Rajyotsava Award: 3 ದಶಕಗಳ ನಾಟಿ ವೈದ್ಯಕೀಯ ಸೇವೆಗೆ ಸಂಶುದ್ದೀನ್ ಸಾಲ್ಮರಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ

Dakshina Kannada Rajyotsava Award: ಮೂರು ದಶಕಗಳ ನಾಟಿ ವೈದ್ಯಕೀಯ ಸೇವೆಗೆ ಸಂಶುದ್ದೀನ್ ಸಾಲ್ಮರ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Nov 5, 2026 - 15:59
Nov 5, 2026 - 15:59
Rajyotsava Award: 3 ದಶಕಗಳ ನಾಟಿ ವೈದ್ಯಕೀಯ ಸೇವೆಗೆ ಸಂಶುದ್ದೀನ್ ಸಾಲ್ಮರಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ

ಪುತ್ತೂರು: ಪಾರಂಪರ್ಯ ವೈದ್ಯಕೀಯ ಕ್ಷೇತ್ರದಲ್ಲಿ 3 ದಶಕಗಳಿಗೂ ಅಧಿಕ ಕಾಲ ನಿರಂತರ ಸೇವೆ ಸಲ್ಲಿಸುವ ಮೂಲಕ ಜನಮನ್ನಣೆ ಗಳಿಸಿರುವ ಪುತ್ತೂರಿನ ಪ್ರಸಿದ್ಧ ನಾಟಿ ವೈದ್ಯ, ಸಾಲ್ಮರ ಆಯುರ್ವೇದ ಸಂಸ್ಥೆಯ ಸಂಸ್ಥಾಪಕ & ಸಿಇಒ ಸಂಶುದ್ದೀನ್ ಸಾಲ್ಮರ, ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾರಂಪರ್ಯ ವೈದ್ಯಕೀಯ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಗಣನೀಯ ಸಾಧನೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ವೈದ್ಯಕೀಯ ಸೇವೆಯನ್ನು ಕೇವಲ ವೃತ್ತಿಯಾಗಿ ಪರಿಗಣಿಸದೆ, ಅದನ್ನು ಸಾಮಾಜಿಕ ಹೊಣೆಗಾರಿಕೆಯಾಗಿ ಸ್ವೀಕರಿಸಿರುವ ಸಂಶುದ್ದೀನ್ ಸಾಲ್ಮರ ಅವರು, ಕಳೆದ 30 ವರ್ಷಗಳಿಂದ ಪಾರಂಪರ್ಯ ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರೋಗಿಗಳ ನೋವು-ನಲಿವುಗಳಿಗೆ ಸ್ಪಂದಿಸುವ ಗುಣ, ವೃತ್ತಿಬದ್ಧತೆ, ಕಾರ್ಯಕ್ಷಮತೆ, ದೀರ್ಘಕಾಲದ ವೈದ್ಯಕೀಯ ಅನುಭವ ಹಾಗೂ ಸೇವಾ ಮನೋಭಾವ ಅವರ ಸಾಧನೆಯ ಪ್ರಮುಖ ಆಯಾಮಗಳಾಗಿವೆ.

ಸಾಲ್ಮರ ಮನೆತನದ ದಿವಂಗತ ಪಿ.ಎಸ್.ಅಹಮದ್ ಮತ್ತು ಆಯುಷಮ್ಮ ದಂಪತಿಯ ಪುತ್ರರಾದ ಸಂಶುದ್ದೀನ್ ಅವರು, ತಮ್ಮ ಅನುಭವ ಹಾಗೂ ಚಿಕಿತ್ಸಾ ಸೇವೆಯ ಮೂಲಕ ಪಾರಂಪರ್ಯ ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ರೂಪಿಸಿಕೊಂಡಿದ್ದಾರೆ. ಇವರು ಸ್ಥಾಪಿಸಿರುವ 'ಸಾಲ್ಮರ ಆಯುರ್ವೇದ ಹರ್ಬಲ್ಸ್' ಸಂಸ್ಥೆಯ ಮೂಲಕ ತಯಾರಾಗುವ ‘ಸಾಲ್ಮರ ಪೈಲೋಕೆರ್’ ಮೂಲವ್ಯಾಧಿ ಔಷಧಿಯು ಜನಪ್ರಿಯತೆ ಗಳಿಸಿದೆ. ವೈದ್ಯಕೀಯ ಸೇವೆಯ ಜೊತೆಗೆ, ಸಂಸ್ಥೆಯ ಬೆಳವಣಿಗೆಯ ಮೂಲಕ ಗ್ರಾಮೀಣ ಭಾಗದ ಹಲವರಿಗೆ ಉದ್ಯೋಗಾವಕಾಶ ಕಲ್ಪಿಸಿರುವುದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.

