ಮೋಹನ ಆಳ್ವರ ಅಮೃತ ಮಹೋತ್ಸವ: ರೂ.15 ಕೋಟಿ ವೆಚ್ಚದ ಸಮಾಜಮುಖಿ ಯೋಜನೆಗೆ ಚಿಂತನೆ
Mohan Alva 75th Birthday Celebrations: ಮೋಹನ ಆಳ್ವರ ಅಮೃತ ಮಹೋತ್ಸವದ ಹಿನ್ನೆಲೆ, ರೂ.15 ಕೋಟಿ ವೆಚ್ಚದ ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ.
ಮೂಡುಬಿದಿರೆ: ಶಿಕ್ಷಣ, ಆರೋಗ್ಯ, ಕಲೆ, ಸಂಸ್ಕೃತಿ ಹಾಗೂ ಸಮಾಜಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಡಾ.ಎಂ.ಮೋಹನ ಆಳ್ವರ 75ನೇ ವರ್ಷದ ಅಮೃತ ಮಹೋತ್ಸವವನ್ನು ಸಮಾಜಕ್ಕೆ ಶಾಶ್ವತ ಕೊಡುಗೆ ನೀಡುವ ಸೇವಾ ಕಾರ್ಯಗಳ ಮೂಲಕ ಆಚರಿಸಲು ಉದ್ದೇಶಿಸಲಾಗಿದೆ.
ಈ ನಿಟ್ಟಿನಲ್ಲಿ ಸುಮಾರು ರೂ.15 ಕೋಟಿ ವೆಚ್ಚದ ಸಮಾಜಮುಖಿ ಯೋಜನೆಗಳನ್ನು ರೂಪಿಸುವ ಚಿಂತನೆ ನಡೆಸಲಾಗಿದೆ. ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯ ಅಭಿವೃದ್ಧಿ, 10 ಸಾವಿರ ಮಂದಿಗೆ ಉಚಿತ ಡಯಾಲಿಸಿಸ್ ಮತ್ತು ವೃದ್ಧರ ಘನತೆಯ ಬದುಕಿಗೆ ನೆರವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಆಶಯ ಹೊಂದಲಾಗಿದೆ ಎಂದು ಉದ್ಯಮಿ ಶಶಿಧರ ಶೆಟ್ಟಿ ಬರೋಡ ತಿಳಿಸಿದರು.
ಡಾ.ಎಂ.ಮೋಹನ ಆಳ್ವ ಅಭಿನಂದನಾ ಸಮಿತಿ–2027ರ ಆಶ್ರಯದಲ್ಲಿ ಶನಿವಾರ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ನಡೆದ ಅಮೃತ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮೋಹನ ಆಳ್ವರು ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವೆಯ ಮೂಲಕ ಸಾವಿರಾರು ಜನರ ಬದುಕಿಗೆ ಆಸರೆಯಾಗಿದ್ದಾರೆ. ಅವರ ಸೇವಾ ಮನೋಭಾವ ಮತ್ತು ಸಮಾಜಮುಖಿ ಚಿಂತನೆ ಮುಂದಿನ ಪೀಳಿಗೆಗೂ ತಲುಪಬೇಕು. ಅಮೃತ ಮಹೋತ್ಸವವನ್ನು ಕೇವಲ ಅಭಿನಂದನೆ ಮತ್ತು ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾದ ಯೋಜನೆಗಳ ಮೂಲಕ ಅರ್ಥಪೂರ್ಣಗೊಳಿಸುವುದು ಸಮಿತಿಯ ಉದ್ದೇಶವಾಗಿದೆ. ಆಳ್ವರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗುರುದಕ್ಷಿಣೆ ಸಲ್ಲಿಸುವ ವಿನೂತನ ಪರಿಕಲ್ಪನೆಯಡಿ ನಿಧಿ ಸಂಗ್ರಹಿಸುವ ಚಿಂತನೆಯೂ ಇದೆ. ಸಂಗ್ರಹವಾಗುವ ನಿಧಿಯನ್ನು ಆರೋಗ್ಯ ಸೇವಾ ಯೋಜನೆಗಳಿಗೆ ವಿನಿಯೋಗಿಸುವ ಉದ್ದೇಶ ಹೊಂದಲಾಗಿದೆ.
