ರಾಮನಗರ: ಅಪ್ಪು ಸವಿನೆನಪಿನಲ್ಲಿ ನಾಳೆ ಅಪರೂಪದ ಸಂಗೀತ ಸಂಜೆ

Ramanagara: ನಾಳೆ ನಟ ಅಪ್ಪು ಸವಿನೆನಪಿನಲ್ಲಿ ಪರೂಪದ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿದೆ.

Oct 28, 2026 - 20:12
Oct 28, 2026 - 20:12
ರಾಮನಗರ: ಅಪ್ಪು ಸವಿನೆನಪಿನಲ್ಲಿ ನಾಳೆ ಅಪರೂಪದ ಸಂಗೀತ ಸಂಜೆ

ರಾಮನಗರ: ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನಗಲಿ ನಾಳೆಗೆ (ಅ.29) ಐದು ವರ್ಷಗಳು ಪೂರ್ಣಗೊಳ್ಳಲಿವೆ. ಐದು ವರ್ಷಗಳು ಕಳೆದರೂ ಅಪ್ಪು ಅವರ ನಗು, ಸರಳತೆ, ಕಲಾಸೇವೆ ಹಾಗೂ ಸಮಾಜಮುಖಿ ಕಾರ್ಯಗಳ ಸವಿನೆನಪು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇಂತಹ ಭಾವನಾತ್ಮಕ ಸಂದರ್ಭದಲ್ಲಿ ಅಪ್ಪು ಅವರ ಸವಿನೆನಪನ್ನು ಸಂಗೀತ, ಹಾಡು, ನೃತ್ಯ ಮತ್ತು ಮನರಂಜನೆಯ ಮೂಲಕ ಮರುಕಳಿಸುವ ವಿನೂತನ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ. 

ರಾಮನಗರ ವಿಭಾಗದ ಎಲ್ಲಾ ರೋಟರಿ ಸಂಸ್ಥೆ ಗಳು ಮತ್ತು ರೋಟರಿ ನಾಯಕರು ಈ ಕಾರ್ಯಕ್ರಮ ಗಳ ಸಾರಥ್ಯವಹಿಸಿದ್ದಾರೆ.
ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3191ರ 'ಫಾಲ್ಕನ್ಸ್' ಬಳಗದ ವತಿಯಿಂದ  ಅಕ್ಟೋಬರ್ 29ರಂದು ಗುರುವಾರ ಸಂಜೆ 4 ಗಂಟೆಗೆ ಬಿ.ಎಂ.ರಸ್ತೆಯ ಶಾಂತಿನಿಕೇತನ ಪಿಯು ಕ್ಯಾಂಪಸ್‌ನಲ್ಲಿ ಈ ವಿಶೇಷ ಸಂಗೀತ ಸಂಜೆ ನಡೆಯಲಿದೆ. 

ವರನಟ ಡಾ.ರಾಜ್‌ಕುಮಾರ್ ಹಾಗೂ ಡಾ.ಪುನೀತ್ ರಾಜ್‌ಕುಮಾರ್ ಅವರ ಸವಿನೆನಪುಗಳಿಗೆ ಸಮರ್ಪಿತವಾಗಿರುವ ಈ ಕಾರ್ಯಕ್ರಮದಲ್ಲಿ ಅಪ್ಪಾಜಿ ಮತ್ತು ಅಪ್ಪು ಅವರ ಜನಪ್ರಿಯ ಹಾಡುಗಳು, ಸಂಗೀತ ಹಾಗೂ ನೃತ್ಯದ ಮೂಲಕ ಕನ್ನಡದ ಸಾಂಸ್ಕೃತಿಕ ಅಭಿಮಾನವನ್ನು ಸಂಭ್ರಮಿಸಲಾಗುತ್ತದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜೂನಿಯರ್ ಡಾ.ರಾಜ್‌ಕುಮಾರ್ ಎಂದೇ ಗುರುತಿಸಿಕೊಂಡಿರುವ ಅಶೋಕ್ ಬಸ್ತಿ ಹಾಗೂ ಅವರ ಪುತ್ರ, ಜೂನಿಯರ್ ಪುನೀತ್ ರಾಜ್‌ಕುಮಾರ್ ಖ್ಯಾತಿಯ ರಾಘವೇಂದ್ರ ಬಸ್ತಿ ಅವರು ತಂದೆ-ಮಗನ ಜೋಡಿಯಾಗಿ ವಿಶೇಷ ಪ್ರದರ್ಶನ ನೀಡಲಿದ್ದಾರೆ. ಅಣ್ಣಾವ್ರು ಮತ್ತು ಅಪ್ಪು ಅವರ ಜನಪ್ರಿಯ ಹಾಡುಗಳು, ಅಭಿನಯಶೈಲಿ ಹಾಗೂ ವಿಶಿಷ್ಟ ಹಾವಭಾವಗಳನ್ನು ಮರುಸೃಷ್ಟಿಸುವ ಮೂಲಕ ಪ್ರೇಕ್ಷಕರನ್ನು ನೆನಪಿನ ಲೋಕಕ್ಕೆ ಕರೆದೊಯ್ಯಲಿದ್ದಾರೆ.

