IPL 2026: ಐಪಿಎಲ್ RAPP ಪಟ್ಟಿ ಪ್ರಕಟ: 1,307 ಆಟಗಾರರಿಗೆ ಸ್ಥಾನ

Jan 28, 2026 - 13:16
IPL 2026: ಐಪಿಎಲ್ RAPP ಪಟ್ಟಿ ಪ್ರಕಟ: 1,307 ಆಟಗಾರರಿಗೆ ಸ್ಥಾನ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026)​ ಮಿನಿ ಹರಾಜಿಗಾಗಿ ಬರೋಬ್ಬರಿ 1390 ಆಟಗಾರರು ಹೆಸರು ನೊಂದಾಯಿಸಿಕೊಂಡಿದ್ದರು. ಈ 1390 ಆಟಗಾರರಲ್ಲಿ ಹರಾಜಿಗೆ ಆಯ್ಕೆಯಾಗಿದ್ದು ಕೇವಲ 359 ಆಟಗಾರರು ಮಾತ್ರ. ಇವರಲ್ಲಿ 77 ಆಟಗಾರರನ್ನು ಮಾತ್ರ ಖರೀದಿಸಲಾಗಿತ್ತು. ಅಂದರೆ ಬರೋಬ್ಬರಿ 1313 ಆಟಗಾರರು ಅವಕಾಶ ವಂಚಿತರಾಗಿದ್ದರು. ಇದೀಗ ಅವಕಾಶ ವಂಚಿತರಾದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಅದು ಕೂಡ RAPP ಲಿಸ್ಟ್​ನಲ್ಲಿ ಎಂಬುದು ವಿಶೇಷ

ಏನಿದು RAPP ಲಿಸ್ಟ್​?
RAPP ಲಿಸ್ಟ್ ಎಂದರೆ ರಿಜಿಸ್ಟರ್ ಅವೇಲೇಬಲ್ ಪ್ಲೇಯರ್ ಪೂಲ್ (RAPP). ಐಪಿಎಲ್​ಗಾಗಿ ನೋಂದಾಯಿತ ಲಭ್ಯವಿರುವ ಆಟಗಾರರ ಪಟ್ಟಿ. ಬದಲಿ ಆಟಗಾರರ ಆಯ್ಕೆಗಾಗಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಂದರೆ ಯಾವುದಾದರೂ ಆಟಗಾರರು ಐಪಿಎಲ್​ನಿಂದ ಹೊರಗುಳಿದರೆ, RAPP ಲಿಸ್ಟ್​ನಲ್ಲಿರುವ ಆಟಗಾರರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಅವರು ಹರಾಜಿಗಾಗಿ ನೊಂದಾಯಿಸಿದ್ದ ಮೂಲ ಬೆಲೆಗಿಂತ ಕಡಿಮೆ ಪಾವತಿಸುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.

ಅದರಂತೆ ಇದೀಗ 1307 ಆಟಗಾರರ ಹೆಸರನ್ನು ಹೊಂದಿರುವ RAPP ಲಿಸ್ಟ್ ಅನ್ನು ಬಿಸಿಸಿಐ ಸಿದ್ಧಪಡಿಸಿದೆ. ಹೀಗಾಗಿ ಈ ಪಟ್ಟಿಯಲ್ಲಿರುವ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

