ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು: ಪದವಿ ಪ್ರದಾನ ಕಾರ್ಯಕ್ರಮ

Vivekananda Engineering College: ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ಪದವಿ ಪ್ರದಾನ ಸಮಾರಂಭ ನಡೆಯಿತು.

Oct 29, 2026 - 11:03
ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು: ಪದವಿ ಪ್ರದಾನ ಕಾರ್ಯಕ್ರಮ

ಪುತ್ತೂರು: ಮಾನವನ ಜೀವನ ಎನ್ನುವುದು ಸ್ಪ್ರಿಂಟ್ ಅಲ್ಲ. ಅದೊಂದು ಮ್ಯಾರಥಾನ್ ಓಟ. ಇಲ್ಲಿ ನಮ್ಮ ಶಕ್ತಿಯ ಅರಿವಿಲ್ಲದೆ ಓಡಿದರೆ ಗುರಿಮುಟ್ಟದೇ ಇರುವ ಅಪಾಯವಿದೆ ಎಂದು ಮಣಿಪಾಲ್ ಟೆಕ್ನಾಲಜೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅಭಯ್ ಅನಂತ್ ಗುಪ್ತೆ ಹೇಳಿದರು.

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಚೆಗೆ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಿ. ಯಾವುದೇ ಕೆಲಸಮಾಡುವ ಮೊದಲು, ಅದರ ಬಗ್ಗೆ ಸಾಕಷ್ಟು ವಿಷಯಗಳನ್ನು ಅರಿತುಕೊಳ್ಳಿ. ಪದವಿ ಎನ್ನುವುದು ಆರಂಭ ಮಾತ್ರ, ನಿಮ್ಮ ಜ್ಞಾನವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಸದಾ ಹೊಸತನ್ನು ಕಲಿಯುವ ತುಡಿತ ನಿಮ್ಮಲ್ಲಿರಲಿ. ನೀವು ಈ ಸ್ಥಿತಿಗೆ ತಲಪುವುದಕ್ಕೆ ಕಾರಣರಾದ ಮಾತಾಪಿತರು, ಉಪನ್ಯಾಸಕರು ಹಾಗೂ ಕಲಿಸಿದ ಸಂಸ್ಥೆಯ ಸೇವೆಯನ್ನು ಸದಾ ಸ್ಮರಿಸಿಕೊಳ್ಳಿ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ ಮಾತನಾಡಿ, ನೀವೆಲ್ಲ ಪದವೀಧರರಾಗಿದ್ದೀರಿ. ಅದರೊಂದಿಗೆ ಸ್ಥಾನಮಾನಗಳು ದೊರೆತಿದೆ. ಭರವಸೆಯ ಯುವಕ ಯುವತಿಯರ ಕೈಯ್ಯಲ್ಲಿ ದೇಶ ಸುಭದ್ರವಾಗಿರುತ್ತದೆ ಎನ್ನುವ ಹಿರಿಯರ ಆಶಯದಂತೆ ಶ್ರೇಷ್ಟ ಸಮಾಜ ನಿರ್ಮಾಣ ಮಾಡುವ ಜವಾಬ್ಧಾರಿ ನಿಮಗಿದೆ ಎಂದರು. 

ಸಂಬಳ, ಉದ್ಯೋಗ ಮಾತ್ರ ಬದುಕಲ್ಲ. ಅದಕ್ಕಿಂತ ಆಚೆಯ ಜಗತ್ತು ಬೇರೆಯೇ ಇದೆ. ಹೆತ್ತವರ ಶ್ರಮ, ನೋವು ಸಮಾಜದ ನಿರೀಕ್ಷೆಗಳ ಬಗ್ಗೆ ಗಮನವಿರಲಿ. ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯಗಳಿಗೆ ಚ್ಯುತಿ ಬಾರದಂತೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಹೇಳಿದರು.

