ತಿಂಗಳಿಗೆ 1000 ರೂ. ಕಟ್ಟಿ; ಕಾರು, ಗೋಲ್ಡ್, ಮನೆ ಗೆಲ್ಲಿ..! 'ಡೀಲ್ ಡ್ರಾ ಸ್ಕೀಮ್'ಗಳಲ್ಲಿ ಹಣ ಹೂಡಿಕೆ ಮಾಡಿದವರಲ್ಲಿ ಈಗ ಆತಂಕ!
ವರ್ಷಕ್ಕೆ 12 ಸಾವಿರ ಅಥವಾ 24 ಸಾವಿರ ರೂ. ಪಾವತಿಸುವ ಈ ರೀತಿಯ ಸ್ಕೀಮ್‌ಗಳಿಗೆ ಯಾವುದೇ ದಾಖಲಾತಿ ನೀಡುವ ಅಗತ್ಯವಿಲ್ಲ. ನಿಮ್ಮ ಹೆಸರು, ಮೊಬೈಲ್ ನಂಬರ್ ಇದ್ದರೆ ಸಾಕು; ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಿದ ಮೇಲೆ ಕೇವಲ ಒಂದು ನೋಂದಣಿ ನಂಬರ್ ಇರುವ ಕಾರ್ಡ್ ಮಾತ್ರ ಬರುತ್ತದೆ. ಅದು ಬಿಟ್ಟರೆ ನೀವು ಕಟ್ಟುವ ತಿಂಗಳ ಹಣಕ್ಕೆ ಯಾವುದೇ ಕಾನೂನು ರೀತಿಯ ದಾಖಲೆಗಳು ಅಥವಾ ಗ್ಯಾರಂಟಿ ಇರುವುದಿಲ್ಲ. ವಾಟ್ಸಾಪ್ ಗ್ರೂಪ್‌ಗಳನ್ನು ಕ್ರಿಯೇಟ್ ಮಾಡಿಕೊಂಡು ಪ್ರತಿ ತಿಂಗಳು ಹಣ ಪಾವತಿಸುತ್ತಾ ಹೋಗಬೇಕು.
ಮಂಗಳೂರು: ಪ್ರತಿ ತಿಂಗಳು1000ರೂ. ಪಾವತಿಸಿದವರಿಗೆ ಕಾರು, ಬೈಕ್, ಚಿನ್ನದ ನೆಕ್ಲೆಸ್ ಅಷ್ಟೇ ಏಕೆ ಸ್ವತಂ ಫ್ಲ್ಯಾಟ್‌ಗಳನ್ನೇ ಗಿಫ್ಟ್ ಆಗಿ ನೀಡುವ ಸ್ಕೀಮ್‌ಗಳ ನಿಜ ಬಣ್ಣ ಇದೀಗ ನಿಧಾನಕ್ಕೆ ಕಳಚಿಕೊಳ್ಳುತ್ತಿದೆ. ಅದಕ್ಕೆ ಮೊದಲ ಸಾಕ್ಷಿ ಎಂಬಂತೆ ದಕ್ಷಿಣ ಕನ್ನಡಲ್ಲೇ ಹುಟ್ಟಿರುವ ಬಹುದೊಡ್ಡ ಮಾಸಿಕ ಡೀಲ್ ಸ್ಕಿಮ್‌ನ ಅಸಲಿ ಆಟ ಬಯಲಾಗಿದ್ದು, ಸಾಕಷ್ಟು ಚರ್ಚೆಗೂ ಕಾರಣವಾಗುತ್ತಿದೆ.
ಗಮನಾರ್ಹವೆಂದರೆ, ದಕ್ಷಿಣ ಕನ್ನಡದಲ್ಲಿ ಒಂದೆಲ್ಲ, ಎರಡಲ್ಲ, 10ಕ್ಕೂ ಅಧಿಕ ಈ ರೀತಿ ತಿಂಗಳಿಗೆ ಒಂದು ಸಾವಿರ ಅಥವಾ ಎರಡು ಸಾವಿರ ರೂ. ಪಾವತಿಸಿಕೊಂಡು ಚಿನ್ನದಿಂದ ಹಿಡಿದು ಪ್ಲ್ಯಾಟ್ ತನಕ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಗೆಲ್ಲುವ ಸ್ಕೀಮ್‌ಗಳು ಬಂದಿವೆ. ನಾನಾ ರೀತಿಯ ಆಮಿಷವೊಡ್ಡಿ ಮುಗ್ಧ ಬಡ ಜನರು ಬೆವರು ಸುರಿಸಿ ದುಡಿದಿರುವ ಹಣವನ್ನು ಲಕ್ಕಿ ಡ್ರಾಗಳ ಹೆಸರಿನಲ್ಲಿ ಕಟ್ಟಿಸಿಕೊಳ್ಳುತ್ತಿರುವುದು ವಾಸ್ತವ. ಈ ರೀತಿಯ ಯಾವುದೇ ಸ್ಕೀಮ್‌ಗಳು ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವ ಜಾಲವೇ ಎನ್ನುವ ಅನುಮಾನಗಳು ಇದೀಗ ಜನಸಾಮಾನ್ಯರಲ್ಲಿ ಮೂಡಿರುವುದು ಸಹಜ.
