿರುವ ಕನ್ನಡಿಗರಿಗೆ ಮನಃಪೂರ್ವಕವಾಗಿ ಧನ್ಯವಾದ ಹೇಳುವಂಥ ಕಾರ್ಯಕ್ರಮ. ವೀವ್ಸ್‌ಗಾಗಿ ನಾವು ಯಾವತ್ತೂ ಯಾವುದೇ ವೀಡಿಯೋಗಳನ್ನು ಮಾಡಿಲ್ಲ. ಮಾಡೋದಿಲ್ಲ. ಕನ್ನಡ ಜನತೆಗೆ ಅಗತ್ಯವಿರುವ, ಅರಿವನ್ನು ನೀಡುವ, ಬದುಕಲ್ಲಿ ಉತ್ತಮ ಬದಲಾವಣೆಗೆ ಸಹಕಾರಿಯಾಗುವಂಥ ಅರ್ಥಪೂರ್ಣ ಕಾರ್ಯಕ್ರಮಗಳನ್ನ ನೀಡುತ್ತ ಬಂದಿದ್ದೇವೆ. ಮುಂದೆಯೂ ಇದೇ ಹಾದಿಯಲ್ಲಿ ಸಾಗುತ್ತೇವೆ' ಎಂದು ಹೇಳಿದರು.
ತಮ್ಮ 7 ವರ್ಷಗಳ ಅನುಭವವನ್ನು ಹಂಚಿಕೊಂಡು, ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು ಹಾಗೂ 'ಕ್ಷೇತ್ರಾಧಿಪತಿ' ಪ್ರಶಸ್ತಿ ಪಡೆದ ಸಾಧಕರಿಗೆ ಅಭಿನಂದಿಸಿದರು.

ಪ್ರಶಸ್ತಿ ಪಡೆದ ಸಾಧಕರು: ಡಾ.ನಿರಂಜನ್ ಪರಂಶೆಟ್ಟಿ (ದಂತವೈದ್ಯಕೀಯ), ಡಾ.ಪೂರ್ವಿ ಜಯಾರಾಜ್ (ಔಷಧರಹಿತ ಚಿಕಿತ್ಸೆ), ರಿಯಾಜ್ ಅಹ್ಮದ್ (ಕಟ್ಟಡ ನಿರ್ಮಾಣ), ಪ್ರಸನ್ನ ಕಾವೇರಪ್ಪ (ರಿಯಲ್ ಎಸ್ಟೇಟ್ ಉದ್ಯಮ), ದಯಾನಂದ್ ಎಂ.ಡಿ (ಇಂಟಿರೀಯರ್ ಡಿಸೈನ್), ಡಾ.ಸೆಲ್ವರಾಜ್ ನಾರಾಯಣ್ (ವಾಸ್ತು ಶಾಸ್ತ್ರ), ಸಿಎ ದಯಾನಂದ್ ಬೊಂಗಾಳೆ (ಆರ್ಥಿಕ), ಸುನಿಲ ನಾಗಠಾಣ (ಉದ್ಯಮ), ಆರ್.ನಾಗರಾಜ ಚಾರಿ (ಕಟ್ಟಡ ನಿರ್ಮಾಣ), ಪಂಡಿತ್ ಎಂ.ಬಿ. ಜೋಶಿ (ಜ್ಯೋತಿಷ್ಯ ಶಾಸ್ತ್ರ).
ನಿಮ್ಮ ಪಯಣದಲ್ಲಿ ಜೊತೆಯಾಗಿ ನಿಂತ ವೀಕ್ಷಕರಿಗೆ, ಕಾರ್ಯಕ್ರಮಗಳ ಜನಪ್ರಿಯತೆ ಹಿಂದಿನ ಶಕ್ತಿಯಾಗಿರುವ ಕನ್ನಡಿಗರಿಗೆ ಮನಸಾರೆ ಕೃತಜ್ಞತೆ ಸಲ್ಲಿಸುವ 'ಧನ್ಯವಾದ ಕರ್ನಾಟಕ' ಅನ್ನೋ ಈ ಒಂದು ಶೀರ್ಷಿಕೆಯೇ ಬಹಳ ಸೂಕ್ತ ಹಾಗೂ ಅರ್ಥಪೂರ್ಣವಾಗಿದೆ. 10 ಲಕ್ಷ ಜನರ ಪ್ರೀತಿಯ ಜೊತೆಗೆ ನಂಬಿಕೆಯನ್ನು ಗಳಿಸಿಕೊಂಡು ಸಾಗುತ್ತಿರುವ ಗೌರೀಶ್ ಅಕ್ಕಿ ಸ್ಟುಡಿಯೋ ಜರ್ನಿ ಹೀಗೆ ಮುಂದುವರೆಯಲಿ, ಮತ್ತಷ್ಟು ಯಶಸ್ಸು ಕಾಣಲಿ ಎಂದು ಎಫ್‌ಕೆಸಿಸಿಐನ ಅಧ್ಯಕ್ಷ ಟಿ.ಸಾಯಿರಾಮ್ ಪ್ರಸಾದ್ ಶುಭಕೋರಿದರು.
