ಪಾಲಿಕೆ ಸದಸ್ಯರಾಗಿದ್ದ ರೂಪಶ್ರೀ ಪೂಜಾರಿ ವಿರುದ್ಧ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣ ಖಲಾಸೆಗೊಳಿಸಿದ ಮಂಗಳೂರಿನ ನ್ಯಾಯಾಲಯ
ಈ ತೀರ್ಪಿನ ಮೂಲಕ ಸತ್ಯಕ್ಕೆ ಜಯ ಸಿಕ್ಕಂತಾಗಿದೆ. ಅಲ್ಲದೆ, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಜನಪ್ರತಿನಿಧಿಗಳನ್ನು ಬಾಯಿ ಮುಚ್ಚಿಸಲು ಸುಳ್ಳು ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವುದು ಸರಿಯಲ್ಲ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ ಎಂಬುದಾಗಿ ಪ್ರಕರಣ ಖುಲಾಸೆಗೊಂಡಿರುವ ಬಗ್ಗೆ ರೂಪಶ್ರೀ ಪೂಜಾರಿ ಹೇಳಿದ್ದಾರೆ.
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 51ರ ಸದಸ್ಯರಾಗಿದ್ದ ರೂಪಶ್ರೀ ಪೂಜಾರಿ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖಲಾಸೆಗೊಳಿಸಿ ತೀರ್ಪು ನೀಡಿದೆ.
2023ರ ನ.23ರಂದು ನೂಜಿಯಲ್ಲಿ ಖಾಸಗಿ ರಸ್ತೆಯೊಂದಕ್ಕೆ ಸಾರ್ವಜನಿಕ ನಿಧಿಯನ್ನು (PWD Funds) ಅಕ್ರಮವಾಗಿ ಬಳಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಆಗಿನ ಕಾರ್ಪೊರೇಟರ್ ರೂಪಶ್ರೀ ಪೂಜಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಅಮಲ ಜ್ಯೋತಿ ಮತ್ತು ಅವರ ಪತಿ ರಾಜೇಶ್ ಆರ್. ಅವರು ಕಾರ್ಪೊರೇಟರ್ ವಿರುದ್ಧ ಸುಳ್ಳು ಆರೋಪ ಹೊರಿಸಿ ಜಾತಿ ನಿಂದನೆ ದೂರು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ರೂಪಶ್ರೀ ಪೂಜಾರಿ ಅವರು ತಮ್ಮ ಕಾರ್ಪೊರೇಟರ್ ಹುದ್ದೆಯ ಅಧಿಕೃತ ಕರ್ತವ್ಯದ ಭಾಗವಾಗಿ, ಸಾರ್ವಜನಿಕ ಹಣದ ದುರುಪಯೋಗವನ್ನು ತಡೆಯುವ ಸದುದ್ದೇಶದಿಂದ ಸ್ಥಳಕ್ಕೆ ಭೇಟಿ ನೀಡಿದ್ದರು ಎಂಬ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ. ಅಲ್ಲದೆ ದೂರುದಾರರು ಮತ್ತು ಸಾಕ್ಷಿಗಳು ನೀಡಿದ ಹೇಳಿಕೆಗಳಲ್ಲಿ ಗಂಭೀರ ವಿರೋಧಾಭಾಸಗಳು ಕಂಡುಬಂದಿವೆ. ಗುತ್ತಿಗೆ ಕಾಮಗಾರಿಯು 'ಕೋಟಿಮುರ' ಎಂಬಲ್ಲಿ ಮಂಜೂರಾಗಿದ್ದರೂ ಅದನ್ನು ನೂಜಿಯ ಖಾಸಗಿ ರಸ್ತೆಗೆ ಬಳಸಲಾಗುತ್ತಿತ್ತು ಎಂಬ ಸತ್ಯ ವಿಚಾರಣೆಯಲ್ಲಿ ಬಹಿರಂಗವಾಗಿತ್ತು. ಆರೋಪಿಯು ದೂರುದಾರರ ಜಾತಿಯನ್ನು ನಿಂದಿಸುವ ಯಾವುದೇ ಉದ್ದೇಶ ಹೊಂದಿರಲಿಲ್ಲ ಮತ್ತು ಕೇವಲ ಆಡಳಿತಾತ್ಮಕ ಲೋಪವನ್ನು ಪ್ರಶ್ನಿಸಿದ್ದರು ಎಂಬುದು ಕೋರ್ಟ್ ವಿಚಾರಣೆಯಲ್ಲಿ ಸಾಬೀತಾಗಿದೆ.
ಈ ತೀರ್ಪಿನ ಮೂಲಕ ಸತ್ಯಕ್ಕೆ ಜಯ ಸಿಕ್ಕಂತಾಗಿದೆ. ಅಲ್ಲದೆ, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಜನಪ್ರತಿನಿಧಿಗಳನ್ನು ಬಾಯಿ ಮುಚ್ಚಿಸಲು ಸುಳ್ಳು ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವುದು ಸರಿಯಲ್ಲ ಎಂಬ ಸಂದೇಶವನ್ನು ಈ ತೀರ್ಪು ನೀಡಿದೆ ಎಂಬುದಾಗಿ ಪ್ರಕರಣ ಖುಲಾಸೆಗೊಂಡಿರುವ ಬಗ್ಗೆ ರೂಪಶ್ರೀ ಪೂಜಾರಿ ಹೇಳಿದ್ದಾರೆ.
ರೂಪಶ್ರೀ ಪೂಜಾರಿ ಪರವಾಗಿ ಮಂಗಳೂರಿನ ನುರಿತ ವಕೀಲರಾದ ಸಚಿನ್ ದೇವೇಂದ್ರ ವಾದ ಮಂಡಿಸಿದ್ದರು.