ಡ್ರೀಮ್ ಡೀಲ್ ಎನ್ನುವ ಜನರಿಂದ ತಿಂಗಳಿಗೆ ಒಂದು ಸಾವಿರ ರೂ. ಸಂಗ್ರಹಿಸಿ ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನಗಳನ್ನು ನೀಡುವ ಕಂಪೆನಿ ಇತ್ತೀಚೆಗೆ ನಡೆಸಿರುವ ಲೈವ್ ಡ್ರಾವೊಂದರಲ್ಲಿ ಅದರ ಸಿಬ್ಬಂದಿಯೇ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಮಾದವನ್ನು ಒಪ್ಪಿಕೊಂಡಿರುವ ಕಂಪೆನಿಯು ವಂಚನೆ ಮಾಡಿರುವ ಆ ಇಬ್ಬರ ವಿರುದ್ಧವೂ ಕಂಕನಾಡಿ ಠಾಣೆಯಲ್ಲಿ ದೂರು ನೀಡುವ ಜತೆಗೆ ಅವರನ್ನು ಕೆಲಸದಿಂದಲೂ ತೆಗೆದು ಹಾಕಿರುವುದಾಗಿ ಹೇಳಿಕೊಂಡಿದೆ.
ದಕ್ಷಿಣ ಕನ್ನಡದಲ್ಲಿ ನಾಯಿಕೊಡೆಗಳಂತೆ ಹುಟ್ಟಿರುವ ಸ್ಕೀಮ್‌ಗಳು
ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಅದು ಅತ್ಯಂತ ಬುದ್ಧಿವಂತರ ಜಿಲ್ಲೆ ಎನ್ನುವ ಹೆಸರಿದೆ. ಆದರೆ, ಇದೀಗ ಹೆಚ್ಚು ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರೀಮ್ ಡೀಲ್‌ನಂಥ ಹತ್ತಾರು ಸ್ಕೀಮ್ ಕಂಪೆನಿಗಳು ಹುಟ್ಟುಕೊಂಡು ಜನರನ್ನು ದೊಡ್ಡ-ದೊಡ್ಡ ಬಹುಮಾನಗಳತ್ತ ಆಕರ್ಷಿಸಲಾಗುತ್ತಿದೆ. ಅಂದ-ಚಂದದ ಹೆಸರನಲ್ಲಿ ಕಂಪೆನಿಗಳು ಹುಟ್ಟಿಕೊಂಡು ಕರಾವಳಿ ಭಾಗದ ಸಿನಿಮಾ ಸ್ಟಾರ್‌ಗಳನ್ನೇ ಅದಕ್ಕೆ ಅಂಬಾಸಿಡರ್‌ಗಳು ಅನ್ನುವ ರೀತಿಯಲ್ಲಿ ಮಾಡಿ, ಆ ಮೂಲಕ ಜನರಲ್ಲಿ ನಂಬಿಕೆ ಮೂಡಿಸಿ ಹಣವನ್ನು ಹೂಡಿಕೆ ಮಾಡಿಸಲಾಗುತ್ತದೆ. ಈ ಕಂಪೆನಿಗಳ ಪ್ರತಿಯೊಂದು ಸೀಸನ್‌ನ ಸ್ಕೀಮ್‌ಗಳಲ್ಲಿಯೂ ಸುಮಾರು 20ರಿಂದ 25 ಸಾವಿರ ಜನರು ಒಂದು ಸಾವಿರ ರೂ. ಕಟ್ಟುತ್ತ ಚಿನ್ನ, ಬೈಕ್, ಕಾರು, ಮನೆಯ ಕನಸು ಕಾಣುತ್ತಿದ್ದಾರೆ.
