KSRP ಕಾನ್ಸ್‌ಟೇಬಲ್ ಪರೀಕ್ಷೆ 25 ಅಂಕ: VAO ಪರೀಕ್ಷೆಯಲ್ಲಿ ‌151 ಅಂಕ.. ತನಿಖೆಗೆ ಆದೇಶ

Vao Exam: ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ‌ 25 ಅಂಕ ಪಡೆದಿದ್ದ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬ ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ, ‌151 ಅಂಕಗಳನ್ನು ಹೇಗೆ ಪಡೆದ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಕೆಇಎ ತನಿಖೆಗೆ ಆದೇಶಿಸಿದೆ.

Oct 29, 2026 - 12:15
Oct 29, 2026 - 12:16
KSRP ಕಾನ್ಸ್‌ಟೇಬಲ್ ಪರೀಕ್ಷೆ 25 ಅಂಕ: VAO ಪರೀಕ್ಷೆಯಲ್ಲಿ ‌151 ಅಂಕ.. ತನಿಖೆಗೆ ಆದೇಶ

ಬೆಂಗಳೂರು: ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್ ಪರೀಕ್ಷೆಯಲ್ಲಿ ಕೇವಲ‌ 25 ಅಂಕ ಪಡೆದಿದ್ದ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ, ‌151 ಅಂಕಗಳನ್ನು ಹೇಗೆ ಪಡೆದ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನಿಖೆಗೆ ಆದೇಶಿಸಿದೆ.

ಜಿಲ್ಲಾ ಪರೀಕ್ಷಾ ಮುಖ್ಯ ಅಧೀಕ್ಷಕರೂ ಆದ ಹಾವೇರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದೆ. ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರೂ ಲೋಪಗಳು ಆಗಿವೆಯೇ‌ ಎಂಬುದರ ಬಗ್ಗೆ ಸಿಸಿಟಿವಿ ವಿಡಿಯೊ ತುಣುಕುಗಳನ್ನು ನೋಡಿ, ಸಮಗ್ರವಾಗಿ ವಿಚಾರಣೆ ನಡೆಸಿ, ವರದಿ‌ ನೀಡಲು ಕೋರಲಾಗಿದೆ. ಅಗತ್ಯ ಬಿದ್ದರೆ‌ ಪೊಲೀಸರಿಗೆ ದೂರು ಕೊಡುವುದಕ್ಕೂ ಸೂಚಿಸಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ‌ಅ.4 ರಂದು ನಡೆದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯನ್ನು ಅದೇ ಜಿಲ್ಲೆಯ ಶಂಕರ ಬನ್ನೂರು ಎಂಬುವರು ಬರೆದಿದ್ದಾರೆ. ಇವರ ಶೈಕ್ಷಣಿಕ ಹಿನ್ನೆಲೆ ಕೂಡ ಹೇಳಿಕೊಳ್ಳುವಂತಿಲ್ಲ.‌ ಅಂತಹ ಮಾಮೂಲಿ ಅಭ್ಯರ್ಥಿ ಇಷ್ಟೊಂದು ಅಂಕ ಹೇಗೆ ಪಡೆದ? ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಸಿದ್ದಾರೆ. ಈ ಅನುಮಾನಗಳಿಗೆ‌ ಇತಿಶ್ರೀ ಹಾಡಲು ತನಿಖೆಯ ತೀರ್ಮಾನ ಮಾಡಲಾಗಿದೆ.

ಪ್ರಾಧಿಕಾರದಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ, ಅರ್ಜಿ ಹಾಕಿದ್ದ ಅಭ್ಯರ್ಥಿಯೇ‌ ಕೇಂದ್ರಕ್ಕೆ ಹೋಗಿ ಪರೀಕ್ಷೆ‌ ಬರೆದಿದ್ದಾರೆ. ಇದು ಮುಖ ಚಹರೆ ತಂತ್ರಜ್ಞಾನದ ಮೂಲಕ ದೃಢೀಕರಣ ಕೂಡ ಆಗಿದೆ. ಅಭ್ಯರ್ಥಿಗೆ ಕೊಟ್ಟಿರುವ ಒಎಂಅರ್ ಕೂಡ ಸರಿ ಇದೆ. ಅಲ್ಲದೆ ಅದೇ ಒಎಂಆರ್‌  ಅನ್ನು ಅ.5 ರಂದು ಸ್ಕ್ಯಾನ್ ಮಾಡಿ ಕೆಇಎ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಇದಾರಚೆಗೆ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಏನಾದರೂ ಲೋಪಗಳು ಆಗಿವೆಯೇ ಎಂಬುದನ್ನು ಅಲ್ಲಿನ ಜಿಲ್ಲಾಧಿಕಾರಿಯೇ‌ ಪರಿಶೀಲಿಸಿ ವರದಿ ನೀಡಬೇಕಾಗಿದೆ.

ಸದರಿ ಅಭ್ಯರ್ಥಿ‌ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವುದು‌ 2013ರಲ್ಲಿ. ಇದು  ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ‌ ಹಾಕಿದ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ‌ ದತ್ತಾಂಶದ ಜೊತೆಗೆ ಆನ್‌ಲೈನ್‌ನಲ್ಲಿ ಹೊಂದಾಣಿಕೆ ಆಗಿದೆ. ಅದರೆ ಕೆಎಸ್‌ಆರ್‌ಪಿ ಅರ್ಜಿಯಲ್ಲಿ ಇದೇ ಅಭ್ಯರ್ಥಿ ತಾನು ಉತ್ತೀರ್ಣನಾಗಿದ್ದು 2026ರಲ್ಲಿ ಎಂದು ತಿದ್ದುಪಡಿ‌ ಮಾಡಿಕೊಂಡಿರುವುದು ಪ್ರಾಧಿಕಾರದ ಸರ್ವರ್ ನಲ್ಲಿ ದಾಖಲಾಗಿದೆ.

ಕಷ್ಟಪಟ್ಟು ಓದುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗಬಾರದೆಂದು ನೂರಕ್ಕೆ ನೂರು ಪಾರದರ್ಶಕವಾಗಿ ಪರೀಕ್ಷೆ‌ ನಡೆಸುವ ಉದ್ದೇಶದಿಂದ ಪ್ರಾಧಿಕಾರವು ಕಳೆದೆರಡು ವರ್ಷಗಳಿಂದ ಒಎಂಆರ್ ಪ್ರತಿ ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಹಾಕುವುದು ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರ‌ ನಡುವೆಯೂ ಏನಾದರು ಲೋಪಗಳಿದ್ದರೆ ಅವುಗಳನ್ನು‌ ಬಯಲಿಗೆಳೆದು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಈ ತನಿಖೆ‌‌ ಸಹಕಾರಿಯಾಗಲಿದೆ. ಈ ಕಾರಣಕ್ಕೇ ತನಿಖೆಗೆ ಆದೇಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.