ಸಮಾಜಕ್ಕೆ ಕೊಡುಗೆಯಾಗಲಿ ಅಮೃತ ಮಹೋತ್ಸವ: ಮೋಹನ ಆಳ್ವ
ತಮ್ಮ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಗೆ ಮುಂದಾಗಿರುವ ಆತ್ಮೀಯರು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಡಾ.ಎಂ.ಮೋಹನ ಆಳ್ವ ಕೃತಜ್ಞತೆ ಸಲ್ಲಿಸಿದರು. ತಮ್ಮ ಸಾಧನೆ ಕೇವಲ ವೈಯಕ್ತಿಕ ಪರಿಶ್ರಮದ ಫಲವಲ್ಲ. ಎಲ್ಲರ ಸಹಕಾರ, ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದಗಳಿಂದ ಸಾಧ್ಯವಾಗಿದೆ. ಜೀವನದ ಪ್ರತಿಕ್ಷಣವನ್ನೂ ಹೊಸತನ್ನು ಕಾಣುವ ಮತ್ತು ಒಳಿತನ್ನು ಬಯಸುವ ಆಶಯದೊಂದಿಗೆ ಕಳೆದಿದ್ದೇನೆ. ಅಮೃತ ಮಹೋತ್ಸವವು ಕೇವಲ ಜನ್ಮದಿನದ ಆಚರಣೆಯಾಗದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಹಾಗೂ ಉನ್ನತ ಜೀವನಮೌಲ್ಯಗಳನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಬೇಕು. ಯಾವುದೇ ವೈಭವ ಅಥವಾ ವಿಜೃಂಭಣೆಯ ಸಮಾರಂಭವನ್ನು ಬಯಸುವುದಿಲ್ಲ. ಬದಲಾಗಿ, ಸಮಾಜಕ್ಕೆ ಉಪಯುಕ್ತವಾಗುವ ಸೇವಾ ಕಾರ್ಯಗಳ ಮೂಲಕ ಈ ದಿನವನ್ನು ಸಾರ್ಥಕಗೊಳಿಸಬೇಕು. ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಗಳೇ ತನಗೆ ಅಮೂಲ್ಯ ಕೊಡುಗೆ ಎಂದು ಹೇಳಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಡಾ.ಮೋಹನ ಆಳ್ವರ ಕನಸುಗಳು ವಿಶಾಲವಾಗಿದ್ದು, ಅವುಗಳಿಗೆ ಎಲ್ಲರೂ ಒಗ್ಗೂಡಿ ಜೀವ ತುಂಬಬೇಕು. ಅವರ ಅಭಿನಂದನಾ ಕಾರ್ಯಕ್ರಮ ಮತ್ತು ಅಮೃತ ಮಹೋತ್ಸವವು ಕೇವಲ ಒಂದು ಸಮಾರಂಭಕ್ಕೆ ಸೀಮಿತವಾಗದೆ, ಸಮಾಜಕ್ಕೆ ಉಪಯುಕ್ತವಾದ ಸೇವಾ ಕಾರ್ಯವಾಗಿ ಹೊರಹೊಮ್ಮಲಿದೆ. ಈ ಸಾರ್ಥಕ ಕಾರ್ಯದಲ್ಲಿ ಪೇಜಾವರ ಮಠವು ಭಾಗಿಯಾಗುತ್ತಿರುವುದು ಸಂತಸದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ರೂ.1 ಲಕ್ಷ ಕೊಡುಗೆಯನ್ನು ಘೋಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಕಾಶ್ ಶೆಟ್ಟಿ ಬಂಜಾರ ಮಾತನಾಡಿ, ಕರಾವಳಿಯ ಹೆಮ್ಮೆಯ ಸಾಧಕರಾದ ಮೋಹನ ಆಳ್ವರ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿರುವುದು ಸೌಭಾಗ್ಯ ಎಂದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮೂಡುಬಿದಿರೆಯನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸುವಲ್ಲಿ ಮೋಹನ ಆಳ್ವರ ಕೊಡುಗೆ ಮಹತ್ವದ್ದಾಗಿದೆ. ಅವರ ಸಮಾಜಮುಖಿ ಬದುಕು ಮತ್ತು ನಿರಂತರ ಕ್ರಿಯಾಶೀಲತೆ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.
ಚಂದ್ರಹಾಸ ಶೆಟ್ಟಿ ಮಾತನಾಡಿ, ಮೋಹನ ಆಳ್ವರ ಸರಳ ವ್ಯಕ್ತಿತ್ವ ಮತ್ತು ಸೇವಾ ಮನೋಭಾವಕ್ಕೆ ಗೌರವ ಸಲ್ಲಿಸುವ ರೀತಿಯಲ್ಲಿ ಅಮೃತ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಯಾವುದೇ ದುಂದು ವೆಚ್ಚಕ್ಕೆ ಅವಕಾಶ ನೀಡದೆ, ಅವರ ಆಶಯದಂತೆ ಸಮಾಜಮುಖಿ ಕಾರ್ಯಗಳಿಗೆ ನಿಧಿ ಸಂಗ್ರಹಿಸಿ, ಎಲ್ಲ ಹಿತೈಷಿಗಳು ಮತ್ತು ಅಭಿಮಾನಿಗಳು ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಫೆ.13ರಂದು ಅಮೃತ ಮಹೋತ್ಸವ:
ಅಮೃತ ಮಹೋತ್ಸವವನ್ನು 2027ರ ಫೆಬ್ರವರಿ 13ರಂದು ಮೂಡುಬಿದಿರೆಯಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉದ್ಯಮಿ ಡಾ.ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಶಶಿಧರ ಶೆಟ್ಟಿ ಬರೋಡ ಮತ್ತು ಚಂದ್ರಹಾಸ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಆಯ್ಕೆಯಾದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ರಾಜೇಶ್ ನ್ಯಾಕ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕೃಷ್ಣ ಪಾಲೇಮರ್, ಬಿ ನಾಗರಾಜ ಶೆಟ್ಟಿ, ಕಟೀಲಿನ ಲಕ್ಷ್ಮಿ ನಾರಾಯಣ ಅಸ್ರಣ್ಣರು, ಎಂ.ಬಿ.ಪುರಾಣಿಕ್, ಶ್ರೀಪತಿ ಭಟ್, ಮೀನಾಕ್ಷಿ ಆಳ್ವ ಸೇರಿದಂತೆ ಸಮಾಜದ ಹಲವಾರು ಗಣ್ಯರು ಇದ್ದರು.