ಚಿಕ್ಕಮಗಳೂರಿನಲ್ಲಿ ಮತ್ತೆ ನಕ್ಸಲರ ಓಡಾಟ; ಮೂರು ಬಂದೂಕು ಪತ್ತೆ! ಅಂದು ಮಂಗಳೂರು ರೈಲು ಹತ್ತಿದ್ದ ಮೋಸ್ಟ್ ವಾಂಟೇಡ್ ಮುಂಡಗಾರು ಲತಾ ಯಾರು? ಹಾಗಾದರೆ ಈಕೆ ಬದುಕಿದ್ದಾಳೆಯೇ ?
ಮಲೆನಾಡು ಭಾಗದಲ್ಲಿ ನಕ್ಸಲ್ (Naxal)ಚಟುವಟಿಕೆ ಮತ್ತೆ ಚುರುಕುಗೊಂಡಿರುವುದು ಇದೀಗ ದೃಢಪಟ್ಟಿದ್ದು, ಚಿಕ್ಕಮಂಗಳೂರಿನ ಕೊಪ್ಪ ತಾಲೂಕಿನ ಮುಂಡಗಾರು ಗ್ರಾಮದಲ್ಲಿ ನಕ್ಸಲರಿಗೆ( Naxal) ಸಂಬಂಧಿಸಿದ ಮೂರು ಬಂದೂಕು ಪತ್ತೆಯಾಗಿದೆ. ಪಶ್ಚಿಮ ಘಟ್ಟದಲ್ಲಿ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲ್ ನಾಯಕಿ ಮುಂಡಗಾರು ಲತಾ (Latha)ನೇತೃತ್ವದಲ್ಲಿ ಶೃಂಗೇರಿ ( Shringeri ) ಹಾಗೂ ಕೊಪ್ಪದಲ್ಲಿ (Koppa ) ಗ್ರಾಮಸ್ಥರೊಂದಿಗೆ ಸಭೆ ನಡೆಸಿರುವುದು ಬೆಳಕಿಗೆ ಬಂದಿದೆ.
ಚಿಕ್ಕಮಂಗಳೂರು : ಮಲೆನಾಡು ಭಾಗದಲ್ಲಿ ನಕ್ಸಲ್ (Naxal)ಚಟುವಟಿಕೆ ಮತ್ತೆ ಚುರುಕುಗೊಂಡಿರುವುದು ಇದೀಗ ದೃಢಪಟ್ಟಿದ್ದು, ಚಿಕ್ಕಮಂಗಳೂರಿನ ಕೊಪ್ಪ ತಾಲೂಕಿನ ಮುಂಡಗಾರು ಗ್ರಾಮದಲ್ಲಿ ನಕ್ಸಲರಿಗೆ( Naxal) ಸಂಬಂಧಿಸಿದ ಮೂರು ಬಂದೂಕು ಪತ್ತೆಯಾಗಿದೆ. ಪಶ್ಚಿಮ ಘಟ್ಟದಲ್ಲಿ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲ್ ನಾಯಕಿ ಮುಂಡಗಾರು ಲತಾ (Latha)ನೇತೃತ್ವದಲ್ಲಿ ಶೃಂಗೇರಿ ( Shringeri ) ಹಾಗೂ ಕೊಪ್ಪದಲ್ಲಿ (Koppa ) ಗ್ರಾಮಸ್ಥರೊಂದಿಗೆ ಸಭೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ನಕ್ಸಲ್ (Naxal) ನಿಗ್ರಹ ಪಡೆ ಹಾಗೂ ಪೊಲೀಸರು ಕೂಬಿಂಗ್ ಮಾಡುತ್ತಿರಬೇಕಾದರೆ ಸ್ಥಳೀಯ ವ್ಯಕ್ತಿಯೊಬ್ಬರ ಮನೆಯಲ್ಲಿ ಮೂರು ಬಂದೂಕು ಲಭಿಸಿದ್ದು, ಹೆಚ್ಚಿನ ಅಲರ್ಟ್ ಘೋಷಿಸಲಾಗಿದೆ. ಆ ಮೂಲಕ ದಶಕದ ಬಳಿಕ ಮಲೆನಾಡಿನಲ್ಲಿ ನಕ್ಸಲರು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಸುಮಾರು ಒಂದು ದಶಕದ ಬಳಿಕ ಇದೀಗ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಕಾಣಿಸಿಕೊಳ್ಳುವ ಸುಳಿವು ಸಿಕ್ಕಿದೆ. ಏಕೆಂದರೆ, ಪಶ್ಚಿಮ ಘಟದಲ್ಲಿ ಕಸ್ತೂರಿರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ನಕ್ಸಲರ(Naxal) ತಂಡವೊಂದು ಚಿಕ್ಕಮಗಳೂರಿನ ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸ್ಥಳೀಯರೊಂದಿಗೆ ಸಭೆ ನಡೆಸಿರುವ ಬಗ್ಗೆ ನಕ್ಸಲ್ ನಿಗ್ರಹ ಪಡೆಯು ಕೂಂಬಿಂಗ್ ಕಾರ್ಯಾಚರಣೆ ನಡೆಸುವ ವೇಳೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಯಲ್ಲಿ ಮೂರು ಬಂದೂಕು ಕೂಡ ಪತ್ತೆಯಾಗಿದೆ. ಮೂಲಗಳ ಪ್ರಕಾರ, ಮಲೆನಾಡಿನಲ್ಲಿ ಸಕ್ರಿಯರಾಗಿದ್ದ ನಕ್ಸಲ್ ನಾಯಕಿ ಮುಂಡಗಾರು ಲತಾ ನೇತೃತ್ವದಲ್ಲಿ ಸಭೆ ನಡೆದಿರುವ ಬಗ್ಗೆಯೂ ಪೊಲೀಸರಿಗೆ ಸುಳಿವು ಲಭಿಸಿರುವುದಾಗಿ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಸಿಐಡಿ ಎಡಿಜಿಪಿ ಪ್ರಣಬ್ ಮೊಹಂತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಎಲ್ಲೆಡೆ ವ್ಯಾಪಕ ಹೈ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿಯೂ ನಕ್ಸಲರ ಚಟುವಟಿಕೆ ಶಂಕೆ
ಕಳೆದ ವಾರವಷ್ಟೇ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರು ಓಡಾಡಿದ್ದ ಬಗ್ಗೆ ವರದಿಯಾಗಿತ್ತು. ಕೂಡಲೇ ಎಚ್ಚೆತ್ತುಕೊಂಡಿದ್ದ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜತೆಗೆ ಗ್ರಾಮಸ್ಥರನ್ನು ವಿಚಾರಿಸುವ ಮೂಲಕ ನಕ್ಸಲರು(Naxal) ಅಥವಾ ಅಪರಿಚಿತರ ಓಡಾಟದ ಬಗ್ಗೆ ಮಾಹಿತಿ ಇದೆಯೇ ಎಂದು ಕೇಳಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಹೀಗಿರುವಾಗ, ಕಾಫಿನಾಡು ಚಿಕ್ಕಮಗಳೂರಿನಲ್ಲಿ(Chikkamagalur ) ನಕ್ಸಲರು ಸಭೆ ನಡೆಸಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿಯೂ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ.
ಅಂದು ಮಂಗಳೂರು ರೈಲು ಹತ್ತಿದ್ದ ಮುಂಡಗಾರು ಲತಾ ( Naxal Latha ) ಯಾರು?
