ತನ್ನ ತಪ್ಪಿಗೆ ಜನರ ಮೇಲೆ ದರ ಏರಿಕೆಯ ಹೊರೆ ಹಾಕಿದ ಕಾಂಗ್ರೆಸ್: ವಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
R.Ashoka: ಸಾರಿಗೆ ನಿಗಮಗಳಿಗೆ ರೂ.5,650 ಕೋಟಿ ಬಾಕಯಿದ್ದು, ತನ್ನ ತಪ್ಪಿಗೆ ಜನರ ಮೇಲೆ ಕಾಂಗ್ರೆಸ್ ಸರ್ಕಾರ ದರ ಏರಿಕೆಯ ಹೊರೆ ಹಾಕಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ಹೇಳಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ರೂ.5,650.95 ಕೋಟಿ ಬಾಕಿ ಉಳಿಸಿಕೊಂಡಿದೆ. ಇದನ್ನು ನೀಡಿದ್ದರೆ ಬಸ್ ಟಿಕೆಟ್ ದರ ಏರಿಕೆ ಮಾಡುವ ಅಗತ್ಯವೇ ಇರಲಿಲ್ಲ. ಇದನ್ನು ಕೊಡದೆ ಜನರ ಮೇಲೆ ದರ ಏರಿಕೆಯ ಹೊರೆ ಹಾಕಲಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ (R.Ashoka) ಆಕ್ರೋಶ ಹೊರಹಾಕಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಘಲಕ್ ಸರ್ಕಾರಕ್ಕಿಂತ ಹೀನಾಯವಾದ ಕಾಂಗ್ರೆಸ್ ರಾಜ್ಯದ ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಸಿದೆ. ಈ ಮಟ್ಟಿಗಿನ ದರ ಏರಿಕೆಯನ್ನು ಯಾವುದೇ ಸರ್ಕಾರ ಈವರೆಗೆ ಮಾಡಿಲ್ಲ. ಮನಸೋ ಇಚ್ಛೆ ಹೆಚ್ಚಳ ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವಂತೆ ಸಾರಿಗೆ ಇಲಾಖೆಯಲ್ಲಿ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗುತ್ತಿದ್ದಾರೆ. ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿದ್ದರೂ, ಜನರ ಬದುಕಲ್ಲಿ ಕತ್ತಲಿನ ಆಚರಣೆಯಾಗಲಿದೆ. ಇದು ಜನರನ್ನು ಸುಲಿಗೆ ಮಾಡುವ ವಿಧಾನವಾಗಿದೆ. ಸುಮಾರು 40% ವರೆಗೂ ಟಿಕೆಟ್ ದರ ಏರಿಸಲಾಗಿದೆ ಎಂದರು.
ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ ಬಿಎಂಟಿಸಿಯಲ್ಲಿ ರೂ.12 ಇದ್ದು, ಈಗ ರೂ.18 ಆಗಿದೆ. ಮೆಜೆಸ್ಟಿಕ್‌ನಿಂದ ಯಶವಂತಪುರಕ್ಕೆ ರೂ.18 ಇದ್ದು, ಈಗ ರೂ.25 ಆಗಿದೆ. ಮೆಜೆಸ್ಟಿಕ್‌ನಿಂದ ಬನಶಂಕರಿಗೆ ರೂ.12, ಅತ್ತಿಬೆಲೆಗೆ ರೂ.12 ಜಾಸ್ತಿಯಾಗಿದೆ. ನೆಲಮಂಗಲ, ಕಾಡುಗೋಡಿಗೆ ರೂ.10 ಹೊಸಕೋಟೆಗೆ ರೂ.12 ಅಧಿಕಗೊಂಡಿದೆ. ವೇಗದೂತದಲ್ಲಿ ಬೆಂಗಳೂರು-ಕೋಲಾರಕ್ಕೆ ರೂ.19 ಹೆಚ್ಚಳ, ಬೆಂಗಳೂರು-ತುಮಕೂರು ರೂ.81 ಇದ್ದು, ಈಗ ರೂ.100 ಆಗಿದೆ. ಬೆಂಗಳೂರು-ಮಂಡ್ಯ ರೂ.110 ರಿಂದ 136, ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗುವವರಿಗೆ ಬೆಂಗಳೂರು-ಮೈಸೂರು ಟಿಕೆಟ್‌ನಲ್ಲಿ ರೂ.37 ಹೆಚ್ಚಳವಾಗಿದೆ. ಹಾಸನಾಂಬೆ ದರ್ಶನ ಪಡೆಯಲು ಹೋಗುವವರಿಗೆ ಬೆಂಗಳೂರು-ಹಾಸನಕ್ಕೆ ರೂ.51 ಜಾಸ್ತಿಯಾಗಿದೆ. ಚಿಕ್ಕಮಗಳೂರಿಗೆ ದತ್ತ ಪೀಠಕ್ಕೆ ಹೋಗುವವರಿಗೆ ಬೆಂಗಳೂರು-ಚಿಕ್ಕಮಗಳೂರಿಗೆ ರೂ.68 ಏರಿಕೆಯಾಗಿದೆ. ಹೀಗೆ ಕರಾಳವಾದ ದರಗಳನ್ನು ಹೇರಲಾಗಿದೆ. ಶಕ್ತಿ ಯೋಜನೆಯಡಿ ಉಚಿತ ಎಂದು ಹೇಳಿ ಈಗ ಹೊರೆ ಹಾಕಿದ್ದಾರೆ ಎಂದು ಹೇಳಿದರು.
ದರ ಏರಿಕೆ ಮಾಡಲು ಒಂದು ಕಾರಣ ಬೇಕು. ಆದರೆ ಇಲ್ಲಿ ಸಾಲ ಮಾಡಿರುವುದರಿಂದ ದರ ಏರಿಕೆ ಎನ್ನುತ್ತಿದ್ದಾರೆ. ಸಚಿವ ಬೈರತಿ ಸುರೇಶ್ ಸಾಲದಲ್ಲಿದ್ದೇವೆ ಎಂದಿದ್ದಾರೆ. ನಾನು ಸಾರಿಗೆ ಸಚಿವನಾಗಿದ್ದಾಗ ನಿಗಮಗಳು ಐದು ವರ್ಷ ಲಾಭದಲ್ಲಿತ್ತು. ಆಗ ಸ್ವಂತ ಹಣದಿಂದಲೇ 1,110 ಎಕರೆ ಜಮೀನು ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡಲಾಗಿತ್ತು. ಈಗ ಅದಕ್ಕೆ ರೂ.10,000 ಕೋಟಿ ಮೌಲ್ಯವಿದೆ. ನಾನು ಟಿಟಿಎಂಸಿ ಮಾಡಿದ್ದೆ. ಬಾಡಿಗೆಯಿಂದಲೇ ರೂ.40-50 ಕೋಟಿ ಬರುತ್ತಿತ್ತು ಎಂದು ತಿಳಿಸಿದರು.
ಸರ್ಕಾರದಿಂದ ಬಾಕಿ:
ರಾಜ್ಯ ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಈಗ ರೂ.5,650.95 ಕೋಟಿ ಬಾಕಿ ಬರಬೇಕಿದೆ. ಕೆಎಸ್‌ಆರ್‌ಟಿಸಿಗೆ ರೂ.2,943 ಕೋಟಿ ಎನ್‌ಡಬ್ಲ್ಯೂಕೆಆರ್‌ಟಿಸಿಗೆ ರೂ.1,306 ಕೋಟಿ, ಬಿಎಂಟಿಸಿಗೆ ರೂ.1,019 ಕೋಟಿ ಹಾಗೂ ಕೆಕೆಆರ್‌ಟಿಸಿಗೆ ರೂ.999 ಕೋಟಿ ಕೊಡಬೇಕಿದೆ. ಇಷ್ಟು ಹಣ ಕೊಟ್ಟಿದ್ದರೆ ದರ ಏರಿಕೆ ಮಾಡಬೇಕಿರಲಿಲ್ಲ. ಸರ್ಕಾರ ಮಾಡಿರುವ ತಪ್ಪಿಗೆ ಸಚಿವ ಸುರೇಶ್ ಜನರ ಮೇಲೆ ಹೊರೆ ಹೇರುತ್ತಿದ್ದಾರೆ. ನಮ್ಮಿಂದ ಹಣ ಕೊಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದ್ದರಿಂದಲೇ ಹೀಗೆ ಮಾಡಲಾಗಿದೆ. ದೇಶದಲ್ಲೇ ನಂ.1 ಎಂಬ ಹೆಸರು ಸಾರಿಗೆ ನಿಗಮಗಳಿಗೆ ಇತ್ತು. ಅಂತಹ ಸಂಸ್ಥೆಯನ್ನು ಕಾಂಗ್ರೆಸ್ ಹಾಳು ಮಾಡಿ ಬೀದಿಗೆ ತಂದಿದೆ ಎಂದರು.