ವಾಸ್ತವದಲ್ಲಿ 24 ಕಂತುಗಳ ಸ್ಕೀಮ್ ಆಗಿದ್ದರೆ ನೀವು ಒಟ್ಟು ಕಟ್ಟುವುದು 24,000ರೂ. ಈ 24 ಸಾವಿರ ರೂಪಾಯಿಯಲ್ಲಿ ಯಾವ ಸ್ಕೀಮ್ ಕಂಪೆನಿಗಳು ಕಾರು, ಬೈಕ್ ಅಥವಾ ಇನ್ಯಾವುದೇ ಬೆಲೆ ಬಾಳುವ ವಸ್ತುಗಳನ್ನು ನೀಡಲು ಸಾಧ್ಯವೇ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. 10 ಲಕ್ಷ ಕೊಟ್ಟರೂ ಕಂಪೆನಿ ಮಾಲೀಕ ಅಶೋಕ್ ಮಹೀಂದ್ರ ಅವರಿಗೂ ಥಾರ್ ವಾಹನ ಕೊಡಿಸಲು ಸಾಧ್ಯವಾಗುವುದಿಲ್ಲ. ಅಂಥದರಲ್ಲಿ ಇಂಥಹ ಸ್ಕೀಮ್‌ನಲ್ಲಿ ಕೇವಲ ಒಂದು ಸಾವಿರ ಕಟ್ಟಿದರೆ ತಿಂಗಳಿಗೊಂದು ಅಥವಾ ಎರಡು ಥಾರ್ ವೆಹಿಕಲ್ ಸಿಗುತ್ತದೆ; 60 ಲಕ್ಷದ ಫ್ಲ್ಯಾಟ್ ಸಿಗುತ್ತದೆ ಎಂದಾಗ ಯಾರು ತಾನೆ ಸ್ಕೀಮ್‌ಗೆ ಸೇರುವುದಿಲ್ಲ ಹೇಳಿ? ಪ್ರಾಕ್ಟಿಕಲ್ ಆಗಿ ಇದೆಲ್ಲ ಸಾಧ್ಯವೇ ಎಂದು ಇಂಥಹ ಸ್ಕೀಮ್‌ಗಳಿಗೆ ಸೇರುವ ಮೊದಲು ಯೋಚಿಸುವುದು ಉತ್ತಮ. ಅದೃಷ್ಟದಲ್ಲಿ ಡ್ರಾ ಗೆದ್ದು ಕಾರು, ಗೋಲ್ಡ್, ಬೈಕ್ ಒಂದುವೇಳೆ ಸಿಕ್ಕಿದರೂ ಅದು ಕಂಪೆನಿಯ ದುಡ್ಡು ಅಲ್ಲ ಎನ್ನುವುದನ್ನೂ ಮರೆಯಬಾರದ್ದು.
ಒಂದು ಸ್ಕೀಮ್‌ನಡಿ ಸುಮಾರು 20,000 ಸದಸ್ಯರು ಇದ್ದರೆ ನೀವು ಲೆಕ್ಕ ಹಾಕಬಹುದು ಒಂದು ತಿಂಗಳಿಗೆ ಕುಳಿತಲ್ಲಿಯೇ ಕಂಪೆನಿ ಖಾತೆಗೆ ಸಂಗ್ರಹವಾಗುವ ಮೊತ್ತ ಬರೋಬ್ಬರಿ 20,000,000. ಅದೇ ಒಟ್ಟು 24 ತಿಂಗಳಿಗೆ ಸಂಗ್ರಹಿಸುವ ಮೊತ್ತ 480,000,000 ಕೋಟಿ ಹಣ. ಒಂದು ಸೀಸನ್ ಸ್ಕೀಮ್ ಹೆಸರಿನಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಂಗ್ರಹಿಸುತ್ತಿರಬೇಕಾದರೆ ಅದರ ಲಾಭ ಎಷ್ಟರ ಮಟ್ಟಿಗೆ ಹಣ ಕಟ್ಟಿದ ಗ್ರಾಹಕರನ್ನು ತಲುಪುತ್ತದೆ ಎಂದು ಊಹಿಸಬಹುದು. 20 ಸಾವಿರ ಮಂದಿಗೂ ಕಾರು, ಬೈಕ್, ಮನೆಯ ಆಸೆ ಹುಟ್ಟಿಸುತ್ತಾರೆ. ಅದರಲ್ಲಿ ಒಂದೆರಡು ಡ್ರಾದಲ್ಲಿ ಈ ರೀತಿ ಸಿಬ್ಬಂದಿ ಮೋಸ ಮಾಡಿದ್ದರೂ ಕಂಪೆನಿ ಖಾತೆಗೆ ಬರುವ ಹಣ ಕೋಟಿ ಕೋಟಿ. ಹೀಗಿರುವಾಗ, ಈ ರೀತಿಯ ಸ್ಕೀಮ್‌ವೊಂದನ್ನು ಆರಂಭಿಸಿ ದಿನಬೆಳಗಾಗುವುದರೊಳಗೆ ಕೋಟಿ ಕೋಟಿ ಆಸ್ತಿ ಸಂಪಾದಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಗಿರಣಿ ಅಂಗಡಿ ಇಟ್ಟಿರುವವರು, ತರಕಾರಿ ಮಾರಾಟ ಮಾಡುತ್ತಿರುವವರೂ ಈ ರೀತಿ ಒಂದು ಡ್ರಾ ಸ್ಕಿಮ್ ನಡೆಸಿದರೆ ಹೇಗೆ ಎಂದು ಯೋಚಿಸುವ ಮಟ್ಟಕ್ಕೆ ಈಗ ಈ ಸ್ಕೀಮ್ ಡ್ರಾಗಳ ಭರಾಟೆ ಜೋರಾಗಿದೆ. ಇದರ ಪರಿಣಾಮದಿಂದಲೇ ಪ್ರತಿ ತಿಂಗಳು ಕೂಡ ಒಂದೆರಡು ಹೊಸ ತಿಂಗಳ ಹಣ ಪಾವತಿ ಸ್ಕೀಮ್ ಕಂಪೆನಿಗಳು ಜನಾಕರ್ಷಣೆ ಹೆಸರಿನಲ್ಲಿ ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿವೆ.
