ಎಸ್.ಡಿ.ಎಂ ಕಾಲೇಜು : ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ
ಬದುಕು ಮತ್ತು ಭವಿಷ್ಯವನ್ನು ರೂಪಿಸುವ ಮೂಲಭೂತ ವಸ್ತು ಶಿಕ್ಷಣ : ಅವಿನಾಶ್ ರಾವ್ ಜೈವತಂತ್ರಜ್ಞಾನ ಮತ್ತು ಸಸ್ಯಶಾಸ್ತ್ರ ವಿಭಾಗದಿಂದ ಕಾರ್ಯಕ್ರಮ ಆಯೋಜನೆ
ಜೀವ ವಿಜ್ಞಾನಗಳ ಉದಯೋನ್ಮುಖ ಗಡಿಗಳು: ಸುಸ್ಥಿರ ಅಭಿವೃದ್ಧಿಗಾಗಿ ನವೀನತೆಗಳು ಕುರಿತು ಚರ್ಚೆ
( EMERGING FRONTIERS IN LIFE SCIENCE : INNOVATION FOR SUSTAINABLE DEVELOPMENT)
ಬದುಕು ಮತ್ತು ಭವಿಷ್ಯವನ್ನು ರೂಪಿಸುವ ಮೂಲಭೂತ ವಸ್ತು ಶಿಕ್ಷಣ : ಅವಿನಾಶ್ ರಾವ್
ಜೈವತಂತ್ರಜ್ಞಾನ ಮತ್ತು ಸಸ್ಯಶಾಸ್ತ್ರ ವಿಭಾಗದಿಂದ ಕಾರ್ಯಕ್ರಮ ಆಯೋಜನೆ
ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಪದವಿ ಕಾಲೇಜಿನ ಜೈವತಂತ್ರಜ್ಞಾನ ಮತ್ತು ಸಸ್ಯಶಾಸ್ತ್ರ ವಿಭಾಗ ಹಾಗು ಕಾಲೇಜಿನ ಐಕ್ಯುಎ ಸೆಲ್ ಸಹಯೋಗದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿರುವ ಎರಡು ದಿನಗಳ 'ಜೀವ ವಿಜ್ಞಾನಗಳ ಉದಯೋನ್ಮುಖ ಗಡಿಗಳು: ಸುಸ್ಥಿರ ಅಭಿವೃದ್ಧಿಗಾಗಿ ನವೀನತೆಗಳು' ( EMERGING FRONTIERS IN LIFE SCIENCE : INNOVATION FOR SUSTAINABLE DEVELOPMENT) ವಿಷಯದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ನವದೆಹಲಿಯ ವಿಜ್ಞಾನಿ ‘ಜಿ’ಮತ್ತು ನಿರ್ದೇಶಕ ಸಿಬ್ಬಂದಿ ನಿರ್ದೇಶನಾಲಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಡಾ. ಸಂಜಯ್ ಕುಮಾರ್ ದ್ವಿವೇದಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವಂತೆ ಯುವ ಜನರಲ್ಲಿ ಕೌಶಲ್ಯಗಳ ಅಂತರವೂ ಹೆಚ್ಚುತ್ತಿದೆ. ಬೆಳಗೆ ಆರಂಭವಾದಾಗಿನಿಂದ ರಾತ್ರೀಯ ವರೆಗೂ ನಾವು ಅನೇಕ ರಾಸಾಯನಿಕ ಮಿಶ್ರಿತ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಅದು ಮನುಷ್ಯ ಮಾತ್ರವಲ್ಲದೆ ನೀರು, ಗಾಳಿ ಹಾಗು ಮಣ್ಣಿನಲ್ಲಿಯೂ ಅದನ್ನು ಮಿಶ್ರೀತಗೊಳಿಸುತ್ತೇವೆ. ಇದು ನಮಗೂ ಹಾನಿಕಾರಕ ಹಾಗು ಪರಿಸರಕ್ಕೂ ಮಾರಕ. ಜೈವಿಕ ಅಂಶಗಳನ್ನು ಬಳಸಿಕೊಂಡು ಪರಿಸರ ಸ್ನೇಹಿಯಾಗಿರುವ ಉತ್ಪನ್ನಗಳನ್ನು ತಯಾರಿಸುವ ವೈಜ್ಞಾನಿಕ ಸಂಶೋಧಕರು ಸಮಾಜದಲ್ಲಿ ತಯಾರಾಗಬೇಕಿದೆ. ಯುವಕರು ನಿರಂತರ ಅಭ್ಯಾಸ ಮತ್ತು ಪ್ರಯತ್ನದಿಂದ ಒಂದಲ್ಲ ಒಂದು ವಿಷಯದಲ್ಲಿ ಪರಿಣಿತಿಯನ್ನು ಹೊಂದಬೇಕು. ಸಂಶೋಧನೆ, ಆವಿಷ್ಕಾರ ಎಂದರೆ ಅದು ಹಾನಿ ಮಾಡುವುದು ಅಲ್ಲ ಬದಲಾಗಿ ಅದು ಯಾರಿಗೂ ತೊಂದರೆಯಾಗದಂತೆ ಸುಸ್ಥಿರವಾಗಿ ಉಳಿಯುವುದನ್ನು ನಿರ್ಮಿಸುವುದು ಎಂದು ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅತಿಥಿಗಳಾಗಿದ್ದ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್ ರಾವ್ ಮಾತನಾಡಿ, ಶಿಕ್ಷಣ ನಮ್ಮ ಬದುಕು ಮತ್ತು