RAPP ಲಿಸ್ಟ್​ ನಿಯಮಗಳು:
ಫ್ರಾಂಚೈಸಿಗಳು ಈ ನಿರ್ದಿಷ್ಟ ಪೂಲ್‌ನಿಂದ ಬದಲಿ ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು. ಉದಾಹರಣೆಗೆ, ಗಾಯಗೊಂಡ ತಂಡದ ಸದಸ್ಯರಿಗೆ ಬದಲಿಗೆ RAPP ಲಿಸ್ಟ್​ನಲ್ಲಿರುವ ಆಟಗಾರರನ್ನು ಆಯ್ಕೆ ಮಾಡಬೇಕು.
ಒಬ್ಬ ಆಟಗಾರನನ್ನು ಅವರ ಮೂಲ ಹರಾಜಿನ ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಸಹಿ ಮಾಡುವಂತಿಲ್ಲ. ಉದಾಹರಣೆಗೆ, ಸ್ಟೀವ್ ಸ್ಮಿತ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಅವರನ್ನು ಅದಕ್ಕಿಂತ ಕಡಿಮೆ ಮೊತ್ತಕ್ಕೆ ಬದಲಿ ಆಟಗಾರನಾಗಿ ಆಯ್ಕೆ ಮಾಡುವಂತಿಲ್ಲ.
 RAPP ಲಿಸ್ಟ್​ನಲ್ಲಿರುವ ಆಟಗಾರರನ್ನು ನೆಟ್ ಬೌಲರ್‌ಗಳಾಗಿ ನೇಮಿಸಿಕೊಳ್ಳಬಹುದು. ಆದರೆ ಬೇರೆ ಯಾವುದಾದರೂ ಫ್ರಾಂಚೈಸಿ ಆ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಲು ಬಯಸಿದರೆ ತಕ್ಷಣವೇ ಬಿಡುಗಡೆ ಮಾಡಬೇಕಾಗುತ್ತದೆ.
RAPP ಲಿಸ್ಟ್​ನಲ್ಲಿ ಸ್ಥಾನ ಪಡೆದಿರುವ ಪ್ರಮುಖ ಆಟಗಾರರು:
2 ಕೋಟಿ ರೂ. ಮೂಲ ಬೆಲೆ: ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್), ಡೆವೊನ್ ಕಾನ್ವೇ (ನ್ಯೂಝಿಲೆಂಡ್), ಜೇಕ್ ಫ್ರೇಸರ್-ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ರೀಸ್ ಟೋಪ್ಲಿ (ಇಂಗ್ಲೆಂಡ್), ಮತ್ತು ಜೇಮೀ ಸ್ಮಿತ್ (ಇಂಗ್ಲೆಂಡ್).
1.5 ಕೋಟಿ ರೂ. ಮೂಲ ಬೆಲೆ: ರಹಮಾನುಲ್ಲಾ ಗುರ್ಬಾಝ್ (ಅಫ್ಘಾನಿಸ್ತಾನ್), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಮತ್ತು ಟಿಮ್ ಸೈಫರ್ಟ್ (ನ್ಯೂಝಿಲೆಂಡ್).
1 ಕೋಟಿ ರೂ. ಮೂಲ ಬೆಲೆ: ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಫಝಲ್​ಹಕ್ ಫಾರೂಕಿ (ಅಫ್ಘಾನಿಸ್ತಾನ್).

RAPP ಲಿಸ್ಟ್​ನಲ್ಲಿರುವ ಭಾರತದ ಪ್ರಮುಖ ಆಟಗಾರರು:
ಉಮೇಶ್ ಯಾದವ್ , ನವದೀಪ್ ಸೈನಿ , ಚೇತನ್ ಸಕರಿಯಾ, ಸಂದೀಪ್ ವಾರಿಯರ್, ಮಾಯಾಂಕ್ ಅಗರ್ವಾಲ್ , ದೀಪಕ್ ಹೂಡಾ , ಕೆ.ಎಸ್. ಭರತ್, ಯಶ್ ಧುಲ್, ಅಭಿನವ್ ಮನೋಹರ್, ಅಥರ್ವ ಟೈಡೆ,  ಮನನ್ ವೋಹ್ರಾ, ಮಹಿಪಾಲ್ ಲೋಮ್ರೋರ್ , ಕಮಲೇಶ್ ನಾಗರಕೋಟಿ ಮತ್ತು ರಾಜವರ್ಧನ್ ಹಂಗರ್ಗೇಕರ್.