ಸಾಲ ಪಡೆಯಲು ರೂ.2,000 ಕೋಟಿ ಗ್ಯಾರಂಟಿ ನೀಡಲಾಗಿದೆ. ಬಾಕಿ ಪಾವತಿ ಮಾಡಿದ್ದರೆ, ಈ ಗ್ಯಾರಂಟಿಯ ಅಗತ್ಯವೇ ಇರಲಿಲ್ಲ. ನೌಕರರಿಗೂ ಸಾರಿಗೆ ನಿಗಮಗಳಿಂದ ಬಾಕಿ ಇಟ್ಟುಕೊಳ್ಳಲಾಗಿದೆ. ಭವಿಷ್ಯ ನಿಧಿ ರೂ.2,901.53 ಕೋಟಿ ಬಾಕಿ ಹಾಗೂ ಇಂಧನ ಬಾಕಿ ರೂ.827.37 ಕೋಟಿಯಿದೆ. ಇತ್ತೀಚೆಗೆ ಬಸ್ ಚಲಾಯಿಸುತ್ತಿದ್ದಾಗ ಸ್ಟಿಯರಿಂಗ್ ಕಳಚಿಕೊಂಡು ಚಾಲಕನ ಕೈಗೆ ಬಂದಿತ್ತು. ಮತ್ತೊಂದು ಕಡೆ ಬಸ್‌ಗಳನ್ನು ಜನರೇ ತಳ್ಳಿದ್ದರು. ಹೆಡ್‌ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಹಾಕಿಕೊಂಡು ಬಸ್ ಚಲಾಯಿಸಿದ ಘಟನೆ ಕಲಬುರ್ಗಿಯ ಚಿಂಚೋಳಿ ಮಾರ್ಗದಲ್ಲಿ ನಡೆದಿತ್ತು ಎಂದು ಹೇಳಿದರು.
2026ರ ಮೇ ತಿಂಗಳಲ್ಲಿ, ಸಾರಿಗೆ ನಿಗಮಗಳ ಒಟ್ಟು ಹೊಣೆಗಾರಿಕೆ ರೂ.7,130.80 ಕೋಟಿ ಇತ್ತು. ಇದರಲ್ಲಿ ವೇತನ, ಪಿಎಫ್, ಗ್ಯಾಚ್ಯುಟಿ ಎಲ್ಲ ಸೇರಿದೆ. ಕೋವಿಡ್ ಸಮಯದಲ್ಲಿ ಎಲ್ಲ ಕಡೆ ನಷ್ಟ ಇದ್ದಿದ್ದರಿಂದ ಸಾರಿಗೆ ನಿಗಮಗಳಿಗೂ ನಷ್ಟವಾಗಿತ್ತು. ಅದನ್ನು ಹೊರತುಪಡಿಸಿ ಬಿಜೆಪಿ ಅವಧಿಯಲ್ಲಿ ಉಳಿದ ಸಮಯದಲ್ಲಿ ಸಂಪೂರ್ಣ ಲಾಭವಾಗಿದೆ ಎಂದು ತಿಳಿಸಿದರು.