ಕಿರುತೆರೆ ಹಾಗೂ ಚಲನಚಿತ್ರಗಳ ನಟ, ನಿರೂಪಕ, ಕಾರ್ಯಕ್ರಮಗಳ ಆಯೋಜಕ ವೃತ್ತಿಯಲ್ಲಿ ಬಿಲ್ಡರ್, ಡೆವೆಲಪರ್ ಹಾಗೂ ಡಿಸ್ಟ್ರಿಕ್ಟ್ ಈವೆಂಟ್ಸ್ ಡೈರೆಕ್ಟರ್ ರೊ.ಡಾ.ನಾಗೇಶ್ವರ್ ವಿಜಾಪುರ್ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ರೊ.ಜಿ.ಕೃಷ್ಣ ಮತ್ತು ರೊ.ಹರೀಶ್ ಅವರ ಸಹಕಾರದೊಂದಿಗೆ ಫಾಲ್ಕನ್ಸ್ ಬಳಗ ಈ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಫಾಲ್ಕನ್ ಡಿಸ್ಟ್ರಿಕ್ಟ್ ಗವರ್ನರ್ ರೊ.ಅನಿಲ್ ಗುಪ್ತಾ, ಫಸ್ಟ್ ಲೇಡಿ ರೊ. ಸಂಗೀತಾ, ಪಿಡಿಜಿ ರೊ.ಆಶಾ ಪ್ರಸನ್ನಕುಮಾರ್, ಕ್ಲಬ್ ಸರ್ವಿಸ್ ಡೈರೆಕ್ಟರ್ ರೊ. ಅಶ್ವಿನಿ ಮಾಸ್ತಿ, ಡಿಜಿಎನ್ ರೊ.ಕುಮಾರಸ್ವಾಮಿ ಆರ್, ರೊ.ಸೌಮ್ಯಾ, ರೊ.ಜಿ.ಕೃಷ್ಣ, ರೊ.ಹರೀಶ್ ಸೇರಿದಂತೆ ರಾಮನಗರ ವಲಯದ ರೋಟರಿ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಲಾವಿದನನ್ನು ಸ್ಮರಿಸುವ ಸೇವಾ ಮನೋಭಾವ:

ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ತನ್ನ ವಿವಿಧ ಸಮಾಜಮುಖಿ ಸೇವಾ ಚಟುವಟಿಕೆಗಳ ಜೊತೆಗೆ ನಾಡಿನ ಕಲಾವಿದರನ್ನು ಸ್ಮರಿಸುವ ಅವರ ಸಾಧನೆಗಳನ್ನು ಗೌರವಿಸುವ ಹಾಗೂ ಜನರ ಮನದಲ್ಲಿ ಅವರ ನೆನಪುಗಳನ್ನು ಜೀವಂತವಾಗಿಡುವ ಇಂತಹ ಅಪರೂಪದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಅಪ್ಪು ಅವರ ಜನಪ್ರಿಯತೆ ಕೇವಲ ಬೆಳ್ಳಿತೆರೆಗೆ ಸೀಮಿತವಾಗಿಲ್ಲ. ಅವರ ಸರಳ ವ್ಯಕ್ತಿತ್ವ, ಮಾನವೀಯ ಗುಣಗಳು ಮತ್ತು ಸಮಾಜಸೇವೆಯ ಮೇಲಿನ ಕಾಳಜಿ ಇಂದಿಗೂ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿವೆ. ಕಲಾವಿದನಾಗಿ ಜನರ ಮನ ಗೆದ್ದಿದ್ದ ಅಪ್ಪು, ಸಮಾಜಮುಖಿ ಕಾರ್ಯಗಳ ಮೂಲಕವೂ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅಂತಹ ಮಹಾನ್ ಕಲಾವಿದನ ಸವಿನೆನಪಿನಲ್ಲಿ ಆಯೋಜಿಸಿರುವ ಈ ಸಂಗೀತ ಸಂಜೆ ಅಭಿಮಾನಿಗಳಿಗೆ ಭಾವನಾತ್ಮಕ ಅನುಭವ ನೀಡುವುದರ ಜೊತೆಗೆ ಕನ್ನಡದ ಸಾಂಸ್ಕೃತಿಕ ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಿದೆ.

ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3191ರ ಫಾಲ್ಕನ್ಸ್ ಬಳಗದ ಈ ವಿನೂತನ ಪ್ರಯತ್ನವು ಅಪ್ಪು ಅವರ ನೆನಪುಗಳನ್ನು ಸಂಗೀತದ ಮೂಲಕ ಮತ್ತೆ ಜೀವಂತಗೊಳಿಸುವುದರೊಂದಿಗೆ, ಕಲೆಯ ಮೂಲಕ ಸಮಾಜವನ್ನು ಬೆಸೆಯುವ ಸುಂದರ ವೇದಿಕೆಯಾಗಲಿದೆ. ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿರುವ ಅಪ್ಪಾಜಿ ಮತ್ತು ಅಪ್ಪು ಅವರ ಕಲಾಸಂಪತ್ತು ಹಾಗೂ ಸವಿನೆನಪುಗಳನ್ನು ಮುಂದಿನ ತಲೆಮಾರುಗಳಿಗೂ ಪರಿಚಯಿಸುವ ಈ ಕಾರ್ಯಕ್ರಮ, ರೋಟರಿ ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳಲ್ಲಿಯೂ ವಿಶೇಷ ಸ್ಥಾನ ಪಡೆಯುವ ನಿರೀಕ್ಷೆಯಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.