ಮುಂಗಾರು ಪ್ರವೇಶದ ವೇಳೆ ದಕ್ಷಿಣ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಿಗೆ ಚಂಡ ಮಾರುತದ ಭೀತಿ !
ಮೂರು ಜಿಲ್ಲೆಗಳಲ್ಲಿ ನಾಲ್ಕು ದಿನ ಭಾರೀ ಮಳೆಯ ಸೂಚನೆ; ರೆಡ್ ಅಲರ್ಟ್ ಘೋಷಣೆ

ಮಂಗಳೂರು: ವಾಡಿಕೆಯಂತೆ ಕರ್ನಾಟಕದ ಕರಾವಳಿ ತೀರಕ್ಕೆ ಮುಂಗಾರು ಸಾಮಾನ್ಯವಾಗಿ ಜೂನ್ ಮೊದಲ ವಾರಕ್ಕೆ ಆಗಮನವಾಗುತ್ತದೆ. ಆದರೆ, ಈ ಬಾರಿ ವಾಯುಭಾರ ಕುಸಿತದ ಪರಿಣಾಮದಿಂದಾಗಿ 15 ದಿನಕ್ಕೂ ಮೊದಲೇ ಕರ್ನಾಟಕದ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಅದರಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದ್ದು, ಕೆಲವೆಡೆ ನೆರೆ ಪರಿಸ್ಥಿತಿ ಸೃಷ್ಟಿಯಾಗುವಷ್ಟು ವರ್ಷಧಾರೆಯಾಗಿದೆ.
ಹೀಗಿರುವಾಗ, ಇದೀಗ ಕರ್ನಾಟಕದ ಕರಾವಳಿ ತೀರಕ್ಕೆ ಚಂಡ ಮಾರುತದ ಭೀತಿ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಸೃಷ್ಟಿಯಾಗಿದ್ದು, ಅದು ಪ್ರಬಲಗೊಂಡರೆ ಚಂಡಮಾರುತವಾಗಿ ಬದಲಾಗುವ ಎಲ್ಲ ಮುನ್ಸೂಚನೆಯಿದೆ. ಅಂದರೆ, ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಕೇರಳ ತೀರದ ಮೂಲಕ ಮುಂಗಾರು ಮಳೆಯ ಪ್ರವೇಶವಾಗುವುದು ವಾಡಿಕೆ. ಆದರೆ, ಈ ಬಾರಿ ಮುಂಗಾರು ಮಾರುತ ಪ್ರವೇಶಕ್ಕೆ ಕೇವಲ ಒಂದು ವಾರ ಇರಬೇಕಾದರೆ ಅರಬ್ಬಿ ಸಮುದ್ರದಲ್ಲಿ ದಟ್ಟ ಮಾರುತ ಸೃಷ್ಟಿಯಾಗಿ ಚಂಡಮಾರುತದ ಲಕ್ಷಣ ಗೋಚರಿಸುತ್ತಿದೆ. ಸಾಮಾನ್ಯವಾಗಿ ಮುಂಗಾರು ಪ್ರವೇಶದ ವೇಳೆ ವಾಯುಭಾರ ಕುಸಿತದ ಪರಿಣಾಮ ಉಂಟಾದರೆ, ಅದು ಮಳೆಗಾಲದ ಋತುವಿನ ಏರುಪೇರಿಗೂ ಕಾರಣವಾಗುವ ಅಪಾಯವಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ಸದ್ಯದ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ದಕ್ಷಿಣ ಕೊಂಕಣ-ಗೋವಾ ಭಾಗದಲ್ಲಿ ಕೇಂದ್ರೀಕೃತವಾಗಿದೆ. ದಟ್ಟ ಮಾರುತಗಳು ಆವರಿಸಿಕೊಂಡಿರುವ ಕಾರಣ ಇದು ಹೆಚ್ಚು ಪ್ರಬಲಗೊಂಡು ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಕೇರಳ ಹಾಗೂ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಅದರ ಹಿನ್ನಲೆಯಲ್ಲಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮೇ 25ರಿಂದ ಮೇ 28ರವರೆಗೆ ರೆಡ್ ಅಲರ್ಟ್ ಕೂಡ ಘೋಷಿಸಲಾಗಿದ್ದು, ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಗಂಟೆಗೆ 45ರಿಂದ 65 ಕಿಮೀ. ವೇಗದಲ್ಲಿ ಬಲವಾದ ಗಾಳಿ ಬೀಳಸುವ ಅಪಾಯವಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಈ ನಡುವೆ ಕಡಲು ಕೂಡ ಹೆಚ್ಚು ಪ್ರಕ್ಷುಬ್ಧವಾಗುವ ಕಾರಣ ಅಲೆಗಳ ಅಬ್ಬರ ಜಾಸ್ತಿಯಾಗುವ ಅಪಾಯವಿದ್ದು, ನಾಗರಿಕರು ಕೂಡ ಸಮುದ್ರ ತೀರಕ್ಕೆ ಹೋಗಬಾರದೆಂದು ಎಚ್ಚರಿಸಲಾಗಿದೆ. ಒಟ್ಟಾರೆ, ಮುಂಗಾರು ಕರ್ನಾಟಕದ ಕರಾವಳಿ ತೀರಕ್ಕೆ ಪೂರ್ಣ ಪ್ರಮಾಣದಲ್ಲಿ ಅಪ್ಪಳಿಸುವ ಮೂಲಕ ಮಳೆಗಾಲದ ಋತು ಪ್ರಾರಂಭವಾಗುವುದಕ್ಕೂ ಮೊದಲೇ ಇದೀಗ ಅರಬ್ಬಿ ಸಮುದ್ರದ ಕಡೆಯಿಂದ ವಾಯುಭಾರ ಕುಸಿತ ಹಾಗೂ ಚಂಡಮಾರುತದ ಭೀತಿ ಎದುರಾಗಿದೆ.