ನಕ್ಸಲ್ ನಾಯಕಿ ಮುಂಡಗಾರು ಲತಾ ಕೊಪ್ಪ ತಾಲೂಕಿನವಳಾಗಿದ್ದು, 2021ರಲ್ಲಿ ಬಿಜಿ ಕೃಷ್ಣಮೂರ್ತಿ ಹಾಗೂ ಪ್ರಭಾಳನ್ನು ಬಂಧಿಸಿದ ಬಳಿಕ ಮುಂಚೂಣಿಗೆ ಬಂದಿರುವ ಹೆಸರು ಮುಂಡಗಾರುನ ಲತಾ( Latha ). ಕೊಪ್ಪ ತಾಲೂಕಿನ ಬುಕ್ಕಡಿ ಬೈಲಿನ ಮುಂಡಗಾರು ಲತಾಳಿಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಲೋಕಮ್ಮ ಅಲಿಯಾಸ್ ಶ್ಯಾಮಲ ಹೆಸರಿನಲ್ಲಿ ಮಲೆನಾಡಿನ ಭಾಗಗಳಲ್ಲಿ ಲತಾ ಗುರುತಿಸಿಕೊಂಡಿದ್ದಳು. ಪೊಲೀಸರು ರಿಲೀಸ್ ಮಾಡಿರುವ ಮೋಸ್ಟ್ ವಾಂಟೆಂಡ್ ಲೀಸ್ಟ್ ನಲ್ಲಿಯೂ ಲತಾ ಕೂಡ ಒಬ್ಬಳು. ಇವಳ ಜಾಡು ಪತ್ತೆ ಮಾಡಿಕೊಟ್ಟವರಿಗೆ ಸರ್ಕಾರ ಐದು ಲಕ್ಷ ಬಹುಮಾನ ಕೂಡ ಘೋಷಿಸಲಾಗಿದೆ.
ಲತಾ ಮಲೆನಾಡಿನಲ್ಲಿ ಬಂದೂಕು ಹೆಗಲಿಗೇರಿಸಿಕೊಂಡು ಕ್ರಾಂತಿಯ ಹಾದಿ ಹಿಡಿದಾಗ ಜನರೇ ದಿಗ್ಬ್ರಮೆಗೊಳಗಾಗಿದ್ದರು. ತಾನು ಹೋಗುತ್ತಿರುವ ಹಾದಿ ಸರಿಯಿಲ್ಲ ಎಂದು ಗೊತ್ತಾಗೋ ಹೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು. ಪೊಲೀಸರು ಲತಾ ಬಗ್ಗೆ ಮೋಸ್ಟ್ ವಾಂಟೆಂಡ್ ಕರಪತ್ರವನ್ನು ಬಹಿರಂಗಗೊಳಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಭೂಗತವಾಗಿಯೇ ಇರುವ ಲತಾ ಈ ಹಿಂದೆ ಬಿಜಿಕೆ ತಂಡದಲ್ಲಿ ಗುರುತಿಸಿಕೊಂಡಿದ್ದಳು.
ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇರಳದ ಗಡಿಭಾಗದಲ್ಲಿ ನಕ್ಸಲರು ಅಡಗಿದ ತಂಗುದಾಣದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ಕ್ಯಾಂಪ್ ನಲ್ಲಿ ಮುಂಡಗಾರು ಲತಾ ಕೂಡ ಇದ್ದಳು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಮುಂಡಗಾರು ಲತಾ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಲತಾ ಸತ್ತಿದ್ದಾಳೆ ಎನ್ನುವ ಬ್ಯಾನರ್ ಕೂಡ ಹಾಕಲಾಗಿತ್ತು. ಆದರೆ ಪೈರಿಂಗ್ ಸಂದರ್ಭದಲ್ಲಿ ಮುಂಡಗಾರು ಲತಾ ತಪ್ಪಿಸಿಕೊಂಡಿದ್ದಾಳೆ ಎನ್ನುವ ಮಾಹಿತಿಯು ಪೊಲೀಸರಿಗೆ ಲಭಿಸಿತ್ತು.
