ಬಂಟ್ವಾಳದ ಇರಾಕೋಡಿಯಲ್ಲಿ ದುಷ್ಕರ್ಮಿಗಳಿಂದ ತಳವಾರು ದಾಳಿ ಮಾಡಿ ಯುವಕನ ಬರ್ಬರ ಹತ್ಯೆ !
ಬಂಟ್ವಾಳದ ಇರಾಕೋಡಿಯಲ್ಲಿ ಮರಳು ಸಾಗಿಸಿ ವಾಪಾಸ್ಸಾಗುತ್ತಿದ್ದ ಇಬ್ಬರು ಯುವಕರ ಮೇಲೆ ತಳವಾರಿನಿಂದ ಭೀಕರ ದಾಳಿ ನಡೆದಿದ್ದು, ರಹೀಂ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜತೆಗಿದ್ದ ಮತ್ತೊಬ್ಬರ ಮೇಲೂ ದಾಳಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕುರಿಯಾಳ ಸಮೀಪದ ಇರಾಕೋಡಿಯಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಳವಾರಿನಿಂದ ದಾಳಿ ಮಾಡಿ ಹತ್ಯೆಗೈದಿದ್ದಾರೆ.
ಮೃತ ವ್ಯಕ್ತಿಯನ್ನು ಕೊಳತ್ತಮಜಲು ನಿವಾಸಿ, ಪಿಕಪ್ ಚಾಲಕ ರಹೀಂ ಎಂದು ಗುರುತಿಸಲಾಗಿದೆ. ಇನ್ನು ರಹೀಂ ಜತೆಗಿದ್ದ ಯುವಕನ ಮೇಲೆಯೂ ದುಷ್ಕರ್ಮಿಗಳು ದಾಳಿ ಮಾಡಿದ್ದು, ಆತನ ಕೈಗೆ ಗಂಭೀರ ಗಾಯವಾಗಿದೆ. ಸದ್ಯ ಆತನನ್ನು ಬಂಟ್ವಾಳದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಹೀಂ ಅವರು ಪಿಕಪ್‌ನಲ್ಲಿ ಮರಳು ಸಾಗಿಸುತ್ತಿದ್ದು, ಮನೆಯೊಂದರ ಮುಂದೆ ಅನ್‌ಲೋಡ್ ಮಾಡಿ ವಾಪಾಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಯಾವ ಕಾರಣಕ್ಕೆ ಈ ದಾಳಿ ನಡೆದಿದೆ ಎನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ದೌಡಾಯಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.