24 ತಿಂಗಳೂ ಹಣ ಪಾವತಿಸುವವರ ಕಥೆಯೇನು?
ರಾತ್ರೋರಾತ್ರಿ ಹುಟ್ಟಿಕೊಳ್ಳುವ ಈ ರೀತಿಯ ಯಾವುದೇ ಸ್ಕೀಮ್ ಕಂಪೆನಿಗಳು ಸಾವಿರಾರು ಜನರನ್ನು ಏಜೆಂಟ್‌ಗಳ ಮೂಲಕ ತಮ್ಮ ಸ್ಕೀಮ್‌ಗಳಿಗೆ ಸೇರಿಸಿಕೊಳ್ಳುತ್ತಾರೆ. ಅತ್ತ ಏಜೆಂಟರ್‌ಗಳಿಗೂ ಒಬ್ಬ ವ್ಯಕ್ತಿಯನ್ನು ಸ್ಕೀಮ್‌ಗೆ ಸೇರಿಸಿದರೆ ಕೈತುಂಬಾ ಹಣವನ್ನು ಕಮಿಷನ್ ರೂಪದಲ್ಲಿ ನೀಡುತ್ತಾರೆ. ಹೀಗಾಗಿ, ತಮಗೆ ಒಳ್ಳೆಯ ಕಮಿಷನ್ ಸಿಗುತ್ತದೆ ಎಂಬ ಕಾರಣಕ್ಕೆ ಸ್ನೇಹಿತರು, ಅವರ ಕುಟುಂಬಸ್ಥರು, ಪರಿಚಯಸ್ಥರು ಅಂತ ಪ್ರತಿಯೊಬ್ಬರನ್ನೂ ಈ ರೀತಿಯ ಡ್ರಾ ಸ್ಕೀಮ್‌ಗಳಿಗೆ ಸೇರಿಸಿಕೊಳ್ಳಲಾಗುತ್ತದೆ. ಕಮಿಷನ್ ಆಸೆಗೆ ಬಿದ್ದು ಏಜೆಂಟರ್‌ಗಳು ಕೂಡ " ಅವರಿಗೆ ಕಾರು ಬಂದಿದೆ; ಇವರಿಗೆ ಗೋಲ್ಡ್ ಚೈನ್ ಸಿಕ್ಕಿದೆ" ಅಂಥೆಲ್ಲ ಹೇಳಿ ಸದಸ್ಯತ್ವ ಕೊಡಿಸಿ ಬಿಡುತ್ತದೆ. ನಾಲ್ಕೈದು ತಿಂಗಳು ಹಣ ಕಟ್ಟುತ್ತಿದ್ದಂತೆ ಸತ್ಯದ ಅರಿವಾಗುತ್ತದೆ. ಅರ್ಧಕ್ಕೆ ಸ್ಕೀಮ್ ನಿಲ್ಲಿಸುವಂತಿಲ್ಲ; ಕಟ್ಟಿದ್ದು ದುಡ್ಡು ಹೋಗುತ್ತದೆಯಲ್ಲವೇ ಎಂಬ ಆತಂಕದಲ್ಲಿ ಸ್ಕೀಮ್ ಮುಂದುವರಿಸಬೇಕಾದ ಸಂಕಷ್ಟ-ಅನಿವಾರ್ಯತೆ ಹಲವರದ್ದು.