ಆಕೆ ಅಲ್ಲಿಂದ ತಪ್ಪಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದ ರೈಲು ಹತ್ತಿದ್ದಳು. ಹೀಗೆ ಮಂಗಳೂರು ರೈಲು ಹತ್ತಿದ್ದ ಲತಾ ನಂತರದಲ್ಲಿ ಎಲ್ಲಿಗೆ ಹೋದಳು ಎನ್ನುವ ಬಗ್ಗೆ ನಕ್ಸಲ್ ನಿಗ್ರಹ ಪಡೆ ತಂಡವರಿಗಾಗಲಿ ಅಥವಾ ಪೊಲೀಸರಿಗಾಗಲಿ ಇಲ್ಲಿವರೆ ಯಾವುದೇ ಮಾಹಿತಿ ಇಲ್ಲ. ಹೀಗಿರುವಾಗ, ಚಿಕ್ಕಮಗಳೂರಿನ ತಮ್ಮ ಊರಿನ ಕೊಪ್ಪದಲ್ಲಿ ನಟೋರಿಯಸ್ ಲತಾ ಮುಂಡಗಾರು ಪ್ರತ್ಯಕ್ಷವಾಗಿರುವುದು ಹಾಗೂ ಗ್ರಾಮಸ್ಥರೊಂದಿಗೆ ಸಭೆಗಳನ್ನು ನಡೆಸಿದ್ದಾಳೆ ಎನ್ನುವುದು ಗಂಭೀರ ವಿಚಾರವಾಗಿದೆ. ಆ ಮೂಲಕ ಲತಾ ಮುಂಡಗಾರು ಕೇರಳದ ಫೈರಿಂಗ್‌ನಲ್ಲಿ ಸತ್ತಿಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆ ಕೂಡ ಆಗಿದೆ. ಹೀಗಾಗಿ, ಈ ಲತಾ ಮುಂಡಗಾರು ಚಲನವಲನದ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯು ಚಿಕ್ಕಮಗಳೂರು ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ತನ್ನ ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ಸಾಧ್ಯತೆ ಕೂಡ ಇದೆ.
ಮಲೆನಾಡಿನಲ್ಲಿ ಬೇರೂರಿದ್ದ ನಕ್ಸಲ್ ಚಟುವಟಿಕೆ
ಕರ್ನಾಟಕದಲ್ಲಿ ಒಂದು ಕಾಲದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚು ಸಕ್ರಿಯವಾಗಿದ್ದ ಜಿಲ್ಲೆ ಅಂದರೆ ಅದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ. ರಾಜ್ಯದ ನಕ್ಸಲ್ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ನಕ್ಸಲ್ ನಾಯಕ ಸಾಕೇತ್ ರಾಜನ್( Saketh rajan ). ಮೆಣಸಿನಹಾಡ್ಯದಲ್ಲಿ 2005ರ ಫೆ.6ರಂದು ನಡೆದಿದ್ದ ಎನ್‌ಕೌಂಟರ್‌ನಲ್ಲಿ ಸಾಕೇತ್ ರಾಜನ್ ಬಲಿಯಾಗಿದ್ದ. ಅದಕ್ಕೂ ಮೊದಲು 2003ರ ನವೆಂಬರ್‌ನಲ್ಲಿ ಕಾರ್ಕಳದ ಈದು ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಮೃತಪಟ್ಟಿದ್ದರು.
ಹೀಗೆ ಈ ಎರಡು ಪ್ರಮುಖ ಎನ್‌ಕೌಂಟರ್ ಮೂಲಕ ಮಲೆನಾಡಿನಲ್ಲಿ ತಲೆಯೆತ್ತಿದ್ದ ನಕ್ಸಲ್ ಚಟುವಟಿಕೆಗಳನ್ನು ಪೊಲೀಸರು ಮಟ್ಟ ಹಾಕಿದ್ದರು. ಆ ನಂತರದಲ್ಲಿ ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಕಾಡು ಪ್ರದೇಶದಲ್ಲಿ ಹಲವು ಬಾರಿ ನಕ್ಸಲರ ಓಡಾಟ ಸದ್ದು ಮಾಡಿತ್ತು. ಅತ್ತ ನೆರೆಯ ಕೇರಳ ಹಾಗೂ ಆಂಧ್ರ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಯನ್ನು ಗಮನಾರ್ಹವಾಗಿ ಮಟ್ಟ ಹಾಕಿದ ಬಳಿಕ ಕರ್ನಾಟಕದಲ್ಲಿಯೂ ನಕ್ಸಲ್ ಚಟುವಟಿಕೆ ಕಡಿಮೆಯಾಗಿತ್ತು.