ಹೆಣ್ಣಾಗಿ ಬದಲಾದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರನ ಪುತ್ರ! ಆರ್ಯನ್ ಈಗ 'ಅನಾಯಾ'...
ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಆಟಗಾರ ಹಾಗೂ ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ ಈಗ ಹೆಣ್ಣಾಗಿ ಬದಲಾಗಿದ್ದಾರೆ. ಕ್ರಿಕೆಟ್ ಆಟಗಾರ ಕೂಡ ಆಗಿದ್ದ ಆರ್ಯನ್ ಈಗ ಅನಾಯಾ ಆಗಿ ತಮ್ಮ ಹೆಸರನ್ನು ಬದಲಿಸಿಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಆಟಗಾರ ಹಾಗೂ ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ ಹೆಣ್ಣಾಗಿ ಬದಲಾಗಿದ್ದಾರೆ. ಬಂಗಾರ್ ಅವರ ಮಗ ಆರ್ಯನ್ ಈಗ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ಮಾಡಿಸಿಕೊಂಡು ಟ್ರಾನ್ಸ್‌ವುಮೆನ್ ಆಗಿದ್ದಾರೆ. ಖ್ಯಾತ ಕ್ರಿಕೆಟ್ ತಾರೆ ಸಂಜಯ್ ಮಗ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದು, ಅಪ್ಪನ ಜತೆಗೆ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದರು. ಗಂಡಾಗಿ ಹುಟ್ಟಿದ್ದರೂ ತಮ್ಮ ಭಾವನೆಗಳು ಹೆಣ್ಣಿನಂತೆ ಇತ್ತು. ಹೀಗಾಗಿ ಸರ್ಜರಿ ಮೂಲಕ ಹೆಣ್ಣಾಗಿ ಬದಲಾಗಿರುವ ಆರ್ಯನ್ ತಮ್ಮ ಹೆಸರನ್ನು ಕೂಡ ಅನಾಯಾ ಎಂದು ಬದಲಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳನ್ನು ಕೂಡ ಅಯಾನಾ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಅನಯಾ ಕಳೆದ 10 ತಿಂಗಳಿಂದ ಹಾರ್ಮೋನ್ ಬದಲಾವಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ 10 ತಿಂಗಳ ಶಸ್ತ್ರಚಿಕಿತ್ಸೆಯ ನಂತರ ಹುಡುಗಿಯಾಗಿ ರೂಪಾಂತರಗೊಂಡಿರುವುದಾಗಿ ಅವವರೇ ಸ್ವತಃ ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ತಮ್ಮ ಕ್ರಿಕೆಟ್ ಕೆರಿಯರ್ ಅನ್ನು ಕೂಡ ತ್ಯಾಗ ಮಾಡಿರುವುದಾಗಿ ಅನಯಾ ಹೇಳಿದ್ದಾರೆ.
ಬಾಲ್ಯದಿಂದಲೇ ಕ್ರಿಕೆಟ್ ಅಭ್ಯಾಸವನ್ನು ಸಹ ಮಾಡುತ್ತಿದ್ದರು. ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಆರ್ಯನ್ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್ ಪರ ಆಡಿದ್ದಾರೆ. ತಂದೆಯಂತೆ ದೊಡ್ಡ ಕ್ರಿಕೆಟರ್ ಆಗಿ ಹೆಸರು ಮಾಡುವ ಆಸೆ ಕೂಡ ಇತ್ತು. ಆದರೆ, ಹುಡುಗನಾಗಿದ್ದ ಆರ್ಯನ್‌ಗೆ ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಬೇಕೆಂಬ ನಿರ್ಧಾರವನ್ನು ಮಾಡಿಕೊಂಡಿದ್ದರು. ಆರ್ಯನ್ ಅವರು ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಇದೀಗ 10 ತಿಂಗಳು ಕಳೆದಿದೆ. ಹಾರ್ಮೋನ್ ರಿಪ್ಲೇಸ್‌ಮೆಂಟ್ ಚಿಕಿತ್ಸೆನಲ್ಲಿ ಟ್ರಾನ್ಸ್ ಮಹಿಳೆಯಾಗಿ ಬದಲಾದ ಕುರಿತಂತೆ ಅನುಭವ ಕೂಡ ಹಂಚಿಕೊಂಡಿದ್ದಾರೆ. “ನನ್ನ ದೇಹವು ತೀವ್ರವಾಗಿ ಬದಲಾಗಿದೆ. ನಾನು ಇಷ್ಟು ದಿನ ಪ್ರೀತಿಸುತ್ತಿದ್ದ ಆಟ ನನ್ನಿಂದ ದೂರ ಸರಿಯುತ್ತಿದೆ. 12 ಟೆಸ್ಟ್ ಹಾಗೂ 15 ಏಕದಿನ ಕ್ರಿಕೆಟ್ ಮ್ಯಾಚ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ನನ್ನ ತಂದೆ ಸಂಜಯ್ ಬಂಗಾರ್ ಅವರು ನನ್ನ ಎಲ್ಲ ಕಾರ್ಯಚಟುವಟಿಕೆಗಳಿಗೂ ಪ್ರೋತ್ಸಾಹ ಮತ್ತು ಸ್ಫೂರ್ತಿಯಾಗಿದ್ದಾರೆ" ಎಂದು ಅನಾಯಾ ಹೇಳಿಕೊಂಡಿದ್ದಾರೆ.
ಟ್ರಾನ್ಸ್ಜೆಂಡರ್‌ಗಳಿಗೆ ಮಹಿಳಾ ಕ್ರಿಕೆಟ್ ಟೂರ್ನಿಗೆ ಎಂಟ್ರಿ ಇಲ್ಲ
ಲಿಂಗ ಪರಿವರ್ತನೆ ಮಾಡಿಸಿಕೊಂಡವರು ಅಥವಾ ತೃತೀಯ ಲಿಂಗಿಗಳು ಮಹಿಳೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಟೀಂನಲ್ಲಿ ಆಟವಾಡುವಂತಿಲ್ಲ. ಈ ಕುರಿತಂತೆ ಐಸಿಸಿ 2023ರಲ್ಲಿ ನಿಯಮವೊಂದನ್ನು ಕೂಡ ಜಾರಿಗೆ ತಂದಿದೆ. ಆ ನಿಯಮದ ಪ್ರಕಾರ "ಸುರಕ್ಷತೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಘನತೆ ಕಾಪಾಡುವ ದೃಷ್ಟಿಯಿಂದ ಟ್ರಾನ್ಸ್ಜೆಂಡರ್‌ಗಳಿಗೆ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಟೂರ್ನಿಯ ಟೀಂನಲ್ಲಿ ಆಟಗಾರರಾಗಿ ಆಡುವುದಕ್ಕೆ ಅವಕಾಶ ಇಲ್ಲ" ಎಂದು ಉಲ್ಲೇಖಿಸಲಾಗಿದೆ. ಹೀಗಿರುವಾಗ, ಕ್ರಿಕೆಟರ್ ಕೂಡ ಆಗಿರುವ ಆರ್ಯನ್ ಈಗ ಅನಾಯಾ ಆಗಿ ಬದಲಾದರೂ ಅವರು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಯಾವುದೇ ತಂಡದ ಪರವಾಗಿ ಆಟವಾಡುವುದಕ್ಕೆ ಅವಕಾಶ ಲಭಿಸುವುದಿಲ್ಲ ಎನ್ನಲಾಗಿದೆ.