ಇನ್ನೊಂದೆಡೆ ಈ ತಿಂಗಳು ನೋಡಿ ಅವರಿಗೆ ಕಾರು ಬಂತು, ಇವರಿಗೆ ಬೈಕ್ ಬಂತು; ಇಲ್ಲಿ ನೋಡಿ ಫ್ಲ್ಯಾಟ್ ರೆಡಿಯಾಗುತ್ತಿದೆ; ಅಲ್ಲಿ ನೋಡಿ ಗೋಲ್ಡ್ ಶೋರೂಂ ಶುರುವಾಗಲಿದೆ; ಮತ್ತೊಂದೆಡೆ ಮಣ್ಣು ತೆಗೆದು ಪಾಯ ಕಟ್ಟಿ ಪಿಲ್ಲರ್ ಹಾಕಲಾಗುತ್ತದೆ ಎನ್ನುವ ಬಗೆ-ಬಗೆಯ ಪೋಸ್ ಕೊಡುವ ವಿಡಿಯೋ, ಸಂದರ್ಶನಗಳು, ಲೇಖನ ಜಾಲತಾಣಗಳಲ್ಲಿ ಹರಿದಾಡುತ್ತವೆ. ಇನ್ನು ಕೆಲವು ಕಂಪೆನಿಗಳು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮದು ಅಮೆಜಾನ್‌ಗೆ ಸ್ಪರ್ಧೆ ನೀಡುವ ಇ-ಕಾಮರ್ಸ್ ಪ್ಲಾಟ್‌ಫಾರಂ ರೆಡಿಯಾಗುತ್ತದೆ; ಅಲ್ಲೇ ನೀವು ನಿಮ್ಮಿಷ್ಟದ ವಸ್ತು ಖರೀಸಬಹುದು; ಜತೆಗೆ ದೊಡ್ಡ ಮಾಲ್ ಬರುತ್ತಿದೆ; ರೈತರ ಸಮಸ್ಯೆಯೇ ಪರಿಹಾರವಾಗುವ ಅಂಬಾನಿಯಂಥ ದೊಡ್ಡ ಪ್ರಾಜೆಕ್ಟ್ ರೆಡಿಯಾಗುತ್ತಿದೆ ಎಂದೆಲ್ಲ ಬುರುಡೆ ಬಿಡಲಾಗುತ್ತಿದೆ. ಇದನ್ನೇ ನಂಬಿಕೊಂಡು ಮಧ್ಯಮ ಹಾಗೂ ಬಡವರ್ಗದ ದಕ್ಷಿಣ ಕನ್ನಡದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿಯ ಸ್ಕೀಮ್‌ಗಳಿಗೆ ಸೇರಿಕೊಳ್ಳುತ್ತಿದ್ದಾರೆ ಎನ್ನುವುದು ಕೂಡ ಆತಂಕದ ವಿಚಾರ.
ಆದರೆ, ಒಂದು ಮಾತ್ರ ವಾಸ್ತವ; ಯಾವ ಕಂಪೆನಿಗಳು ಕೂಡ 24 ಅಥವಾ 30 ತಿಂಗಳು ಹಣ ಕಟ್ಟುವವರಿಗೆ ಎರಡು ವರ್ಷದ ಬಳಿಕ ಏನು ಸಿಗುತ್ತದೆ ಎನ್ನುವುದನ್ನು ಹೇಳುತ್ತಿಲ್ಲ. ಕೇವಲ ಬಾಯಿ ಮಾತಿನಲ್ಲಿಯೇ 24 ಸಾವಿರ ರೂ.ಗಳ ಗಿಫ್ಟ್ ವೋಚರ್ ಕೊಡುತ್ತೇವೆ ಅಥವಾ ನಮ್ಮದೇ ಗೋಲ್ಡ್, ಕಾರು, ಬೈಕ್, ಚಿನ್ನದ ಶೋರೂಂನಲ್ಲಿ ಖರೀದಿ ಮಾಡಬಹುದು ಎನ್ನುತ್ತಿವೆ. ಆದರೆ, ಯಾವ ಸ್ಕೀಮ್‌ಗಳು 24 ತಿಂಗಳ ಬಳಿಕ 24000 ಹಣವನ್ನೇ ವಾಪಾಸ್ ಕೊಡುತ್ತೇವೆ ಎಂದು ಹೇಳುತ್ತಿಲ್ಲ. ವಾಸ್ತವದಲ್ಲಿ ಈ ರೀತಿ ಜನರಿಂದ ಸಂಗ್ರಹಿಸುವ ಕೋಟಿ-ಕೋಟಿ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟರೂ ಅದರ ಬಡ್ಡಿಯಲ್ಲೇ ಕಾರು-ಬೈಕ್, ಮನೆಗಳನ್ನು ಕೊಡಬಹುದು. ಒಂದು ಸ್ಕೀಮ್‌ನಲ್ಲಿ ಸೇರಿದರೆ ಅದರಲ್ಲಿ 20ರಿಂದ 25 ಸಾವಿರ ಮಂದಿ ಇದ್ದರೆ, ಪ್ರತಿ ತಿಂಗಳು