ಪ್ರತಿ ವಿಭಾಗದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ, ಅರ್ಹ  ವಿದ್ಯಾರ್ಥಿಗಳಿಗೆ ಪದವಿ ಪತ್ರವನ್ನು ನೀಡಲಾಯಿತು. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ 60 ವಿಶಿಷ್ಟ ಶ್ರೇಣಿ, 1 ಪ್ರಥಮ ಶ್ರೇಣಿ, ಡಾಟಾ ಸೈನ್ಸ್ ವಿಭಾಗದಲ್ಲಿ 55 ವಿಶಿಷ್ಟ ಶ್ರೇಣಿ, 4 ಪ್ರಥಮ ಶ್ರೇಣಿ, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 130 ವಿಶಿಷ್ಟ ಶ್ರೇಣಿ ಹಾಗೂ 4 ಪ್ರಥಮ ಶ್ರೇಣಿ, ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 19 ವಿಶಿಷ್ಟ ಶ್ರೇಣಿ, ಎಲೆಕ್ಟ್ರಾನಿಕ್ ವಿಭಾಗದಲ್ಲಿ 54 ವಿಶಿಷ್ಟ ಶ್ರೇಣಿ ಮತ್ತು 8 ಪ್ರಥಮ ಶ್ರೇಣಿ, ಮೆಕ್ಯಾನಿಕಲ್ ವಿಭಾಗದಲ್ಲಿ 13 ವಿಶಿಷ್ಟ ಶ್ರೇಣಿ ಹಾಗೂ 6 ಪ್ರಥಮ ಶ್ರೇಣಿ ಹೀಗೆ 354 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡರು.  

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರಮೇಶ್ಚಂದ್ರ, ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಡಿ ಕಲ್ಲಾಜೆ, ಸಂಚಾಲಕ ಪ್ರಸನ್ನ ದರ್ಬೆ, ನಿರ್ದೇಶಕ ಕೆ.ಸುಬ್ರಮಣ್ಯ ಭಟ್, ಆದಿತ್ಯ ಕಲ್ಲೂರಾಯ, ಮನೋಜ್ ಕುಮಾರ್, ಸುಜಿತ್ ಕುಮಾರ್, ರಕ್ಷಾ ಪ್ರಭು, ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್, ದಾಖಲಾತಿ & ನೇಮಕಾತಿ ವಿಭಾಗ ಮುಖ್ಯಸ್ಥ ಪ್ರೊ.ಗೈಟನ್ ಲೋಬೋ, ವಿಭಾಗ ಮುಖ್ಯಸ್ಥರುಗಳಾದ ಡಾ.ಶ್ರೀಕಾಂತ್ ರಾವ್ ಎಸ್.ಕೆ, ಡಾ.ದೀಪಕ್ ಕೆ.ಬಿ, ಡಾ.ರಾಧಿಕಾ ಶೆಟ್ಟಿ, ಪ್ರೊ.ಪ್ರಶಾಂತ, ಪ್ರೊ.ರೂಪಾ ಜಿ.ಕೆ, ಪ್ರೊ.ಪ್ರದೀಪ್ ಕುಮಾರ್ ಕೆ.ಜಿ, ಡಾ.ಶ್ವೇತಾಂಬಿಕಾ.ಪಿ, ಪ್ರೊ.ತೇಜಸ್ವಿನಿ ಎಲ್.ಪಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ.ಶ್ರೀನಿಧಿ ಎ, ಪ್ರೊ.ನಿಶಾ ಜಿ.ಆರ್ ಮುಖ್ಯ ಗ್ರಂಥಪಾಲಕ ದಿನೇಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ಸ್ವಾಗತಿಸಿದರು. ಪ್ರೊ.ಪ್ರದೀಪ್ ಕುಮಾರ್ ಕೆ.ಜಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪ್ರೊ.ರೂಪಾ ಜಿ.ಕೆ ವಂದಿಸಿದರು. ಪ್ರೊ.ಶೀತಲ್ ಎಸ್.ಕೆ ಹಾಗೂ ಪ್ರೊ.ಅನುಪಮಾ ಟಿ ಕಾರ್ಯಕ್ರಮ ನಿರ್ವಹಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.