ಉಚಿತ ವೈದ್ಯಕೀಯ ಶಿಬಿರಗಳ ಮೂಲಕ ಸೇವೆಯ ವಿಸ್ತರಣೆ:

ವೈದ್ಯಕೀಯ ಸೇವೆ ಆರ್ಥಿಕವಾಗಿ ಹಿಂದುಳಿದವರಿಗೂ ತಲುಪಬೇಕು ಎಂಬ ಆಶಯದೊಂದಿಗೆ ನೂರಾರು ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಈ ಶಿಬಿರಗಳ ಮೂಲಕ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸುವುದರ ಜತೆಗೆ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯವನ್ನೂ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ರೋಗಿಗಳ ಸಮಸ್ಯೆಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಅವರ ಸೇವಾ ಮನೋಭಾವವೇ ಜನರ ವಿಶ್ವಾಸ ಗಳಿಸಲು ಪ್ರಮುಖ ಕಾರಣವಾಗಿದೆ.

ದೇಶದ ವಿವಿಧ ನಗರಗಳಿಗೆ ವಿಸ್ತರಿಸಿದ ಚಿಕಿತ್ಸಾ ಸೇವೆ:

ಸಂಸ್ಥೆಯ ವೈದ್ಯಕೀಯ ಸೇವೆಯನ್ನು ಪುತ್ತೂರಿನ ಗಡಿಗೆ ಸೀಮಿತಗೊಳಿಸದೆ, ದೇಶದ ವಿವಿಧ ನಗರಗಳಿಗೆ ವಿಸ್ತರಿಸಿರುವುದು ಗಮನಾರ್ಹ ಸಾಧನೆ. ಪ್ರಸ್ತುತ ನುರಿತ ಬಿಎಎಂಎಸ್ (BAMS) ವೈದ್ಯರ ತಂಡದ ಸಹಯೋಗದೊಂದಿಗೆ ಪುತ್ತೂರು, ಬೆಂಗಳೂರಿನ ರಾಜಾಜಿನಗರ, ಮುಂಬೈ, ಮಹಾರಾಷ್ಟ್ರದ ರಾಯಗಡ, ತಮಿಳುನಾಡಿನ ಚೆನ್ನೈ ಹಾಗೂ ಕೊಯಂಬತ್ತೂರು, ಕೇರಳದ ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ತಿರುವನಂತಪುರಂ ಸೇರಿದಂತೆ ವಿವಿಧ ನಗರಗಳಲ್ಲಿ ಸಾಲ್ಮರ ಆಯುರ್ಧಾಮ ಚಿಕಿತ್ಸಾ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಈ ಮೂಲಕ ಪಾರಂಪರ್ಯ ವೈದ್ಯಕೀಯ ಚಿಕಿತ್ಸಾ ಸೇವೆಯನ್ನು ವಿಶಾಲ ಜನಸಮುದಾಯಕ್ಕೆ ತಲುಪಿಸುವ ಪ್ರಯತ್ನ ಮುಂದುವರಿದಿದೆ.

ಕುಟುಂಬದ ಬೆಂಬಲದೊಂದಿಗೆ ಸಾಧನೆಯ ಪಯಣ: 

ಸಂಶುದ್ದೀನ್ ಸಾಲ್ಮರ ಅವರು, ಪತ್ನಿ ನುಷೆ ನುಶ್ರತ್ ಹಾಗೂ ಮಕ್ಕಳೊಂದಿಗೆ ಸಂತೃಪ್ತ ಕುಟುಂಬ ಜೀವನ ನಡೆಸುತ್ತಿದ್ದಾರೆ. ಹಿರಿಯ ಪುತ್ರ ಸಲಿತ್ ಝಿಯಾನ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ದ್ವಿತೀಯ ಪುತ್ರ ಸಹೇಲ್ ಜಾಹಾದ್ ಹೆಲ್ತ್ ಕೇರ್ ಮ್ಯಾನೇಜ್‌ಮೆಂಟ್ ಆ್ಯಂಡ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ತೃತೀಯ ಪುತ್ರ ಸಮೀಲ್ ಝಿಧಾನ್ ಆಯುರ್ವೇದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.

ಮೂರು ದಶಕಗಳ ಸುದೀರ್ಘ ಸೇವೆ, ಸಾವಿರಾರು ರೋಗಿಗಳಿಗೆ ಚಿಕಿತ್ಸಾ ನೆರವು, ಉಚಿತ ವೈದ್ಯಕೀಯ ಶಿಬಿರಗಳ ಮೂಲಕ ಸಾಮಾಜಿಕ ಕಳಕಳಿ ಹಾಗೂ ಪಾರಂಪರ್ಯ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ನೀಡಿದ ಕೊಡುಗೆಗಳು ಸಂಶುದ್ದೀನ್ ಸಾಲ್ಮರ ಅವರ ಸಾಧನೆಯ ಹಾದಿಯನ್ನು ಗುರುತಿಸುವಂತೆ ಮಾಡಿವೆ. ವೃತ್ತಿಪರ ನಿಷ್ಠೆ ಮತ್ತು ಮಾನವೀಯ ಸೇವೆಯನ್ನು ಗುರುತಿಸಿ ಲಭಿಸಿರುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಅವರ ಮೂರು ದಶಕಗಳ ಪರಿಶ್ರಮಕ್ಕೆ ಸಂದ ಮಹತ್ವದ ಗೌರವವಾಗಿದ್ದು, ಸಾಲ್ಮರ ಅವರ ಸೇವಾ ಪಯಣಕ್ಕೆ ಮತ್ತೊಂದು ಗರಿಮೆಯನ್ನು ತಂದುಕೊಟ್ಟಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.