ಅತಿಹೆಚ್ಚು 50 ಬಹುಮಾನವೆಂದರೂ 24 ತಿಂಗಳಲ್ಲಿ 1200 ಜನರಿಗೆ ಕಾರು-ಚಿನ್ನದ ಉಂಗುರ, ಫ್ಲ್ಯಾಟ್ ಕೊಡುತ್ತಾರೆ ಅಂದಿಟ್ಟುಕೊಳ್ಳೋಣ. ಹಾಗಾದರೆ, ಉಳಿದ 23 ಸಾವಿರ ಜನರು ಕಟ್ಟುವ ಹಣಕ್ಕೆ ಯಾವುದೇ ಗಿಫ್ಟ್ ಗ್ಯಾರಂಟಿ ಇಲ್ಲ ಎನ್ನುವುದನ್ನು ಈ ಎಲ್ಲ ಸ್ಕೀಮ್‌ಗಳಲ್ಲಿ ಗಮನಿಸಬಹುದಾದ ಸತ್ಯ. ಈಗ ಹುಟ್ಟಿದ ಕಂಪೆನಿ ಹೆಡ್ ಆಫೀಸ್ ಇಷ್ಟು ದೊಡ್ಡದು ಉಂಟು; ಕರ್ನಾಟಕದಲ್ಲಿ 15 ಬ್ರಾಂಚ್ ಉಂಟು; 10 ಸಾವಿರ ಸ್ಟಾಫ್ ಇದ್ದಾರೆ ಎಂದೆಲ್ಲ ತೋರಿಸುತ್ತಾರೆ; ಎಲ್ಲವೂ ನಿಜವೆಂದೇ ಒಪ್ಪಿಕೊಳ್ಳೋಣ. ಎರಡು ವರ್ಷ ಬಿಟ್ಟು ನೀವು ಕಟ್ಟುತ್ತಿರುವ 24 ಸಾವಿರ ಹಣ ವಾಪಾಸ್ ಬರಬೇಕು ಎನ್ನುವ ಸಮಯದಲ್ಲಿ ಇವುಗಳ ಕಥೆ ಏನಾಗಿರಬಹುದು ಎಂಬುದನ್ನು ಇಂಥಹ ಸ್ಕೀಮ್‌ಗಳಿಗೆ ಸೇರಿಕೊಂಡಿರುವ ಸದಸ್ಯರು ಯೋಚಿಸಬೇಕು. ಆ ಮೂಲಕ ಜನರು ಜಾಗೃತರಾಗಬೇಕಿದೆ.
ಸ್ಕೀಮ್‌ಗಳಿಗೆ ಆರ್‌ಬಿಐ ಅನುಮತಿ ಇದೆಯೇ?
ಸಾಮಾನ್ಯವಾಗಿ ಯಾವುದೇ ಒಂದು ಹಣಕಾಸಿನ ವ್ಯವಹಾರ ನಡೆಯಬೇಕಾದರೆ ಅದಕ್ಕೆ ಪೂರಕವಾದ ದಾಖಲೆಗಳು ಬೇಕು. ಅದರಲ್ಲಿಯೂ ಯಾವುದೇ ಹಣಕಾಸಿನ ವ್ಯವಹಾರ ನಡೆಸಬೇಕಾದರೆ ಅದರಲ್ಲಿಯೂ ಕೋಟ್ಯಂತರ ವಹಿವಾಟು ಮಾಡಬೇಕಾದರೆ, ಆರ್‌ಬಿಐನಿಂದ ಅನುಮತಿಯನ್ನು ಪಡೆದುಕೊಂಡಿರಬೇಕು ಬ್ಯಾಂಕ್‌ನಲ್ಲಿ ಒಂದು ಅಕೌಂಟ್ ತೆರೆಯಬೇಕಿದ್ದರೂ ಫೋಟೊ ಕೊಡಬೇಕು; ಸಹಿ ಹಾಕಬೇಕು ಹೀಗೆ ಹತ್ತಾರು ಕಾನೂನಾತ್ಮಕ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ, ಎಷ್ಟು ಇಂಥಹ ಸ್ಕೀಮ್ ಕಂಪೆನಿಗಳು ಆರ್‌ಬಿಐ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆದು ಈ ರೀತಿಯ ಸ್ಕೀಮ್‌ಗಳನ್ನು ತೆಗೆದುಕೊಂಡು ಹಣ ವ್ಯವಹಾರ ನಡೆಸುತ್ತಿದೆ ಎನ್ನುವುದನ್ನು ಜನರ ಮುಂದಿಡಬೇಕು ಎಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