ಭವಿಷ್ಯವನ್ನು ರೂಪಿಸುವ ಮೂಲಭೂತ ವಸ್ತು. ಈ ಮೂಲಕ ನಾವು ಸಮಾಜದ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕು. ಯುವಕರು ಕೇವಲ ಪಿಯುಸಿ ಪದವಿಗಳಿಗೆ ಸೀಮಿತರಾಗದೇ ಕ್ರೀಯಾಶೀಲ ಮತ್ತು ಯೋಜನಾಶೀಲರಾಗಿ ಬೆಳೆಯಬೇಕು. ಸುತ್ತಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ತನ್ನದೇ ಸಂಶೋಧನೆ, ಉದ್ದಿಮೆಯನ್ನು ಸ್ಥಾಪಿಸಲು ಪಣ ತೊಡಬೇಕು. ಕಾಲೇಜು ದಿನಗಳಲ್ಲಿ ಕಲಿಕೆಗೆ ಅಗಾಧವಾದ ಅವಕಾಶಗಳಿರುತ್ತದೆ. ಭವಿಷ್ಯದ ಕನಸುಗಳಿಗೆ ಯಾವುದೇ ಬೌಂಡರಿಯನ್ನು ಹಾಕಿಕೊಳ್ಳದೆ ಉನ್ನತ ಮಟ್ಟದಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲೆ ನಂದ ಕುಮಾರಿ ಕೆ ಪಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗು ಪ್ರಾಯೋಗಿಕ ಜ್ಞಾನವನ್ನು ಭಿತ್ತರಿಸಲು ರಾಷ್ಟ್ರೀಯ ವಿಚಾರ ಸಂಕಿರಣದಂತಹ ಅನೇಕ ಕಾರ್ಯಕ್ರಮಗಳನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಸಹಕಾರದಲ್ಲಿ ನಡೆಸಿಕೊಂಡು ಬರುತ್ತಿದೆ. ವಿವಿಧ ಪರಿಣಿತ ಸಂಪನ್ಮೂಲ ವ್ಯಕ್ತಿಗಳನ್ನು ಕಾಲೇಜಿಗೆ ಆಮಂತ್ರಿಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಕಾರ್ಯಕ್ರಮವನ್ನು ಆಯೋಜಿಸಿದ ಕಾಲೇಜಿನ ಜೈವತಂತ್ರಜ್ಞಾನ ಮತ್ತು ಸಸ್ಯಶಾಸ್ತ್ರ ವಿಭಾಗಕ್ಕೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾ. ಸಂಜಯ್ ಕುಮಾರ್ ದ್ವಿವೇದಿ ಹಾಗು ಅವಿನಾಶ್ ರಾವ್ ರವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಹಾಗು ಕಾಲೇಜಿನ ವತಿಯಿಂದ ಉಪ ಪ್ರಾಚಾರ್ಯರಾದ ನಂದಿ ಕುಮಾರಿ ಕೆ.ಪಿ ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಐಕ್ಯೂ ಎಸಿ ಸಂಯೋಜಕ ಗಜಾನನ ಭಟ್ ಹಾಗು ವಿಜ್ಞಾನ ವಿಭಾಗದ ಡೀನ್ ಡಾ. ಸವಿತಾ ಕುಮಾರಿ, ಜೈವತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಅಭಿಜಿತ್ ಬಡಿಗೇರ, ಸಸ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಶ್ರೀಶಾ ನಾಯಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿಗಳು ಭಾಗಿಯಾಗಿದ್ದರು. ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕ ದೀಕ್ಷಿತ್ ರೈ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಣೆ ಮಾಡಿದರು. ಉಪನ್ಯಾಸಿಕಿ ಶಕುಂತಲಾ ವಂದಿಸಿದರು.
ರಾಜ್ಯದ ವಿವಿಧ ವಿದ್ಯಾರ್ಥಿಗಳಿಂದ ವಿಚಾರ ಮಂಡನೆ :
ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಬೆಂಗಳೂರು ದಾವಣಗೆರೆ, ಮಡಿಕೇರಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ಮೊದಲ ದಿನ 35 ಕ್ಕೂ ಅಧಿಕ ಜನ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಿದರು.


