ಮಂಗಳೂರು: ಹೊಸ ವರ್ಷಾಚರಣೆ: ಪೊಲೀಸ್ ಆಯುಕ್ತರಿಂದ ಮಾರ್ಗಸೂಚಿ ಪ್ರಕಟ
ಹೊಸ ವರ್ಷಾಚರಣೆಗೆ ಮಂಗಳೂರಿನಲ್ಲಿ ಈ ಎಲ್ಲ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ
ಹೊಸ ವರ್ಷಾಚರಣೆಗೆ ಮಂಗಳೂರಿನಲ್ಲಿ ಈ ಎಲ್ಲ ನಿಯಮಗಳನ್ನು ಪಾಲಿಸುವುದು ಕಡ್ಡಾಯ
ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ
ಮಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೂ ಕಟ್ಟು ನಿಟ್ಟಿನ ಮಾರ್ಗಸೂಚಿಯನ್ನು ಜಾರಿಗೊಳಿಸಿ ಆಯುಕ್ತರಾದ ಸುಧೀರ್ ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.
ಆ ಪ್ರಕಾರ, ಹೊಸ ವರ್ಷಾಚರಣೆ ಆಯೋಜಿಸುವ ಎಲ್ಲ ಹೋಟೆಲ್, ರೆಸ್ಟೊರೆಂಟ್, ಕ್ಲಬ್, ರೆಸಾರ್ಟ್‌ಗಳು ಹಾಗೂ ಇತರೆ ಸಂಸ್ಥೆಗಳು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ಎಲ್ಲರು ಕೂಡ ಡಿ.23ರ ಸಂಜೆ 5ಗಂಟೆಯೊಳಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಎಲ್ಲ ವರ್ಷಾಚರಣೆ ಕಾರ್ಯಕ್ರಮಗಳನ್ನು ಆ ದಿನ ಮಧ್ಯರಾತ್ರಿ 12.30ರೊಳಗೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಇನ್ನು ಪೂರ್ವಾನುಮತಿ ಇಲ್ಲದೆ ಹೊಸ ವರ್ಷಾಚರಣೆಗಳನ್ನು ಆಯೋಜಿಸುವುದಕ್ಕೆ ಯಾವುದೇ ಅನುಮತಿ ನೀಡಲಾಗುವುದಿಲ್ಲ. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಧ್ವನಿಮುದ್ರಣ ವ್ಯವಸ್ಥೆಗಳು, ಲೌಡ್ ಸ್ಪೀಕರ್‌ಗಳನ್ನು ಬಳಸುವುದಕ್ಕೆ ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು. ಅಲ್ಲದೆ, ಡಿಜೆ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಅಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನಗಳು, ಜೂಜು ಹಾಗೂ ಇತರೆ ಅನೈತಿಕ ಚಟುವಟಿಕೆಗಳನ್ನು ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮದ್ಯ ಮಾರಾಟ ಮತ್ತು ವಿತರಣೆಗೆ ಸ್ಥಳೀಯ ಅಬಕಾರಿ ಇಲಾಖೆಯಿಂದ ಲಿಖಿತ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು.
ಹೊಸವರ್ಷಾಚರಣೆಗೆ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ಪಾರ್ಕ್‌ಗಳು, ಕ್ರೀಡಾಂಗಣ, ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ವಿದ್ಯಾರ್ಥಿಗಳು ಅಥವಾ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ ಕಿಡಿಗೇಡಿತನವನ್ನು ಪ್ರದರ್ಶನ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕಾರ್ಯಕ್ರಮದ ಆಯೋಜಕರು ಅಗತ್ಯವಿರುವ ಸುರಕ್ಷತಾ ಕ್ರಮಗಳೊಂದಿಗೆ ಅಗ್ನಿಶಾಮಕ ಸಾಧನ, ತುರ್ತು ವೈದ್ಯಕೀಯ ವಾಹನ ಹಾಗೂ ಇತರೆ ಭದ್ರತಾ ಕ್ರಮಗಳನ್ನು ಸಂಯೋಜಿಸಿಕೊಂಡಿರಬೇಕು. ಅಲ್ಲದೆ, ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗದಂತೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು.
ಹೊಸ ವರ್ಷಾಚರಣೆ ನಡೆಸುವ ಹೋಟೆಲ್, ಕ್ಲಬ್ ಅಥವಾ ವಿಶೇಷ ಪಾರ್ಟಿ ನಡೆಸುವ ವ್ಯವಸ್ಥಾಪಕರು ಕಾರ್ಯಕ್ರಮಗಳಲ್ಲಿ ಮದ್ಯವಿತರಣೆ ವ್ಯವಸ್ಥೆ ಮಾಡಿಕೊಂಡಿದ್ದಲ್ಲಿ 18 ವರ್ಷದ ಕೆಳಗಿನ ಅಪ್ರಾಪ್ತರಿಗೆ ಅಂಥಹ ಕಾರ್ಯಕ್ರಮಗಳಿಗೆ ಪ್ರವೇಶ ನಿರ್ಬಂದಿಸಿರಬೇಕು.
ಸಂಭ್ರಮಾಚರಣೆ ಹೆಸರಿನಲ್ಲಿ ಮಹಿಳೆಯರು, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಕಿರುಕುಳ ನೀಡುವುದು ಹಾಗೂ ಅಶ್ಲೀಲ ಚಟುವಟಿಕೆಗಳನ್ನು ತಡೆ ಹಿಡಿಯಲು ವಿಶೇಷ ಕಾರ್ಯಪಡೆ ನಿಯೋಜಿಸಲಾಗುತ್ತದೆ. ಅಲ್ಲದೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ನಿಗಾ ವಹಿಸುವುದಕ್ಕೆ ಸಂಚಾರ ಪೊಲೀಸರು ಹಾಗೂ ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆ ನಗರದ ಎಲ್ಲ ಪ್ರದೇಶಗಳಲ್ಲಿ ಕಾರ್ಯಾಚರಣೆಯಲ್ಲಿರುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ವಾಹನವನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಸಮುದ್ರ ಬದಿ ಅಥವಾ ಬೀಚ್‌ಗಳಲ್ಲಿಯೂ ಮದ್ಯಪಾನ ಮಾಡುವುದು, ಅಶ್ಲೀಲ ಡ್ಯಾನ್ಸ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜತೆಗೆ ಹೊಸ ವರ್ಷಾಚರಣೆ ನೆಪದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸುವುದನ್ನು ಕೂಡ ನಿಷೇಧಿಸಲಾಗಿದೆ. ಈ ಮಾರ್ಗಸೂಚಿಯನ್ನು ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹೊರಡಿಸಲಾಗಿದ್ದು, ಎಲ್ಲ ನಾಗರಿಕರು ಹಾಗೂ ಕಾರ್ಯಕ್ರಮದ ಆಯೋಜಕರು ಪಾಲಿಸುವಂತೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮನವಿ ಮಾಡಿದ್ದಾರೆ.