ಆದರೆ, ವರ್ಷಕ್ಕೆ 12 ಸಾವಿರ ಅಥವಾ 24 ಸಾವಿರ ರೂ. ಪಾವತಿಸುವ ಈ ರೀತಿಯ ಸ್ಕೀಮ್‌ಗಳಿಗೆ ಯಾವುದೇ ದಾಖಲಾತಿ ನೀಡುವ ಅಗತ್ಯವಿಲ್ಲ. ನಿಮ್ಮ ಹೆಸರು, ಮೊಬೈಲ್ ನಂಬರ್ ಇದ್ದರೆ ಸಾಕು; ಗೂಗಲ್ ಪೇ ಮೂಲಕ ಹಣ ಪಾವತಿಸಿದ ಮೇಲೆ ಕೇವಲ ಒಂದು ನೋಂದಣಿ ನಂಬರ್ ಇರುವ ಕಾರ್ಡ್ ಮಾತ್ರ ಬರುತ್ತದೆ. ಅದು ಬಿಟ್ಟರೆ ನೀವು ಕಟ್ಟುವ ತಿಂಗಳ ಹಣಕ್ಕೆ ಯಾವುದೇ ಕಾನೂನು ರೀತಿಯ ದಾಖಲೆಗಳು ಅಥವಾ ಗ್ಯಾರಂಟಿ ಇರುವುದಿಲ್ಲ. ವಾಟ್ಸಾಪ್ ಗ್ರೂಪ್‌ಗಳನ್ನು ಕ್ರೀಯೇಟ್ ಮಾಡಿಕೊಂಡು ಪ್ರತಿ ತಿಂಗಳು ಹಣ ಪಾವತಿಸುತ್ತಾ ಹೋಗಬೇಕು. ಆ ಸದಸ್ಯರ ಗ್ರೂಪ್‌ಗಳಲ್ಲಿ ಅದರ ಎಂಡಿ ಮಾತನಾಡಿರುವುದು, ಫ್ಲ್ಯಾಟ್ ಕಟ್ಟುವುದಕ್ಕೆ ಜಾಗ ನೋಡುತ್ತಿರುವುದು, ಯಾವುದೋ ಒಂದು ಖಾಲಿ ಜಾಗದಲ್ಲಿ ಮಣ್ಣು ತೆಗೆಯುತ್ತಿರುವುದು ಅಥವಾ ಒಂದಷ್ಟು ಜನರು ಕಾರು, ಗೋಲ್ಡ್ ಗೆದ್ದಿರುವುದಾಗಿ ಹೇಳಿಕೊಳ್ಳುವ ವಿಡಿಯೋಗಳನ್ನು ಹಾಕಿ ನಿಮ್ಮ ನಂಬಿಕೆಯನ್ನು ಮುಂದಿನ 24 ತಿಂಗಳು ಉಳಿಸಿಕೊಳ್ಳುವುದಕ್ಕೆ ಏನೆಲ್ಲ ಗಿಮಿಕ್ ಮಾಡಬೇಕೋ ಅದನ್ನೆಲ್ಲ ಮಾಡುತ್ತ ಹೋಗುತ್ತವೆ. ಇಂಥಹ ಗಿಮಿಕ್‌ಗಳಿಗಾಗಿ ನೀವು ಕಟ್ಟುವ ಹಣವನ್ನೇ ಖರ್ಚು ಮಾಡುತ್ತಿವೆ ಎಂಬುದನ್ನೂ ಮರೆಯಬೇಡಿ.
ಒಂದು ಮಾಹಿತಿ ಪ್ರಕಾರ, ಈ ಸ್ಕೀಮ್ ಕಂಪೆನಿಗಳು ಜನರಿಂದ ಸಂಗ್ರಹಿಸುವ ಹಣದಲ್ಲಿ ದೊಡ್ಡ ಪಾಲು ಪ್ರಚಾರಕ್ಕೆ ಖರ್ಚು ಮಾಡುತ್ತಿವೆ ಎನ್ನುವ ಆರೋಪವೂ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 10ಕ್ಕೂ ಹೆಚ್ಚು ಇಂಥಹ ಕಂಪೆನಿಗಳು ಲಕ್ಷಾಂತರ ಜನರಿಂದ ಕೋಟ್ಯಂತರ ಹಣ ಸಂಗ್ರಹಿಸಿರುವಾಗ ಅದಕ್ಕೆ ಸಂಬಂಧಪಟ್ಟ ಸರ್ಕಾರದ ಇಲಾಖೆಗಳಾದ ಆದಾಯ ತೆರಿಗೆ, ಜಿಎಸ್‌ಟಿ, ಜಾರಿ ನಿರ್ದೇಶನಾಲಯದಂಥ ಇಲಾಖೆಗಳು ಏಕೆ ಕಣ್ಣು ಮುಚ್ಚಿ ಕುಳಿತಿವೆ ಎನ್ನುವ ಸಂಶಯವೂ ಮೂಡುತ್ತಿದೆ. ಈ ರೀತಿ ಜನರಿಂದ ಪ್ರತಿ ತಿಂಗಳು ಕೋಟ್ಯಂತರ ಹಣ ಸಂಗ್ರಹವಾಗುತ್ತಿರಬೇಕಾದರೆ ಅದಕ್ಕೆ ಜಿಎಸ್‌ಟಿ ಅನ್ವಯವಾಗುವುದಿಲ್ಲವೇ? ಇಂಥಹ ಸ್ಕೀಮ್‌ಗಳ ಬಗ್ಗೆ ದೊಡ್ಡ ಅಭಿಮಾನಿಗಳನ್ನು ಹೊಂದಿರುವ ವ್ಯಕ್ತಿಗಳೇ ಕ್ಯಾಮೆರಾ ಮುಂದೆ ಬಂದು "ಇದೊಂದು ಬೆಸ್ಟ್ ಸ್ಕೀಮ್, ಹಣ ಹೂಡಿಕೆ ಮಾಡಿ, ಕಾರು ಗೆಲ್ಲಿ" ಎನ್ನುತ್ತಿರುವ ಬಗ್ಗೆಯೂ ಜನರು ಈಗ ಮಾತನಾಡಿಕೊಳ್ಳುತ್ತಿದ್ದಾರೆ.
