ಸತತ 5ನೇ ಗೆಲುವು: ಪ್ಲೇಆಫ್‌ಗೆ ಎಂಟ್ರಿಕೊಟ್ಟ ಆರ್​ಸಿಬಿ

Jan 20, 2026 - 14:51
ಸತತ 5ನೇ ಗೆಲುವು: ಪ್ಲೇಆಫ್‌ಗೆ ಎಂಟ್ರಿಕೊಟ್ಟ ಆರ್​ಸಿಬಿ

ವಡೋದರಾದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸತತ ಗೆಲುವಿನ ಮೂಲಕ ಪ್ಲೇಆಫ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಗುಜರಾತ್​ ಜೈಂಟ್ಸ್​ನ ತವರು ನೆಲದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ತಂಡದಿಂದ ಹೋರಾಟದ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಏಕೆಂದರೆ ಈ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗುಜರಾತ್ ಸೇಡು ತೀರಿಸಿಕೊಳ್ಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆರ್​ಸಿಬಿ ಸಾಂಘಿಕ ದಾಳಿಗೆ ತತ್ತರಿಸಿದ ಗುಜರಾತ್ ಬರೋಬ್ಬರಿ 61 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಮತ್ತೆ ಕಳಪೆ ಆರಂಭ ಸಿಕ್ಕಿತು. ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ 1 ರನ್​ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜಾರ್ಜಿಯಾ ವೋಲ್ ಕೂಡ ಒಂದೇ ಒಂದು ರನ್​ಗೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಆರ್​ಸಿಬಿ 9 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಜೊತೆಯಾದ ಸ್ಮೃತಿ ಹಾಗೂ ಗೌತಮಿ ತಂಡವನ್ನು 50 ರನ್​ಗಳ ಗಡಿ ದಾಟಿಸಿದರು. ಕಳೆದ ಪಂದ್ಯದಲ್ಲಿ 96 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಸ್ಮೃತಿ ಈ ಪಂದ್ಯದಲ್ಲಿ 26 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ಸ್ಮೃತಿ ವಿಕೆಟ್ ಬಳಿಕ ಗೌತಮಿ ನಾಯಕ್ ಜೊತೆಯಾದ ರಿಚಾ ಘೋಷ್ ಸ್ಕೋರ್ ಬೋರ್ಡ್​ ವೇಗವನ್ನು ಹೆಚ್ಚಿಸಿದರು. ಈ ಜೋಡಿ 68 ರನ್​ಗಳ ಜೊತೆಯಾಟವನ್ನಾಡಿ ತಂಡವನ್ನು 100 ರನ್​ಗಳ ಗಡಿ ದಾಟಿಸಿತು. ಇದೇ ವೇಳೆ ಗೌತಮಿ ನಾಯಕ್ ತಮ್ಮ ಚೊಚ್ಚಲ ಡಬ್ಲ್ಯುಪಿಎಲ್ ಅರ್ಧಶತಕವನ್ನು ಪೂರ್ಣಗೊಳಿಸುದರು. ಈ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅರ್ಧಶತಕ ಬಾರಿಸಿದ ಮೊದಲ ಅನ್​ಕ್ಯಾಪ್ಡ್ ಆಟಗಾರ್ತಿ ಎಂಬ ಇತಿಹಾಸವನ್ನು ನಿರ್ಮಿಸಿದರು.
ಗೌತಮಿ ನಾಯಕ್ 73 ರನ್‌ಗಳ ಇನ್ನಿಂಗ್ಸ್‌ ಆಡಿದರೆ, ರಿಚಾ 27 ರನ್ ಬಾರಿಸಿದರು. ಆ ಬಳಿಕ ಬಂದವರೂ ಕೂಡ ಸಹಾಯಕ ಇನ್ನಿಂಗ್ಸ್ ಆಡಿದರು. ಹೀಗಾಗಿ ಆರ್​ಸಿಬಿ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 178 ರನ್ ಗಳಿಸಿತು. ಗುಜರಾತ್ ಪರ ಕಾಶ್ವಿ ಗೌತಮ್ ಮತ್ತು ಆಶ್ಲೀ ಗಾರ್ಡ್ನರ್ ತಲಾ ಎರಡು ವಿಕೆಟ್ ಪಡೆದರೆ, ರೇಣುಕಾ ಸಿಂಗ್ ಮತ್ತು ಸೋಫಿ ಡಿವೈನ್ ಕೂಡ ತಲಾ ಒಂದು ವಿಕೆಟ್ ಪಡೆದರು.