ಸ್ನೇಹಿತನೊಂದಿಗೆ ಹೊರಹೋಗಿದ್ದ ಇಂಡಿಗೋ ಉದ್ಯೋಗಿ ಶವವಾಗಿ ಪತ್ತೆ: ಕೊಲೆಯ ಶಂಕೆ, ಪೊಲೀಸರಿಂದ ತನಿಖೆ

IndiGo Employee Found Dead: ಮಧ್ಯಪ್ರದೇಶ - ಮಹಾರಾಷ್ಟ್ರ ಗಡಿ ಸಮೀಪದ ಗೊಂಡಿಯಾ ಜಿಲ್ಲೆಯ ಬೋಂಡ್ರಾನಿ ಅರಣ್ಯ ಪ್ರದೇಶದಲ್ಲಿ ಇಂಡಿಗೋ ಉದ್ಯೋಗಿ ವರ್ಷಾ ತುರ್ಕರ್ (35) ರಕ್ತಸಿಕ್ತ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

Nov 16, 2026 - 09:25
Nov 16, 2026 - 09:28
ಸ್ನೇಹಿತನೊಂದಿಗೆ ಹೊರಹೋಗಿದ್ದ ಇಂಡಿಗೋ ಉದ್ಯೋಗಿ ಶವವಾಗಿ ಪತ್ತೆ: ಕೊಲೆಯ ಶಂಕೆ, ಪೊಲೀಸರಿಂದ ತನಿಖೆ
ಚಿತ್ರಕೃಪೆ: https://www.indiatvnews.com

ಮುಂಬೈ: ಮಧ್ಯಪ್ರದೇಶ - ಮಹಾರಾಷ್ಟ್ರ ಗಡಿ ಸಮೀಪದ ಗೊಂಡಿಯಾ ಜಿಲ್ಲೆಯ ಬೋಂಡ್ರಾನಿ ಅರಣ್ಯ ಪ್ರದೇಶದಲ್ಲಿ ಇಂಡಿಗೋ ಉದ್ಯೋಗಿ ವರ್ಷಾ ತುರ್ಕರ್ (35) ರಕ್ತಸಿಕ್ತ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. 

ಪುಣೆ ವಿಮಾನ ನಿಲ್ದಾಣದ ಇಂಡಿಗೋ ಟಿಕೆಟ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ವರ್ಷಾ, ತನ್ನ ಎರಡೂವರೆ ವರ್ಷದ ಮಗಳೊಂದಿಗೆ ದೀಪಾವಳಿ ಹಬ್ಬದ ಹಿನ್ನೆಲೆ, ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿರುವ ತನ್ನ ತಾಯಿಯ ಮನೆಗೆ ಆಗಮಿಸಿದ್ದಾರೆ. 2024 ರಲ್ಲಿ ವಿವಾಹವಾಗಿದ್ದರು. ಅವರ ಪತಿ ಸದ್ಯ ಇಂದೋರ್‌ನಲ್ಲಿ ವಾಸವಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ವರ್ಷಾ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಟು ತನ್ನ ಸ್ನೇಹಿತ ನಿತೇಶ್ ಅಗರ್ವಾಲ್ ಜೊತೆಯಲ್ಲಿ ವೈನ್‌ಗಂಗಾ ನದಿಯ ತೀರಕ್ಕೆ ತೆರಳಿದ್ದಾರೆ. ಕೆಲವು ಗಂಟೆಗಳ ನಂತರ ಅಗರ್ವಾಲ್, ವರ್ಷಾ ಕುಟುಂಬಸ್ಥರಿಗೆ ಕರೆ ಮಾಡಿ, ಘಟನೆಯ ಬಗ್ಗೆ ತಿಳಿಸಿದ್ದಾನೆ.

ಅರಣ್ಯಕ್ಕೆ ಧಾವಿಸಿದ ಸಂಬಂಧಿಕರಿಗೆ, ವರ್ಷಾಳ ದೇಹದಿಂದ ತೀವ್ರ ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ. ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಸಂಜೆ 7 ಗಂಟೆಯೊತ್ತಿಗೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. 

ವರ್ಷಾ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಗುರುತಿಸಲಾಗದ ಮುಸುಕುಧಾರಿಗಳು, ತಮ್ಮ ಮೇಲೆ ದಾಳಿ ಮಾಡಿ ದರೋಡೆ ಮಾಡಿದ್ದಾರೆ ಎಂದು ಅಗರ್ವಾಲ್ ಹೇಳಿದ್ದಾನೆ. 

ಹಿಂಸಾತ್ಮಕ ದಾಳಿ ನಡೆದಿದೆ ಎಂದು ಹೇಳಿಕೊಂಡರೂ, ಆತನಿಗೆ ಯಾವುದೇ ಗಾಯಗಳಾಗಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಗರ್ವಾಲ್ ಹೇಳಿಕೆಯಲ್ಲಿ ಗೊಂದಲಗಳನ್ನು ಗಮನಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. 

ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.