ಹೀಗಿರುವಾಗ, ಯಾವುದೇ ಸ್ಕೀಮ್‌ಗಳು ಜನರಿಂದ ಈ ರೀತಿ ಕೋಟ್ಯಂತರ ಹಣ ಸಂಗ್ರಹಿಸಿ ಅವರಿಗೆ ಕೇವಲ 24 ಸಾವಿರ ರೂಪಾಯಿಗೆ ಮನೆ-ಕಾರು-ಚಿನ್ನ ಕೊಡುವುದಾದರೆ ಯಾವುದೇ ತಕರಾರು ಇಲ್ಲ. ಆದರೆ, ಜನರಿಗೆ ಮೋಸ ಮಾಡುವ ಅಥವಾ ಸಂಶಯ ಹುಟ್ಟಿಸುವಂಥಹ ಯಾವುದೇ ಸ್ಕೀಮ್‌ಗಳ ಮೇಲೆ ಜಿಲ್ಲಾಡಳಿತ ಇರಬಹುದು ಅಥವಾ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಾನೂನಡಿ ತನಿಖೆ ಮಾಡಬೇಕೆಂದು ಡ್ರೀಮ್ ಡೀಲ್ ಕಂಪೆನಿಯ ಡ್ರಾ ಪ್ರಕರಣದ ಬಳಿಕ ಅನೇಕ ಸಾಮಾಜಿಕ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಆ ಮೂಲಕ ಹಣ ಕಟ್ಟಿದವರ ಪರವಾಗಿ ಹೋರಾಡುವುದಕ್ಕೆ ಮುಂದಾಗಿರುವುದು ಕೂಡ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನಮ್ಮ ಜನಪ್ರತಿನಿಧಿಗಳು ಕೂಡ ಈ ವಿಚಾರದಲ್ಲಿ ಜನರ ಪರವಾಗಿ ಹಾಗೂ ಈಗಾಗಲೇ ಇಂಥಹ ಸ್ಕೀಮ್‌ಗಳಿಗೆ ಸಾವಿರಾರು ಹಣವನ್ನು ಕಟ್ಟಿ ಆತಂಕಕ್ಕೆ ಒಳಗಾಗಿರುವ ಲಕ್ಷಾಂತರ ಜನರ ನೆರವಿಗೆ ಧಾವಿಸಬೇಕಿದೆ. ಆ ಮೂಲಕ ಯಾವುದೇ ಮೋಸದ ಜಾಲದ ಬಗ್ಗೆ ಎಚ್ಚರಿಸುವ ಕೆಲಸಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎನ್ನುವುದು ಈಗಾಗಲೇ ಇಂಥಹ ಸ್ಕೀಮ್‌ಗಳಲ್ಲಿ ಹಣ ಹೂಡಿಕೆ ಮಾಡಿದವರ ಆಗ್ರಹವಾಗಿದೆ. ಆ ಮೂಲಕ ಕಾನೂನಿನಡಿ ಈ ರೀತಿಯ ಸ್ಕೀಮ್‌ಗಳಲ್ಲಿ ತೊಡಗಿಸಿಕೊಂಡಿರುವ ಕಂಪೆನಿಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗಬಾರದ್ದು ಎನ್ನುವ ಕಳಕಳಿ ಕೂಡ ಇದೆ. ಯಾವುದೇ ಒಂದು ಹಣಕಾಸಿನ ವ್ಯವಹಾರದಲ್ಲಿ ಜನರ ನಂಬಿಕೆಯೇ ಪ್ರಧಾನ. ಹೀಗಾಗಿ, ಜನರ ನಂಬಿಕೆಯನ್ನು ಉಳಿಸುವ ಹಾಗೂ ಅದಕ್ಕೆ ಪೂರಕವಾಗುವ ಕ್ರಮಗಳೊಂದಿಗೆ ಮತ್ತಷ್ಟು ಪಾರದರ್ಶಕತೆಗಳನ್ನು ಇಂಥಹ ಕಂಪೆನಿಗಳು ಕೂಡ ಮಾಡಬೇಕು. ಇಲ್ಲದೆ ಹೋದರೆ ಮತ್ತಷ್ಟು ಗೊಂದಲಗಳಿಗೆ ಕಾರಣವಾಗಬಹುದು.