Sabarimala Temple: ಇಂದು ಸಂಜೆ ಶಬರಿಮಲೆ ದೇಗುಲದ ಬಾಗಿಲು ಓಪನ್
Sabarimala Temple: ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗರ್ಭಗುಡಿಯು ಇಂದು ಸಂಜೆ 5 ಗಂಟೆಗೆ ತೆರೆಯಲಿದೆ.
ಪಟ್ಟಣಂತಿಟ್ಟ: ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗರ್ಭಗುಡಿಯು ಇಂದು ಸಂಜೆ 5 ಗಂಟೆಗೆ ತೆರೆಯಲಿದೆ. ಮಲಯಾಳಂ ಮಾಸದ ವೃಶ್ಚಿಕಂನ ಮೊದಲ ದಿನವಾದ ಮಂಗಳವಾರದಿಂದ ತೀರ್ಥಯಾತ್ರೆ ಆರಂಭವಾಗಲಿದೆ.
ತಂತ್ರಿ ಕಂದರರು ಬ್ರಹ್ಮದತ್ತನ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಮೇಲ್ಸಂತಿ ಇಡಿ ಪ್ರಸಾದ್ ನಂಬೂದಿರಿ ಗರ್ಭಗುಡಿಯೊಳಗೆ ದೀಪ ಬೆಳಗಿಸಲಿದ್ದಾರೆ.
ಮೊದಲ ದಿನವಾದ ಇಂದು ಸುಮಾರು 30,000 ಭಕ್ತರ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರದಿಂದ ಪ್ರತಿದಿನ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯನ್ನು 80,000ಕ್ಕೆ ಸೀಮಿತಗೊಳಿಸಲಾಗಿದೆ.
ಡಿಸೆಂಬರ್ 27 ರವರೆಗೆ 'ಮಂಡಲ ಪೂಜೆ ಯಾತ್ರೆ' ನಡೆಯಲಿದೆ. ಡಿಸೆಂಬರ್ 30 ರಿಂದ 'ಮಕರವಿಳಕ್ಕು ಯಾತ್ರೆ' ಶುರುವಾಗಲಿದೆ.
ಭಕ್ತರಿಗೆ ನೆರವಾಗುವ ಸಲುವಾಗಿ ಆರೋಗ್ಯ ಕೇಂದ್ರಗಳಲ್ಲಿ, ಸಾಕಷ್ಟು ಔಷಧಿಗಳ ದಾಸ್ತಾನು ಇರುವಂತೆ, ಆರೋಗ್ಯ ಇಲಾಖೆಗೆ ಸರ್ಕಾರವು ಸೂಚಿಸಿದೆ.
ಮೊದಲ ಬಾರಿಗೆ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಎಲ್‌ಐಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಯಾತ್ರಿಕರ ವಿಮೆ ಯೋಜನೆಯನ್ನು ಪರಿಚಯಿಸಿದೆ.
ಯಾತ್ರೆಯ ಸಮಯದಲ್ಲಿ ಭಕ್ತರು ಮೃತಪಟ್ಟರೆ, ರೂ.2 ಲಕ್ಷ ಪರಿಹಾರ ನೀಡಲಾಗುತ್ತದೆ. ವರ್ಚುವಲ್ ಕ್ಯೂ ಹಾಗೂ ಸ್ಪಾಟ್ ಬುಕಿಂಗ್ ವ್ಯವಸ್ಥೆಗಳ ಮೂಲಕ ಸ್ಲಾಟ್‌ಗಳನ್ನು ಬುಕ್ ಮಾಡುವ ಯಾತ್ರಿಕರಿಗೆ ಈ ವಿಮೆ ರಕ್ಷಣೆ ಸಿಗುತ್ತದೆ. ಇದಕ್ಕೆ ಟಿಡಿಬಿ ವಾರ್ಷಿಕ ರೂ.1.5 ಕೋಟಿ ಪ್ರೀಮಿಯಂ ಭರಿಸಲಿದೆ.