ಮನುಷ್ಯ ಕೃತಜ್ಞನಾಗಿರೋದು ಬಹಳ ಮುಖ್ಯ. ಕೃತಜ್ಞ ಭಾವ ತುಂಬ ಶಕ್ತಿಶಾಲಿ. ಉತ್ತುಂಗದಲ್ಲಿದ್ದಾಗಲೂ ಪತ್ರಿಕೋದಮ್ಯವನ್ನು ತೊರೆದು, ಏಳು ಬೀಳುಗಳನ್ನು ಕಂಡು, ಈಗ ನಿಮ್ಮದೇ ಸಂಸ್ಥೆ ಕಟ್ಟಿ ಯಶಸ್ವಿಯಾಗಿರೋದು ಅತ್ಯಂತ ಶ್ಲಾಘನೀಯ. ನಿಮ್ಮ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ ಎಂದು ಗೌರೀಶ್ ಅಕ್ಕಿ ಅವರಿಗೆ ಡಿಜಿಪಿ ಜೆ.ಅರುಣ್ ಚಕ್ರವರ್ತಿ ಶುಭಹಾರೈಸಿದರು.
ಹೊಟ್ಟೆಗೆ ಅನ್ನ ಬೇಕು, ಅನ್ನ ಮಾಡೋಕೆ ಅಕ್ಕಿ ಬೇಕು. ಹಾಗೇ ನೆತ್ತಿಗೂ ಅನ್ನ ಬೇಕು. ಆ ಅನ್ನ ಸಿಗೋದು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ! ಹೀಗೆ ತಮ್ಮದೇ ಶೈಲಿಯಲ್ಲಿ ಭಾಷಣ ಶುರುಮಾಡಿದ ಪರಮಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಜನರ ಜೀವನಕ್ಕೆ ಬೇಕಾದಂತಹ ಜ್ಞಾನ, ವೈಚಾರಿಕ ಚಿಂತನೆಗಳನ್ನು ಬಿತ್ತುತ್ತಿರುವ, ಜ್ಞಾನ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಗೌರೀಶ್ ಅಕ್ಕಿ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, 'ನಿಮ್ಮ ಸಾಧನೆ ಗೌರಿ ಶಿಖರದ ಎತ್ತರಕ್ಕೆ ಏರಲಿ' ಎಂದು ಮನದುಂಬಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಕ್ಷೇತ್ರಾಧಿಪತಿ ಎಕ್ಸಲೆನ್ಸ್ ಅವಾರ್ಡ್ಸ್ ಪಡೆದಕೊಂಡ 10 ಸಾಧಕರಿಗೆ ಶುಭಹಾರೈಸಿದರು.
ಕಳೆದ 7 ವರ್ಷಗಳಿಂದ ಕನ್ನಡಿಗರಿಗೆ ಆರೋಗ್ಯ, ಹಣಕಾಸು, ಇತಿಹಾಸ, ಕಾನೂನಿನ ಅರಿವು, ಅಧ್ಯಾತ್ಮ, ಸಿನಿಮಾ ಮುಂತಾದ ವೈವಿಧ್ಯಮಯ ವಿಚಾರಗಳನ್ನು ಕುರಿತು ಅರ್ಥಪೂರ್ಣ ಸಂವಾದ ಏರ್ಪಡಿಸಿ, ನಿಂತರವಾಗಿ ಜ್ಞಾನ ಹಂಚುವ ಕೆಲಸ ಮಾಡುತ್ತಿದೆ ಗೌರೀಶ್ ಅಕ್ಕಿ ಸ್ಟುಡಿಯೋ.. ದೇಶ-ವಿದೇಶಗಳಲ್ಲೂ ವೀಕ್ಷಕರನ್ನು ಹೊಂದಿದೆ. ಇದುವರೆಗೂ ಒಟ್ಟು 30ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ; 7.5 ಸಾವಿರಕ್ಕೂ ಹೆಚ್ಚು ವೀಡಿಯೋಗಳು; ಹತ್ತು ಹಲವು ಜನಪ್ರಿಯ ಸಿರೀಸ್‌ಗಳಿಗೆ ಹೆಸರುವಾಸಿ. ಕನ್ನಡಿಗರಿಗೆ ಕನ್ನಡಿಗರ ಮೂಲಕ ಅರಿವು ನೀಡುವ ವೇದಿಕೆಯಾಗಿ ಜನಪ್ರೀತಿಗೆ, ವಿಶ್ವಾಸಕ್ಕೆ ಪಾತ್ರವಾಗಿದೆ.